
ಪದವಿ ಪೂರ್ವ ಪರೀಕ್ಷಾ ಶುಲ್ಕ ಶೇ 50ರಷ್ಟು ಹೆಚ್ಚಳ ಮಾಡಿ ಆದೇಶ
ಬೆಂಗಳೂರು: ಪದವಿ ಪೂರ್ವ (ಪಿಯು) ಕೋರ್ಸ್‌ಗಳ ಪರೀಕ್ಷಾ ಶುಲ್ಕವನ್ನು ಶೇ 50ರಷ್ಟು ಹೆಚ್ಚಳ ಮಾಡಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
‘ಪರೀಕ್ಷಾ ನೋಂದಣಿ, ಪ್ರಾಯೋಗಿಕ ಪರೀಕ್ಷೆ, ಅಂಕಪಟ್ಟಿ, ಮರುಮೌಲ್ಯಮಾಪನ, ಅಂಕಗಳ ಮರು ಎಣಿಕೆ ಸೇರಿದಂತೆ ಎಲ್ಲ ಪ್ರಕಾರದ ಶುಲ್ಕದಲ್ಲೂ ಹೆಚ್ಚಳ ಮಾಡಲಾಗಿದೆ. ಹೊಸ ಆದೇಶ ಇದೇ 2026–27ನೇ ಸಾಲಿನಿಂದ ಅನ್ವಯವಾಗಲಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಸಲ್ಲಿಸಿದ ಪ್ರಸ್ತಾವದಂತೆ ಎಂಟು ವರ್ಷಗಳ ನಂತರ ಹೆಚ್ಚಳಕ್ಕೆ ಸಮ್ಮತಿ ನೀಡಲಾಗಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.
ಪ್ರಸ್ತುತ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆಯುವ ಎಲ್ಲ ವಿದ್ಯಾರ್ಥಿಗಳಿಗೂ ₹600 ಶುಲ್ಕ (ಇದುವರೆಗೆ ಇದ್ದ ಶುಲ್ಕ ₹400) ನಿಗದಿ ಮಾಡಲಾಗಿದೆ. ಪುನರಾವರ್ತಿತರಿಗೆ ಪ್ರತಿ ವಿಷಯಕ್ಕೆ ₹210 (₹140), ಎರಡು ವಿಷಯಗಳಿಗೆ ₹405 (₹270), ಮೂರು ಮತ್ತು ಅದಕ್ಕಿಂತ ಹೆಚ್ಚಿನ ವಿಷಯಗಳಿಗೆ ₹600 (₹400) ಹಾಗೂ ದಂಡ ಶುಲ್ಕ ₹75ರಿಂದ (₹50) ₹1,980 (1,320)ರವರೆಗೆ ನಿಗದಿ ಮಾಡಲಾಗಿದೆ.
ಪ್ರಾಯೋಗಿಕ ಪರೀಕ್ಷೆಯ ಪ್ರತಿ ವಿಷಯಕ್ಕೆ ₹165 (₹110), ಅಂಕಪಟ್ಟಿ ಶುಲ್ಕ ₹75 (50), ಪರೀಕ್ಷಾ ಕೇಂದ್ರ ಬದಲಾವಣೆಗೆ ₹3,000 (₹2,000), ಅಂಕಪಟ್ಟಿ ದ್ವಿತೀಯ ಪ್ರತಿ ₹2,400 (₹1,600), ಅಂಕಪಟ್ಟಿ ತೃತೀಯ ಪ್ರತಿ ₹4,755 (₹3,170), ತತ್ಕಾಲ್ ಮೂಲಕ ಅಂಕಪಟ್ಟಿ ಪಡೆಯಲು ₹11,880 (7,920) ಶುಲ್ಕ ನಿಗದಿ ಮಾಡಲಾಗಿದೆ.
ದ್ವಿತೀಯ ಪಿಯು ಅಂಕಪಟ್ಟಿ ಪರಿಶೀಲನೆಗೆ ಹೊಸದಾಗಿ ಶುಲ್ಕ ಪರಿಚಯಿಸಿದ್ದು, ₹2,000 ನಿಗದಿ ಮಾಡಲಾಗಿದೆ. ಪರೀಕ್ಷಾ ಅಂಕ ಸುಧಾರಣೆಗೆ ಪರೀಕ್ಷೆ ಬರೆಯುವವರು ₹262ರಿಂದ ₹525 ಭರಿಸಬೇಕಿದೆ.