
ತುಂಗಭದ್ರೆಯ ಒಳಹರಿವು ಶೂನ್ಯ: ನೀರು ಕಾಯ್ದಿಟ್ಟುಕೊಳ್ಳುವುದೇ ಸವಾಲು
ಮುಂಡರಗಿ: ತಾಲ್ಲೂಕಿನ ಹಮ್ಮಿಗಿ ಗ್ರಾಮದಲ್ಲಿರುವ ಶಿಂಗಟಾಲೂರ ಏತ ನೀರಾವರಿ ಯೋಜನೆಯ ಬ್ಯಾರೇಜಿಗೆ ತುಂಗಭದ್ರಾ ನದಿಯಿಂದ ಹರಿದು ಬರುತ್ತಿದ್ದ ಒಳಹರಿವು ಸೋಮವಾರ ಶೂನ್ಯಕ್ಕಿಳಿದಿದೆ. ಬ್ಯಾರೇಜಿನ ಎಲ್ಲ ಗೇಟ್‌ಗಳನ್ನು ಸೋಮವಾರ ಬಂದ್ ಮಾಡಲಾಗಿದ್ದು, ನದಿ ದಂಡೆಯ ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ನದಿಯ ಒಳಹರಿವು ಈ ವರ್ಷ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಮಳೆಗಾಲ ಪೂರ್ಣಗೊಳ್ಳುವ ಪೂರ್ವದಲ್ಲಿಯೇ ಎರಡನೆಯ ಬಾರಿ ತುಂಗಭದ್ರಾ ನದಿಯ ಒಳಹರಿವು ಶೂನ್ಯಕ್ಕಿಳಿದಿದೆ. ಈ ಹಿಂದೆ ಇಂತಹ ಸಂದರ್ಭ ಬಂದಿರಲಿಲ್ಲ.
ಮಲೆನಾಡು, ಶಿವಮೊಗ್ಗ ಹಾಗೂ ತುಂಗಭದ್ರಾ ಅಚ್ಚಕಟ್ಟು ಪ್ರದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮುಂಗಾರು ಮಳೆ ಸುರಿಯದ ಕಾರಣ ತುಂಗಭದ್ರಾ ನದಿ ನೀರಿನ ಒಳಹರಿವಿನಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. ಈ ವಾರ ಪ್ರಸ್ತತ ವರ್ಷದ ಮುಂಗಾರು ಮಳೆ ಮುಕ್ತಾಯವಾಗಲಿದ್ದು, ಇನ್ನುಮುಂದೆ ನದಿ ಪಾತ್ರಕ್ಕೆ ನೀರು ಹರಿದುಬರುವ ಸಾಧ್ಯತೆ ತುಂಬಾ ಕಡಿಮೆ ಎನ್ನಲಾಗಿದೆ.
ಸದ್ಯ ಹಮ್ಮಿಗಿ ಬ್ಯಾರೇಜಿನಲ್ಲಿ 1.9 ಟಿಎಂಸಿ ಅಡಿ ನೀರನ್ನು ಮಾತ್ರ ಸಂಗ್ರಹಿಸಿಕೊಳ್ಳಬಹುದಾಗಿದ್ದು, ಬಳ್ಳಾರಿ, ಗದಗ-ಬೆಟಗೇರಿ ಸೇರಿದಂತೆ ಜಿಲ್ಲೆಯ ವಿವಿಧ ಪಟ್ಟಣ ಹಾಗೂ ಗ್ರಾಮಗಳಿಗೆ ವರ್ಷದುದ್ದಕ್ಕೂ ಶುದ್ಧ ಕುಡಿಯುವ ನೀರು ಪೂರೈಸಬೇಕಿದೆ. ಹೀಗಾಗಿ, ಈಗ ಬ್ಯಾರೇಜಿನಲ್ಲಿ ಸಂಗ್ರಹವಾಗಿರುವ ನೀರನ್ನು ಬೇಸಿಗೆ ಮುಗಿಯುವವರೆಗೂ ಕಾಯ್ದುಕೊಳ್ಳುವ ಜವಾಬ್ದಾರಿ ಜಿಲ್ಲಾಡಳಿತದ್ದಾಗಿದೆ.
ಮುಂಡರಗಿ ತಾಲ್ಲೂಕಿನ ತುಂಗಭದ್ರಾ ನದಿ ದಂಡೆಯ ಗ್ರಾಮಗಳ ಬಹುತೇಕ ರೈತರು ನದಿ ನೀರು ನಂಬಿ, ಭತ್ತ, ಕಬ್ಬು, ಬಾಳೆ, ದಾಳಿಂಬೆ, ಪಪ್ಪಾಯಿ, ಸೂರ್ಯಕಾಂತಿ ಮೊದಲಾದ ಬೆಳೆಗಳನ್ನು ಬೆಳೆದಿದ್ದಾರೆ. ಮಳೆಗಾಲದಲ್ಲಿ ನದಿಯಲ್ಲಿ ಸಾಕಷ್ಟು ನೀರು ಇರುತ್ತದೆ ಎನ್ನುವ ಭರವಸೆಯಿಂದ ರೈತರು ಬಿತ್ತನೆ ಮಾಡಿದ್ದರು. ಈಗ ಬ್ಯಾರೇಜಿನ ಎಲ್ಲ ಗೇಟ್‌ಗಳನ್ನು ಬಂದ್ ಮಾಡಿರುವುದರಿಂದ ತುಂಗಭದ್ರಾ ನದಿ ಪಾತ್ರ ಸಂಪೂರ್ಣ ಬರಿದಾಗಲಿದ್ದು, ನದಿ ದಂಡೆಯ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
2025ರ ಸೆ.15ರಂದು ಬ್ಯಾರೇಜಿಗೆ 17,551 ಕ್ಯುಸೆಕ್, ಸೆ.16ರಂದು 14,726 ಕ್ಯುಸೆಕ್, ಸೆ.17ರಂದು 13,984 ಕ್ಯುಸೆಕ್, ಸೆ.18ರಂದು 12,430 ಕ್ಯುಸೆಕ್, ಸೆ.19ರಂದು 17,373 ಕ್ಯುಸೆಕ್, ಸೆ.20ರಂದು 14,796 ಕ್ಯುಸೆಕ್ ಹಾಗೂ ಸೆ.21ರಂದು 14,372 ಕ್ಯುಸೆಕ್ ನೀರು ಹರಿದು ಬಂದಿತ್ತು.
2026ರ ಸೆ.15ರಂದು 1,600 ಕ್ಯುಸೆಕ್, ಸೆ.16ರಂದು 1,200 ಕ್ಯುಸೆಕ್, ಸೆ.17ರಂದು 800 ಕ್ಯುಸೆಕ್, ಸೆ.18ರಂದು 700 ಕ್ಯುಸೆಕ್, ಸೆ.19ರಂದು 500 ಕ್ಯುಸೆಕ್, ಸೆ.20ರಂದು 400 ಕ್ಯುಸೆಕ್ ನೀರು ಹರಿದು ಬಂದಿದ್ದು, ಸೆ.21ರಂದು ಒಳಹರಿವು ಶೂನ್ಯಕ್ಕಿಳಿದಿದೆ.