ಮಾರುಕಟ್ಟೆಯಲ್ಲಿ ಸಿಗದ ಯೋಗ್ಯ ದರ: ಕುಂಬಳಕಾಯಿ ಬೆಳೆದ ರೈತನಿಗೆ ನಷ್ಟ

ಮಾರುಕಟ್ಟೆಯಲ್ಲಿ ಸಿಗದ ಯೋಗ್ಯ ದರ: ಕುಂಬಳಕಾಯಿ ಬೆಳೆದ ರೈತನಿಗೆ ನಷ್ಟ

ಮಾರುಕಟ್ಟೆಯಲ್ಲಿ ಸಿಗದ ಯೋಗ್ಯ ದರ: ಕುಂಬಳಕಾಯಿ ಬೆಳೆದ ರೈತನಿಗೆ ನಷ್ಟ

ಲಕ್ಷ್ಮೇಶ್ವರ: ಸಾಂಪ್ರದಾಯಿಕ ಬೆಳೆಗಳಾದ ಶೇಂಗಾ, ಜೋಳ, ಎಳ್ಳು, ಹೆಸರು, ಅಲಸಂದಿ ಬದಲು ಪರ್ಯಾಯ ಬೆಳೆ ಬೆಳೆಯಬೇಕೆಂಬ ಆಸೆಯಿಂದ ಕುಂಬಳಕಾಯಿ ಬೆಳೆದಿದ್ದ ರೈತ, ಯೋಗ್ಯ ದರ ಸಿಗದೆ ನಷ್ಟ ಅನುಭವಿಸಿದ್ದಾರೆ.

ತಾಲ್ಲೂಕಿನ ಶಿಗ್ಲಿ ಗ್ರಾಮದ ರೈತ ಕೃಷ್ಣ ಬಿದರಳ್ಳಿ ಅವರು ತಮ್ಮ 10 ಎಕರೆ ನೀರಾವರಿ ಆಶ್ರಿತ ಭೂಮಿ ಪೈಕಿ ಆರು ಎಕರೆಯಲ್ಲಿ ಕುಂಬಳಕಾಯಿ ಬೆಳೆದಿದ್ದಾರೆ. ದಾವಣಗೆರೆಯಿಂದ ಈಲ್ಡ್‌ಪ್ರೋ 169, ಎಫ್-1 ತಳಿಯ ಬೀಜಗಳನ್ನು ಖರೀದಿಸಿ ಮೂರು ತಿಂಗಳ ಹಿಂದೆ ನಾಟಿ ಮಾಡಿದ್ದರು. 100 ಗ್ರಾಂ ಬೀಜಕ್ಕೆ ₹700 ದರದಂತೆ ಒಟ್ಟು 44 ಪಾಕೀಟು ಬೀಜ ಖರೀದಿಸಿದ್ದರು.

ಭೂಮಿ ಹದಗೊಳಿಸಲು, ಬೀಜ, ಗೊಬ್ಬರ, ಕ್ರಿಮಿನಾಶಕ ಖರೀದಿ, ಕೃಷಿ ಕೂಲಿಕಾರರ ಸಂಬಳ, ಸಾಗಣೆ ವೆಚ್ಚ ಸೇರಿ ಒಟ್ಟು ₹2 ಲಕ್ಷ ಖರ್ಚು ಮಾಡಿದ್ದಾರೆ. ಆರು ಎಕರೆಯಲ್ಲಿ ಒಟ್ಟು 60 ಟನ್ ಇಳುವರಿ ಬಂದಿದೆ. ಒಂದು ವಾರದ ಹಿಂದೆಯೇ ಕುಂಬಳಕಾಯಿ ಬಲಿತು, ಕೊಯ್ಲಿಗೆ ಬಂದಿತ್ತು. ಆದರೆ, ಖರೀದಿದಾರರು ಬಾರದ ಕಾರಣ ಬಲಿತ ಕಾಯಿಗಳು ಬಿಸಿಲಿಗೆ ಒಣಗಿದ್ದು, 10 ಟನ್‍ನಷ್ಟು ಇಳುವರಿ ಕುಸಿತವಾಗಿದೆ.

ಒಂದು ಕೆ.ಜಿ ಕುಂಬಳಕಾಯಿಗೆ ₹10 ದರ ಸಿಗಬಹುದೆಂದು ಕೃಷ್ಣ ಅವರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಕೆ.ಜಿಗೆ ₹3 ದರವಿದ್ದು, ಹಾಕಿದ್ದ ಬಂಡವಾಳವೂ ಬಾರದ ಸ್ಥಿತಿ ಎದುರಿಸಬೇಕಿದೆ.

‘ಕೃಷ್ಣ ಅವರ ಕುಂಬಳಕಾಯಿ ತೋಟಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ರೈತರು ಮಾರುಕಟ್ಟೆಯನ್ನು ಗಮನದಲ್ಲಿ ಇಟ್ಟುಕೊಂಡು ಬೆಳೆ ಬೆಳೆಯಬೇಕು. ಬರಗಾಲದಿಂದ ಹಾನಿ ಆಗಿದ್ದರೆ ಮಾತ್ರ ಪರಿಹಾರ ಕೊಡಿಸಲು ಸಾಧ್ಯವಿದೆ. ಪ್ಲಾಸ್ಟಿಕ್ ಮಲ್ಚಿಂಗ್ ಮಾಡಿದ್ದರೆ ಮತ್ತು ಹನಿ ನೀರಾವರಿ ಅಳವಡಿಸಿಕೊಂಡಿದ್ದರೆ ಇಲಾಖೆ ವತಿಯಿಂದ ಸಬ್ಸಿಡಿ ನೀಡಲು ಅವಕಾಶ ಇದೆ’ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಅಜುರುದ್ದೀನ್ ಗುಳೇದಗುಡ್ಡ ತಿಳಿಸಿದರು.

ಪ್ರಕರಣ ದಾಖಲಿಸಲು ನಿರ್ಧಾರ

‘ಇತರೆ ರೈತರು ಬೆಳೆದಿದ್ದ ಕುಂಬಳಕಾಯಿ ಬೆಳೆಯನ್ನು ವೀಕ್ಷಿಸಿ ಕುಂಬಳಕಾಯಿ ಕೃಷಿ ಕೈಗೊಂಡೆ. ಅವರು ಫಸಲನ್ನು ಪಶ್ಚಿಮ ಬಂಗಾಳದ ವ್ಯಾಪಾರಿಗೆ ಮಾರಾಟ ಮಾಡಿದ್ದಾರೆ. ನಾನು ಇದೇ ಮೊದಲ ಸಲ ಕುಂಬಳಕಾಯಿ ಬೆಳೆದಿದ್ದೇನೆ. ನಾನು ಬೆಳೆದ ಕುಂಬಳಕಾಯಿಗೆ ತಳಿಗೆ ಬೇಡಿಕೆ ಕಡಿಮೆ. ಬೀಜ ಮಾರಾಟ ಕಂಪನಿಯವರು ಈ ವಿಷಯ ನನಗೆ ತಿಳಿಸಿಲ್ಲ. ಇದರಿಂದಾಗಿ ಉತ್ತಮ ಬೆಲೆ ಸಿಕ್ಕಿಲ್ಲ. ಕಂಪನಿ ವಿರುದ್ಧ ಪ್ರಕರಣ ದಾಖಲಿಸಿಲು ನಿರ್ಧರಿಸಿದ್ದೇನೆ’ ಎಂದು ರೈತ ಕೃಷ್ಣ ಬಿದರಳ್ಳಿ ತಿಳಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ