
ಚಿಕ್ಕಬಳ್ಳಾಪುರ: ಡಿ.ಸಿ ಕಚೇರಿ ಎಫ್‌ಡಿಎ ಮನೆಗಳ ಮೇಲೆ ಲೋಕಾಯುಕ್ತ ದಾಳಿ
ಚಿಕ್ಕಬಳ್ಳಾಪುರ: ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಮೇಲೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ದರ್ಶನ್ ಗೌಡ ಜೆ. ಅವರ ನಿವಾಸ ಮತ್ತು ಅವರ ಸಂಬಂಧಿಕರ ನಿವಾಸಗಳ ಮೇಲೆ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರು ಕೆಲಸ ನಿರ್ವಹಿಸುತ್ತಿರುವ ಕಚೇರಿ, ಬೆಂಗಳೂರಿನ ಆರು ಮನೆಗಳು ಮತ್ತು ತುರುವೇಕೆರೆ ತಾಲ್ಲೂಕಿನ ನಿವಾಸ ಸೇರಿ 8 ಕಡೆ ದಾಳಿ ನಡೆದಿದೆ.
ಬೆಂಗಳೂರಿನ ಬಾಗಲಗುಂಟೆಯ ಸೌಂದರ್ಯ ಬಡಾವಣೆಯಲ್ಲಿನ ಎರಡು ಮನೆಗಳು, ಮಲ್ಲಸಂದ್ರದಲ್ಲಿನ ಎರಡು ಮನೆಗಳು, ಹೆಸರಘಟ್ಟದ ಸೋಲದೇವನಹಳ್ಳಿಯಲ್ಲಿನ ಒಂದು ಮನೆ, ತುಮಕೂರು ಜಿಲ್ಲೆಯ ತುರುವೇಕರೆ ತಾಲ್ಲೂಕು ವಡನಘಟ್ಟದಲ್ಲಿನ ಅವರ ಮಾವನ ಮನೆಯ ಮೇಲೆ ದಾಳಿ ನಡೆದಿದೆ.
ದರ್ಶನ್ ಗೌಡ ಅವರ ಆದಾಯದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಆದಾಯಕ್ಕಿಂತಲೂ ಆಸ್ತಿಯು ಶೇ 138.22ರಷ್ಟು ಹೆಚ್ಚಿದೆ ಎಂದು ಲೋಕಾಯುಕ್ತ ಪೊಲೀಸ್ ಮೂಲಗಳು ತಿಳಿಸಿವೆ.
ಚಿಕ್ಕಬಳ್ಳಾಪುರ ಜಿಲ್ಲಾ ಲೋಕಾಯುಕ್ತ ಎಸ್‌ಪಿ ಶಿವಕುಮಾರ್ ನೇತೃತ್ವದ ತಂಡದಿಂದ ಈ ದಾಳಿಗಳು ನಡೆದಿವೆ.