ಹುಬ್ಬಳ್ಳಿ ಎಟಿಎಂ ಯಂತ್ರ ಕಳವು ಪ್ರಕರಣ; ಆರೋಪಿಗಳ ಸೆರೆಗೆ ತಂಡ ರಚನೆ
ಹುಬ್ಬಳ್ಳಿ: ತಾಲ್ಲೂಕಿನ ಸುಳ್ಳ ಹಾಗೂ ಬ್ಯಾಹಟ್ಟಿ ಗ್ರಾಮಗಳಲ್ಲಿ ಗುರುವಾರ ನಡೆದ ಎರಡು ಎಟಿಎಂ ಯಂತ್ರಗಳನ್ನು ನಾಲ್ಕು ಮಂದಿ ಸೇರಿ ಕಳವು ಮಾಡಿರುವ ಶಂಕೆಯಿದ್ದು, ಈ ಕುರಿತು ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಿ ಆರೋಪಿಗಳನ್ನು ಬಂಧಿಸಲು ಪೊಲೀಸರು ಯೋಜನೆ ರೂಪಿಸಿದ್ದಾರೆ.
‘ಎಟಿಎಂ ಯಂತ್ರ ಕಳವು ಪ್ರಕರಣದ ತನಿಖೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದಾರೆ. ಡಿವೈಎಸ್‌ಪಿ ನೇತೃತ್ವದಲ್ಲಿ ಇಬ್ಬರು ಪೊಲೀಸ್ ಇನ್‌ಸ್ಪೆಕ್ಟರ್, ಪಿಎಸ್‌ಐ ಹಾಗೂ ಸಿಬ್ಬಂದಿ ತಂಡದಲ್ಲಿ ಇದ್ದಾರೆ’ ಎಂದು ಗ್ರಾಮೀಣ ಠಾಣೆ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ತಿಳಿಸಿದರು.
‘ಘಟನಾ ಸ್ಥಳಕ್ಕೆ ಭೇಟಿ ನೀಡಿ ಸಿಸಿಟಿವಿ ಕ್ಯಾಮೆರಾ ಸೇರಿದಂತೆ ತಾಂತ್ರಿಕ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ. ಆರೋಪಿಗಳು ಮುಖಕ್ಕೆ ಮಾಸ್ಕ್ ಧರಿಸಿದ್ದು, ಇಬ್ಬರು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದಾರೆ. ಆರೋಪಿಗಳನ್ನು ಪತ್ತೆಗೆ ಗ್ರಾಮದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆಯೂ ನಡೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಪೂರ್ವ ನಿಯೋಜಿತ ಕೃತ್ಯ: ‘ಛಬ್ಬಿ ಗ್ರಾಮದ ಗಣೇಶನ ವಿಸರ್ಜನೆಯ ಬಂದೋಬಸ್ತ್‌ನಲ್ಲಿದ್ದ ಪೊಲೀಸರು ನಿರತರಾಗಿದ್ದರು. ಇದನ್ನು ಅರಿತಿದ್ದ ಕಳ್ಳರು ಈ ಕೃತ್ಯ ಮಾಡಿದ್ದಾರೆ. ಕಳವು ಮುನ್ನ ಎರಡು ಗ್ರಾಮದ ಬ್ಯಾಂಕ್ ಹಾಗೂ ಎಟಿಎಂ ಕೇಂದ್ರಗಳ ಕುರಿತು ಮಾಹಿತಿ ಪಡೆದಿರುವ ಸಾಧ್ಯತೆ’ ಎಂದು ಹೇಳಿದರು.
‘ಆರೋಪಿಗಳು ಕಳವು ಮಾಡುವ ಮುನ್ನ ಈ ಗ್ರಾಮಕ್ಕೆ ಭೇಟಿ ನೀಡಿದ್ದರೇ? ಈ ಕುರಿತು ಸಿಸಿಟಿವಿ ದೃಶ್ಯಾವಳಿಗನ್ನು ಸಂಗ್ರಹಿಸಲಾಗುತ್ತಿದೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ ಆರ್ಯ ತಿಳಿಸಿದ್ದಾರೆ.
ಹುಬ್ಬಳ್ಳಿ: ಪತ್ನಿಗೆ ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡಿದ ಆರೋಪದ ಮೇಲೆ ನಗರದ ಡಾಲರ್ಸ್ ಕಾಲೊನಿಯ ನಿವಾಸಿ ಸಿದ್ಧಪ್ಪ ಇಟ್ನಾಳ್ ವಿರುದ್ಧ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಸಿದ್ಧಪ್ಪ ಅವರು ಪತ್ನಿ ಕವಿತಾ ಅವರ ಮೇಲೆ ಸಂಶಯ ವ್ಯಕ್ತಪಡಿಸಿ, ಮಾನಸಿಕ ಹಾಗೂ ದೈಹಿಕ ಹಲ್ಲೆ ನಡೆಸುತ್ತಿದ್ದರು. ಕಳೆದ ಬುಧವಾರ ಆರೋಪಿ ಸಿದ್ಧಪ್ಪ, ಪತ್ನಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೋಳಿ ತುಂಬುವ ಟ್ರೇ ಕಳವು: ಹಳೇ ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿರುವ ಭಾರತ್ ಪೆಟ್ರೋಲ್ ಬಂಕ್‌ನಲ್ಲಿ ನಿಲುಗಡೆ ಮಾಡಿದ್ದ ವಾಹನದಲ್ಲಿನ ₹90 ಸಾವಿರ ಮೌಲ್ಯದ 30 ಕೋಳಿ ತುಂಬುವ ಟ್ರೇಗಳನ್ನು ಕಳವು ಮಾಡಲಾಗಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.