ಕಾರವಾರ: ಗಣೇಶೋತ್ಸವ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಡಿಜೆ ಬಳಕೆ

ಕಾರವಾರ: ಗಣೇಶೋತ್ಸವ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಡಿಜೆ ಬಳಕೆ

ಕಾರವಾರ: ಗಣೇಶೋತ್ಸವ ಮೆರವಣಿಗೆಯಲ್ಲಿ ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಡಿಜೆ ಬಳಕೆ

ಕಾರವಾರ: ‘ಗಣೇಶೋತ್ಸವ ಮೆರವಣಿಗೆಯಲ್ಲಿ ಡಿಜೆ ಬಳಕೆ ಮಾಡಬಾರದು’ ಎಂದು ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ಜಿಲ್ಲಾಕೇಂದ್ರವೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಉಲ್ಲಂಘನೆಯಾಗಿದೆ.

‘75 ಡೆಸಿಬೆಲ್ ಮೀರಿದ ಶಬ್ಧ ವೃದ್ಧಿಸುವ ಸಾಧನಗಳಾದ ಡಿಜೆ ವ್ಯವಸ್ಥೆಗಳು, ಬೇಸ್ ಬೂಸ್ಟರ್‌ಗಳು, ಮೊಬೈಲ್ ಡಿಜೆ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತಿದೆ. ಜನವಸತಿ ಪ್ರದೇಶಗಳು, ಆಸ್ಪತ್ರೆ, ಶಾಲೆ, ನ್ಯಾಯಾಲಯ ಹಾಗೂ ಧಾರ್ಮಿಕ ಸ್ಥಳಗಳಿಂದ 100 ಮೀಟರ್ ವ್ಯಾಪ್ತಿಯೊಳಗಿನ ಪ್ರದೇಶಗಳಲ್ಲಿ ಡಿಜೆ ಅಥವಾ ಹೆಚ್ಚಿನ ಶಬ್ದ ಸಾಧನಗಳ ಬಳಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ’ ಎಂದು ಜಿಲ್ಲಾಧಿಕಾರಿ ಸೆ.10ರಂದು ಆದೇಶಿಸಿದ್ದರು.

ಆದರೆ, ಕಾರವಾರ, ಶಿರಸಿ, ಕುಮಟಾ, ಮುಂಡಗೋಡ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ಗಣೇಶಮೂರ್ತಿಗಳ ವಿಸರ್ಜನೆ ಮೆರವಣಿಗೆ ವೇಳೆ ಡಿಜೆ ಬಳಕೆ ನಡೆಯಿತು. ಗ್ರಾಮೀಣ ಪ್ರದೇಶಗಳಲ್ಲಿಯೂ ಡಿಜೆ ಬಳಕೆ ಎಗ್ಗಿಲ್ಲದೆ ನಡೆದಿತ್ತು.

‘ಡಿಜೆ ಬಳಕೆ ನಿಷೇಧ ಕೇವಲ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಡೆಸಿದ ಸಭೆಗಳಲ್ಲಿ ಸೂಚನೆಗಷ್ಟೆ ಸೀಮಿತವಾಗಿದೆ. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಯು ವಸತಿ ಪ್ರದೇಶಗಳಲ್ಲಿ ಹಗಲಿನ ವೇಳೆ ಗರಿಷ್ಠ 55 ಡೆಸಿಬಲ್, ವಾಣಿಜ್ಯ ಪ್ರದೇಶದಲ್ಲಿ 65 ಡೆಸಿಬಲ್ ಶಬ್ದದ ಮಿತಿ ಮಾತ್ರ ಆರೋಗ್ಯಕರ. ರಾತ್ರಿ ವೇಳೆ ಈ ಪ್ರಮಾಣ 45 ಡಿಸೆಬಲ್‌ಗಿಂತ ಕಡಿಮೆ ಇರಬೇಕು ಎಂದು ತಿಳಿಸುತ್ತಿದೆ. ಈ ನಿಯಮಗಳನ್ನು ಗಾಳಿಗೆ ತೂರಿ ಗಣೇಶೋತ್ಸವ ಸಮಿತಿಗಳು ಡಿಜೆ ಬಳಕೆ ಮಾಡಿವೆ’ ಎಂದು ಕುಮಟಾದ ಸಾಮಾಜಿಕ ಕಾರ್ಯಕರ್ತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

‘ಕೋವಿಡ್ ಮಹಾಮಾರಿ ಹರಡಿದ ಬಳಿಕ ಈಚಿನ ನಾಲ್ಕೈದು ವರ್ಷಗಳಲ್ಲಿ ಹೃದಾಯಾಘಾತಕ್ಕೆ ತುತ್ತಾದವರ ಸಂಖ್ಯೆ ಹೆಚ್ಚಿದೆ. ಹೃದಯ ಸಂಬಂಧಿ ಕಾಯಿಲೆ ಇದ್ದವರು, ಚಿಕ್ಕ ಮಕ್ಕಳು ಅತಿ ಶಬ್ದದಿಂದ ಅನಾರೋಗ್ಯಕ್ಕೆ ತುತ್ತಾಗುವ ಆತಂಕ ಇದೆ. ಇಂತಹ ಅಪಾಯದ ಸನ್ನಿವೇಶದ ನಡುವೆಯೂ, ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಆದೇಶ ಉಲ್ಲಂಘನೆಯಾಗಿದೆ’ ಎಂದು ಅವರು ದೂರಿದರು.

‘ಮೆರವಣಿಗೆ ಸಾಗುವ ಕೇವಲ ಮೂರು ನಾಲ್ಕು ತಾಸಿಗೆ ಮಾತ್ರ ಡಿಜೆ ಬಳಕೆಯಾಗುತ್ತದೆ. ಒಂದೇ ಕಡೆ ನಿಲ್ಲದೆ ಸಂಚರಿಸುವುದರಿಂದ ಹೆಚ್ಚಿನ ಜನರಿಗೆ ಸಮಸ್ಯೆ ಆಗದು. ಆದರೆ, ಡಿಜೆ ಬಳಸದಂತೆ ಎಚ್ಚರಿಸುವ ಅಧಿಕಾರಿಗಳು ನಡೆಸುವ ಕರಾವಳಿ ಉತ್ಸವದ ವೇಳೆ ಹೆಚ್ಚು ಡೆಸಿಬಲ್‌ ಧ್ವನಿವರ್ಧಕ ಹಲವು ತಾಸು ಬಳಕೆ ಮಾಡುತ್ತಾರೆ. ನಾವು ಬಳಸಿದರೆ ತಪ್ಪೇನು?’ ಎಂದು ನಗರದ ಗಣೇಶೋತ್ಸವ ಸಮಿತಿಯ ಪ್ರಮುಖರೊಬ್ಬರು ಪ್ರಶ್ನಿಸಿದರು.

ಆದೇಶ ಉಲ್ಲಂಘನೆಯಾದರೂ ಕ್ರಮ ಜರುಗಿಸದ ಕುರಿತು ಪ್ರತಿಕ್ರಿಯೆಗೆ ಜಿಲ್ಲಾಧಿಕಾರಿ ಸಂಪರ್ಕಕ್ಕೆ ಸಿಕ್ಕಿಲ್ಲ.

‘ಹದಗೆಟ್ಟಿದ್ದ ಮಕ್ಕಳ ಆರೋಗ್ಯ’

‘ಡಿಜೆಗಳ ಜೊತೆಗೆ ಬಳಕೆ ಮಾಡುವ ಲೇಸರ್‌ಗಳಿಂದ ಮಕ್ಕಳ ಕಣ್ಣಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಕಳೆದ ವರ್ಷ ಕಾರವಾರದಲ್ಲಿ ನಡೆದ ಮೆರವಣಿಗೆಗಳಲ್ಲಿ ಲೇಸರ್ ಬೆಳಕಿನ ಸಮೀಪದಲ್ಲೇ ನರ್ತಿಸಿದ್ದ ಹಲವು ಮಕ್ಕಳು, ಯುವಕರು ಕಣ್ಣಿನ ತೊಂದರೆ ಎದುರಿಸಿ, ಚಿಕಿತ್ಸೆ ಪಡೆದಿದ್ದರು. ಈ ಬಾರಿಯೂ ತಪ್ಪುಗಳನ್ನು ಮರುಕಳಿಸಲಾಗಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸೂರಜ್ ನಾಯ್ಕ ಬೇಸರಿಸಿದರು.

‘ಅತಿಯಾದ ಶಬ್ದದಿಂದ ಸುತ್ತಲಿನ ಜನರ ಆರೋಗ್ಯ, ನಿದ್ದೆ ಮತ್ತು ನೆಮ್ಮದಿಗೆ ತೊಂದರೆ ಉಂಟಾದಾಗ ಅದನ್ನು ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ಪರಿಗಣಿಸುವುದು ಅಗತ್ಯ. ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕ್ರಮವಹಿಸಬೇಕು’ ಎಂಬುದು ಶಿರಸಿಯ ಹಿರಿಯ ವೈದ್ಯ ಡಾ.ರವಿಕಿರಣ ಪಟವರ್ಧನ್ ಅವರ ಸಲಹೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ