
ಸರ್.ಎಂ.ವಿ ಜನ್ಮಸ್ಥಳ; ಶಿಲ್ಪಕಲಾ ಉದ್ಯಾನ, ಹೊಸ ವಸ್ತು ಸಂಗ್ರಹಾಲಯಕ್ಕೆ ಯೋಜನೆ
ಚಿಕ್ಕಬಳ್ಳಾಪುರ: ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರು ಚಿಕ್ಕಬಳ್ಳಾಪುರದ ಹೆಮ್ಮೆಯ ಪುತ್ರರತ್ನ. ತಾಲ್ಲೂಕಿನ ಮುದ್ದೇನಹಳ್ಳಿಯ ಅವರ ನಿವಾಸ, ಸಮಾಧಿ ಮತ್ತು ವಸ್ತುಸಂಗ್ರಹಾಲಯಕ್ಕೆ ರಾಜ್ಯದ ವಿವಿಧ ಭಾಗಗಳ ಗಣ್ಯರು, ವಿದ್ಯಾರ್ಥಿಗಳು ನಿತ್ಯ ಭೇಟಿ ನೀಡುವರು. ಇದು ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳವೂ ಆಗಿದೆ.
ಮುದ್ದೇನಹಳ್ಳಿಯ ಸರ್.ಎಂ ವಿ ಅವರ ಸ್ಮಾರಕ ಮತ್ತು ವಸ್ತುಸಂಗ್ರಹಾಲಯವನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಸರ್.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಮುಂದಾಗಿದೆ. ಸೆ.15ರಂದು ಸರ್.ಎಂ.ವಿ ಅವರ ಜನ್ಮದಿನವೂ ಇದೆ. ಅಂದು ದೇಶದಾದ್ಯಂತ ಎಂಜಿನಿಯರ್ಸ್ ಡೇ ಸಂಭ್ರಮ. ಈ ಸಂಭ್ರಮ ಇಮ್ಮಡಿಗೊಳಿಸಲು ಸರ್.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್, ಸರ್.ಎಂ.ವಿ ಹೆಸರಿನಲ್ಲಿ ಹೊಸ ವಸ್ತು ಸಂಗ್ರಹಾಲಯ ಮತ್ತು ಶಿಲ್ಪಕಲಾ ಉದ್ಯಾನ ನಿರ್ಮಾಣಕ್ಕೆ ಹೆಜ್ಜೆ ಇಟ್ಟಿದೆ.
ಈ ಸಂಬಂಧ ನೀಲನಕ್ಷೆಗಳು, ಯೋಜನೆಗಳು ಸಹ ಸಿದ್ಧವಾಗುತ್ತಿವೆ. ಟ್ರಸ್ಟ್ ಯೋಜಿಸಿದಂತೆ ಆದರೆ 2026ರಲ್ಲಿ ಈ ಯೋಜನೆಗಳಿಗಳಿಗೆ ಅಡಿಗಲ್ಲು ಬೀಳಲಿದೆ. ಎರಡು ಮೂರು ವರ್ಷಗಳಲ್ಲಿ ಹೊಸ ವಸ್ತು ಸಂಗ್ರಹಾಲಯ ತಲೆ ಎತ್ತಲಿದೆ. ಇಲ್ಲಿ ಸರ್.ಎಂ.ವಿ ಅವರಿಗೆ ಸಂಬಂಧಿಸಿದ ಮತ್ತಷ್ಟು ಚಿತ್ರಗಳು, ವಿಷಯಗಳು ಸಾರ್ವಜನಿಕರ ಪ್ರದರ್ಶನಕ್ಕೆ ಕಾಣಸಿಗಲಿದೆ.
ವಿಶ್ವೇಶ್ವರಯ್ಯ ಅವರ ಮನೆಯಿಂದ ಸಮಾಧಿಯ ಸ್ಥಳಕ್ಕೆ ತೆರಳುವಾಗ ಇರುವ ಆಂಜನೇಯ ಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಜಾಗದಲ್ಲಿ ಹೊಸ ವಸ್ತು ಸಂಗ್ರಹಾಲಯ ಮತ್ತು ಸಮಾಧಿ ಮುಂಭಾಗ ಶಿಲ್ಪಕಲಾ ಉದ್ಯಾನಕ್ಕೆ ಯೋಜಿಸಲಾಗಿದೆ.
ಈಗ ಇರುವ ವಸ್ತುಸಂಗ್ರಹಾಲಯವು ಕಿರಿದಾಗಿದೆ. ಈ ವಸ್ತು ಸಂಗ್ರಹಾಲಯದಲ್ಲಿ ಭಾರತರತ್ನ ಸೇರಿದಂತೆ ಸರ್.ಎಂ.ವಿ ಅವರಿಗೆ ಸಂದಿರುವ ಪುರಸ್ಕಾರಗಳು, ಗೌರವ ಡಾಕ್ಟರೇಟ್‌ಗಳು, ಅವರು ಬಳಸುತ್ತಿದ್ದ ಪೆನ್ನು, ಪುಸ್ತಕ, ರೇಡಿಯೊ ಸೇರಿದಂತೆ ಹಲವು ವಸ್ತುಗಳನ್ನು ಕಾಣಬಹುದು. ಸರ್.ಎಂ.ವಿ ಅವರ ಬದುಕಿನ ಹಂತಗಳನ್ನು ಮತ್ತು ಅವರಿಗೆ ಸಂಬಂಧಿಸಿದ ಮಾಹಿತಿಗಳನ್ನು ತಿಳಿಯಲು ಈ ವಸ್ತು ಸಂಗ್ರಹಾಲಯವೇ ಪ್ರಮುಖ ಆಧಾರ. ಸರ್.ಎಂ.ವಿಶ್ವೇಶ್ವರಯ್ಯ ಅವರ ಸಾಧನೆಗಳು, ಅವರ ಬಗ್ಗೆ ಪ್ರಕಟವಾಗಿರುವ ಪತ್ರಿಕಾ ವರದಿಗಳೂ ಇಲ್ಲಿವೆ.
ಹೀಗೆ ವಿಶ್ವೇಶ್ವರಯ್ಯ ಅವರ ಬದುಕನ್ನು ಕಾಣಿಸುವ ವಸ್ತು ಸಂಗ್ರಹಾಲಯಕ್ಕೆ ನಿತ್ಯ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಶನಿವಾರ ಮತ್ತು ಭಾನುವಾರ ದೊಡ್ಡ ಸಂಖ್ಯೆಯಲ್ಲಿ ಸರ್.ಎಂ.ವಿ ನಿವಾಸಕ್ಕೆ ಪ್ರವಾಸಿಗರು ಭೇಟಿ ನೀಡುವರು. ಒಂದೇ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ವಸ್ತು ಸಂಗ್ರಹಾಲಯ ಪ್ರವೇಶಿಸಿದಾಗ ಜಾಗ ಕಿರಿದಾದ ಕಾರಣ ಸಮಸ್ಯೆ ಎದುರಾಗುತ್ತಿದೆ.
ಅಲ್ಲದೆ ಸರ್.ಎಂ.ವಿಶ್ವೇಶ್ವರಯ್ಯ ಅವರಿಗೆ ಸಂಬಂಧಿಸಿದ ಮತ್ತಷ್ಟು ಚಿತ್ರಗಳು, ಮಾಹಿತಿ ಅವರ ಮೊಮ್ಮಗ ಹಾಗೂ ಸರ್.ಎಂ.ವಿಶ್ವೇಶ್ವರಯ್ಯ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಸತೀಶ್ ಮೋಕ್ಷಗೊಂಡಂ ಅವರ ಬಳಿ ಇವೆ. ಇವುಗಳನ್ನೂ ಸಹ ಹೊಸ ಸಂಗ್ರಹಾಲಯದಲ್ಲಿ ಜೋಡಿಸಬಹುದು ಎನ್ನುವ ಆಸೆ ಅವರದ್ದು.
ಶೀಘ್ರ ಕೆಲಸಗಳು ಆರಂಭ: ‘ನಮ್ಮ ತಾಯಿ ಇಂಗ್ಲೆಂಡ್‌ನಲ್ಲಿರುವ ಷೇಕ್ಸ್ ಪಿಯರ್ ಅವರ ಮನೆಗೆ ಭೇಟಿ ನೀಡಿದ್ದರು. ಆ ಮನೆಯನ್ನು ಸ್ಮಾರಕವಾಗಿ ರೂಪಿಸಿದ್ದನ್ನು ನೋಡಿದ್ದರು. ನಾವೂ ವಿಶ್ವೇಶ್ವರಯ್ಯ ಅವರ ಮನೆಯನ್ನು ಸ್ಮಾರಕ ಮತ್ತು ವಸ್ತು ಸಂಗ್ರಹಾಲಯ ಮಾಡೋಣ ಎಂದರು. ಆ ಫಲವಾಗಿ ಈಗಿರುವ ವಸ್ತು ಸಂಗ್ರಹಾಲಯ ರೂಪುಪಡೆಯಿತು. ಟ್ರಸ್ಟ್‌ನಿಂದ ಹೊಸ ವಸ್ತು ಸಂಗ್ರಹಾಲಯ ನಿರ್ಮಾಣಕ್ಕೆ ಆಲೋಚಿಸಲಾಗಿದ್ದು ಯೋಜನೆ ಸಿದ್ಧವಾಗುತ್ತಿದೆ’ ಎಂದು ಸತೀಶ್ ಮೋಕ್ಷಗೊಂಡಂ ತಿಳಿಸುವರು.
ಸಮಾಧಿ ಮುಂಭಾಗದ ಖಾಲಿ ಜಾಗದಲ್ಲಿ ಶಿಲ್ಪಕಲಾ ಉದ್ಯಾನ ಸಹ ಮಾಡಬೇಕು ಎನ್ನುವ ಅಪೇಕ್ಷೆ ಇದೆ. ಸರ್.ಎಂ.ವಿ ಅವರ ಬಾಲ್ಯ, ಶಿಕ್ಷಣ, ಸಾಧನೆಗಳನ್ನು ಪ್ರತಿಬಿಂಬಿಸುವ ಮಾದರಿಗಳನ್ನು ಶಿಲ್ಪಕಲೆ ಮೂಲಕ ಕಾಣಬಹುದು. ವಿಶ್ವೇಶ್ವರಯ್ಯ ಅವರ ಮನೆ, ವ್ಯಾಸಂಗ ಮಾಡಿದ ಶಾಲೆ, ಕಾಲೇಜುಗಳು ಅಂದು ಹೇಗಿದ್ದವು ಎನ್ನುವ ಮಾದರಿಗಳನ್ನು ಕಲ್ಲಿನಲ್ಲಿ ರೂಪಿಸಲಾಗುವುದು. ಎಂಜಿನಿಯರ್ ಆದ ಮೇಲೆ ಅವರ ಮೊದಲ ಯೋಜನೆ ಧುಲೆ. ಆ ಯೋಜನೆ ಇಂದಿಗೂ ಇದೆ.ಅದರ ಭಾವಚಿತ್ರ ತೆಗೆಸಿ ಅದನ್ನು ಶಿಲ್ಪಕಲೆಗೆ ಇಳಿಸಲಾಗುವುದು. ಶಿಲ್ಪಗಳ ಅಡಿ ಬರಹರದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಒಕ್ಕಣೆಗಳು ಇರುತ್ತವೆ. ಮಹಾರಾಜರ ಭಾವಚಿತ್ರವೂ ಇಲ್ಲಿ ಇರುತ್ತದೆ ಎಂದು ಹೇಳಿದರು.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ವಿಶ್ವೇಶ್ವರಯ್ಯ ಹೆಜ್ಜೆ ಗುರುತುಗಳು..
ಜನ್ಮಸ್ಥಳವಾದ ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿಯೂ ಸರ್.ಎಂ.ವಿ ಅವರ ಹೆಜ್ಜೆಗುರುತುಗಳು ಇವೆ. ಪ್ರಸಿದ್ಧ ಪ್ರವಾಸಿ ತಾಣವಾಗಿರುವ ತಾಲ್ಲೂಕಿನ ಶ್ರೀನಿವಾಸ ಸಾಗರ ಅಣೆಕಟ್ಟು ಮತ್ತು ಈಗ ಚಿಕ್ಕಬಳ್ಳಾಪುರಕ್ಕೆ ನೀರು ಪೂರೈಸುವ ಜಕ್ಕಲಮಡಗು ಜಲಾಶಯ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದು ಸರ್.ಎಂ ವಿಶ್ವೇಶ್ವರಯ್ಯ. ಶಿಡ್ಲಘಟ್ಟ ತಾಲ್ಲೂಕಿನ ಮೇಲೂರು ಗ್ರಾಮದಲ್ಲಿ 1952ರಲ್ಲಿ ಕಿಸಾನ್ ಸಿಲ್ಕ್ ಇಂಡಸ್ಟ್ರೀಸ್ ರೇಷ್ಮೆ ಕಾರ್ಖಾನೆಯ ಉದ್ಘಾಟನೆಯಲ್ಲೂ ಅವರು ಭಾಗಿಯಾಗಿದ್ದರು.