
ಸ್ವಾವಲಂಬಿ ಬದುಕು ನಿರ್ಮಿಸಿದ ‘ಗಣೇಶ’
ಅಫಜಲಪುರ: ‘ಹಿರಿಯರಿಂದ ಬಳುವಳಿಯಾಗಿ ಬಂದ ಕುಂಬಾರಿಕೆ ವೃತ್ತಿಯಿಂದ ಆರಂಭಗೊಂಡ ಜೀವನವು ಸಾವಿರಾರು ಗಣೇಶ ಮೂರ್ತಿಗಳಿಗೆ ಜೀವ ತುಂಬುವ ಉದ್ಯಮಿಯಾಗಿ ರೂಪುಗೊಂಡ ಸೂರ್ಯಕಾಂತ ಕಂಬಾರ ಅವರ ಪರಿಶ್ರಮ, ಸ್ವಾವಲಂಬಿ ಬದುಕು ಸ್ಥಳೀಯರಿಗೆ ಮಾದರಿಯಾಗಿದೆ.
ತಾಲ್ಲೂಕಿನ ಜೇವರ್ಗಿ (ಬಿ) ಗ್ರಾಮದ ಸೂರ್ಯಕಾಂತ ಕುಂಬಾರ ಅವರು ಕುಂಬಾರಿಕೆ ವೃತ್ತಿಯಿಂದ ಜೀವನ ಆರಂಭಿಸಿ, ಗಣಪತಿ ಮೂರ್ತಿ ತಯಾರಿಕೆಯ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ. ಮಣ್ಣಿಗೆ ರೂಪ ನೀಡುವ ಅವರ ಕೈಚಳಕ ಇಂದು ಕಲ್ಯಾಣ ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟ್ರದವರೆಗೂ ಸದ್ದು ಮಾಡಿದೆ.
ಸೂರ್ಯಕಾಂತ ಅವರು ಗ್ರಾಹಕರಿಗೆ ಬೇಕಾದ ಗಾತ್ರ ಹಾಗೂ ವಿನ್ಯಾಸದ ಗಣಪತಿ ಮೂರ್ತಿಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ತಂದೆಯ ವೃತ್ತಿಗೆ ಹೊಸ ರೂಪ: ಸೂರ್ಯಕಾಂತ್ ಅವರ ತಂದೆ ಬಸಣ್ಣ ಕುಂಬಾರ ಸುಮಾರು 5 ದಶಕಗಳ ಹಿಂದೆ ಜೇವರ್ಗಿ (ಬಿ) ಗ್ರಾಮದಲ್ಲಿ ಮಣ್ಣಿನ ವಿವಿಧ ವಸ್ತುಗಳನ್ನು ತಯಾರಿಸುತ್ತಿದ್ದರು. ತಂದೆಯ ವೃತ್ತಿಯನ್ನೇ ಮುಂದುವರಿಸಿಕೊಂಡ ಸೂರ್ಯಕಾಂತ ಅವರು ಕಾಲ ಬದಲಾದಂತೆ ಕುಂಬಾರಿಕೆಯ ಅನುಭವ ಹಾಗೂ ಮಣ್ಣಿನೊಂದಿಗೆ ಕೆಲಸ ಮಾಡುವ ಕೌಶಲ ಬಳಸಿಕೊಂಡು ಗಣಪತಿ ಮೂರ್ತಿ ತಯಾರಿಕೆಗೆ ಆರಂಭಿಸಿದರು.
ಮೂರ್ತಿ ತಯಾರಿಕೆಗೆ ಅವರ ಪತ್ನಿ ರೇಣುಕಾ, ಇಬ್ಬರು ಮಕ್ಕಳು ಕೈಜೋಡಿಸಿದರು. ಮಣ್ಣಿನ ಕೆಲಸದಿಂದ ಹಿಡಿದು ಮೂರ್ತಿಗೆ ಅಂತಿಮ ರೂಪ ನೀಡುವವರೆಗೂ ಕುಟುಂಬದ ಸದಸ್ಯರ ಶ್ರಮಿಸುತ್ತಾರೆ.
₹10 ಸಾವಿರದಿಂದ ₹50 ಲಕ್ಷದವರೆಗೆ: ಆರಂಭದಲ್ಲಿ ಕೇವಲ ₹10 ಸಾವಿರ ಬಂಡವಾಳದಲ್ಲಿ ಮೂರ್ತಿ ತಯಾರಿಕೆ ಆರಂಭಿಸಿದ್ದರು. ವರ್ಷದಿಂದ ವರ್ಷಕ್ಕೆ ಬೇಡಿಕೆ ಹೆಚ್ಚಾಗಿ ಇಂದು ಉದ್ಯಮದ ಬಂಡವಾಳ ಸುಮಾರು ₹50 ಲಕ್ಷದವರೆಗೆ ಏರಿಕೆಯಾಗಿದೆ. ಪ್ರತಿವರ್ಷ ಸುಮಾರು ₹10 ಲಕ್ಷಕ್ಕೂ ಅಧಿಕ ಆದಾಯ ಬರುತ್ತಿದೆ. ₹50 ರಿಂದ ಆರಂಭಿಸಿ ₹50 ಸಾವಿರ ವರೆಗಿನ ವಿವಿಧ ಬೆಲೆಯ ಗಣಪತಿ ಮೂರ್ತಿಗಳನ್ನು ಅವರು ತಯಾರಿಸಿ ಮಾರಾಟ ಮಾಡುತ್ತಾರೆ.
ವರ್ಷಕ್ಕೆ 5 ಸಾವಿರ ಮೂರ್ತಿ ತಯಾರಿಕೆ
ಪ್ರತಿವರ್ಷ ಸಣ್ಣ ಹಾಗೂ ದೊಡ್ಡ ಗಾತ್ರದ ಸುಮಾರು 5 ಸಾವಿರ ಗಣಪತಿ ಮೂರ್ತಿಗಳನ್ನು ತಯಾರಿಸುತ್ತಾರೆ. ಕಳೆದ ಐದು ವರ್ಷಗಳಿಂದ ಗಣಪತಿ ಮೂರ್ತಿ ತಯಾರಿಕೆಯನ್ನು ಪ್ರಮುಖ ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಮೂರ್ತಿಗಳ ಗಾತ್ರ ಮತ್ತು ವಿನ್ಯಾಸಕ್ಕೆ ಅನುಗುಣವಾಗಿ ಬೆಲೆಯಲ್ಲೂ ವ್ಯತ್ಯಾಸವಿರುತ್ತದೆ. ಕಲ್ಯಾಣ ಕರ್ನಾಟಕದ ವಿವಿಧ ಜಿಲ್ಲೆ ಹಾಗೂ ನೆರೆಯ ಮಹಾರಾಷ್ಟ್ರದ ಜಿಲ್ಲೆಗಳಿಂದ ಗ್ರಾಹಕರೂ ಮೂರ್ತಿ ಖರೀದಿಗೆ ಜೇವರ್ಗಿ ಬಿ. ಗ್ರಾಮಕ್ಕೆ ಬರುತ್ತಾರೆ.
ಮೂರ್ತಿ ತಯಾರಿಕೆಯ ಪ್ರಮುಖ ಅವಧಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗುವುದರಿಂದ ಮಹಾರಾಷ್ಟ್ರದ ನಾಂದೇಡ್‌ನಿಂದ ಪ್ರತಿ ವರ್ಷ 12 ಕಾರ್ಮಿಕರನ್ನು ಕರೆಸಿಕೊಳ್ಳುತ್ತಾರೆ. ಅವರು ಸುಮಾರು ಮೂರು ತಿಂಗಳ ಕಾಲ ಮೂರ್ತಿ ತಯಾರಿಕೆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ. ಗಣಪತಿ ಮೂರ್ತಿಗಳ ತಯಾರಿಕೆಗೆ ಅಗತ್ಯವಿರುವ ಕಚ್ಚಾ ವಸ್ತುಗಳನ್ನು ಗುಜರಾತ್ ರಾಜ್ಯದಿಂದ ತರಿಸಿಕೊಳ್ಳುತ್ತಾರೆ.