ಪ್ರದೀಪ್ ಈಶ್ವರ್–ಡಾ.ಎಂ.ಸಿ.ಸುಧಾಕರ್ ನಡುವಿನ ಶೀತಲ ಸಮರ ಬಹಿರಂಗ

ಪ್ರದೀಪ್ ಈಶ್ವರ್–ಡಾ.ಎಂ.ಸಿ.ಸುಧಾಕರ್ ನಡುವಿನ ಶೀತಲ ಸಮರ ಬಹಿರಂಗ

ಪ್ರದೀಪ್ ಈಶ್ವರ್–ಡಾ.ಎಂ.ಸಿ.ಸುಧಾಕರ್ ನಡುವಿನ ಶೀತಲ ಸಮರ ಬಹಿರಂಗ

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ಮತ್ತು ಮಾಜಿ ಸಚಿವರೂ ಹಾಗೂ ಚಿಂತಾಮಣಿ ಶಾಸಕ ಡಾ.ಎಂ.ಸಿ.ಸುಧಾಕರ್ ನಡುವಿನ ಶೀತಲ ಸಮರ ಬಹಿರಂಗವಾಗಿದೆ. ಡಾ.ಎಂ.ಸಿ.ಸುಧಾಕರ್ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವೇಳೆ ಅವರಿಂದ ದೂರವಿದ್ದ ಪ್ರದೀಪ್ ಈಶ್ವರ್, ‘ನನಗೆ ಹೆದರಿಕೆ ಇಲ್ಲ’ ಎನ್ನುತ್ತಲೇ ಎಂ.ಸಿ.ಸುಧಾಕರ್ ವಿರುದ್ಧ ಹರಿಹಾಯ್ದಿದ್ದಾರೆ.

ಯೂಟ್ಯೂಬ್ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪ್ರದೀಪ್ ಈಶ್ವರ್, ಡಾ.ಎಂ.ಸಿ ಸುಧಾಕರ್ ವಿರುದ್ಧ ವ್ಯಂಗ್ಯದ ದಾಟಿಯಲ್ಲಿ ಟೀಕಿಸಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡುತ್ತಿವೆ. ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಕೀಯ ವಲಯದಲ್ಲಿ ವಿಶೇಷವಾಗಿ ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಕಾರಣವಾಗಿದೆ.

2023ರ ವಿಧಾನಸಭೆ ಚುನಾವಣೆಯ ಗೆಲುವಿನ ನಂತರ ಡಾ.ಎಂ.ಸಿ ಸುಧಾಕರ್ ಅವರನ್ನು ‘ನನ್ನ ರಾಜಕೀಯ ಗುರು’ ಎಂದು ವೇದಿಕೆಗಳಲ್ಲಿ ಪ್ರದೀಪ್ ಹೇಳುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಡಾ.ಎಂ.ಸಿ ಸುಧಾಕರ್ ಪಾಲ್ಗೊಳ್ಳುತ್ತಿದ್ದ ಸರ್ಕಾರಿ ಕಾರ್ಯಮಗಳು, ಪ್ರಗತಿ ಪರಿಶೀಲನಾ ಸಭೆಗಳಿಂದಲೂ ದೂರವುಳಿದರು.

‘ಡಾ.ಎಂ.ಸಿ ಸುಧಾಕರ್ ಚಿಂತಾಮಣಿಯಲ್ಲಿ ಬ್ಯುಸಿಯಾಗಿದ್ದಾರೆ. ಈಚಿನ ದಿನಗಳಲ್ಲಿ ನನ್ನ ಮೇಲೆ ಪ್ರೀತಿ ಹೆಚ್ಚಾಗಿದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ, ವೀರಪ್ಪ ಮೊಯಿಲಿ ಮತ್ತು ಡಾ.ಎಂ.ಸಿ ಸುಧಾಕರ್ ನನಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವಲ್ಲಿ ಪ್ರಮುಖಪಾತ್ರವಹಿಸಿದರು. ಸ್ಥಳೀಯರಾದ ಕಾರಣ ಡಾ.ಎಂ.ಸಿ ಸುಧಾಕರ್ ಪಾತ್ರ ಸ್ವಲ್ಪ ಹೆಚ್ಚಿದೆ.

‘ನಾವು ಅವರ ಋಣ ತೀರಿಸೋಣ. ನಾಲ್ಕನೇ ತರಗತಿಯಲ್ಲಿ ಎಬಿಸಿಡಿ ಕಲಿಸಿದ್ದೇನೆ, ಕೆಲಸಕ್ಕೆ ಸೇರಿದ್ದೀಯ, ಸಂಬಳ ತೆಗೆದುಕೊಳ್ಳುವೆ ಅದರಲ್ಲಿ ನನಗೂ ಕೊಡು ಎಂದರೆ ಹೇಗೆ? ಎಲ್ಲದಕ್ಕೂ ಹಸ್ತಕ್ಷೇಪ ಮಾಡುವರು. ನಾವು ಸ್ವಂತ ನಿರ್ಧಾರ ತೆಗೆದುಕೊಳ್ಳಲು ಬಿಟ್ಟಿಲ್ಲ’ ಎಂದು ಪ್ರದೀಪ್ ಈಶ್ವರ್ ಸಂದರ್ಶನದಲ್ಲಿ ತಿಳಿಸಿದ್ದಾರೆ.

‘2028ರ ವಿಧಾನಸಭೆ ಚುನಾವಣೆಯ ಸೋಲು, ಗೆಲುವು ನನ್ನ ಕೈಯಲ್ಲಿ ಇದೆ. ಪರೀಕ್ಷೆ ಬರೆಯುವ ತಾಕತ್ತು ನನಗೆ ಇದೆ. ರ‍್ಯಾಂಕ್ ಗಳಿಸದಿದ್ದರೂ ಪಾಸ್ ಆಗೇ ಆಗುವೆ. 25 ದಿನಗಳಲ್ಲಿಯೇ ಗೆದ್ದವನು ನಾನು. ಐದು ವರ್ಷ ರಾಜಕೀಯ ಮಾಡಿದ್ದೇನೆ. 25 ಜನರನ್ನು ಹಾಕಿಕೊಂಡು ಐಬಿಯಲ್ಲಿ ಕಾಫಿ, ಬಜ್ಜಿ ತಿನ್ನುವುದು ರಾಜಕೀಯವಲ್ಲ’ ಎಂದಿದ್ದಾರೆ ಪ್ರದೀಪ್ ಈಶ್ವರ್.

ಎಚ್‌.ಡಿ.ಕುಮಾರಸ್ವಾಮಿ ಅವರಷ್ಟೇ ಅಭಿಮಾನಿಗಳು ನನಗೂ ಇದ್ದಾರೆ. ಅವರು ಎಚ್‌.ಡಿ.ದೇವೇಗೌಡರ ಆಶೀರ್ವಾದಿಂದ ಬಂದಿದ್ದಾರೆ. ಎಚ್‌.ಡಿ.ದೇವೇಗೌರ ಮಗ, ಎಚ್‌.ಡಿ ರೇವಣ್ಣ ಅವರ ಸಹೋದರ ಮತ್ತು ಒಕ್ಕಲಿಗರ ನಾಯಕ ಎನ್ನುವ ಕಾರಣಕ್ಕೆ ಜನರು ಇಷ್ಟಪಡುವರು. ನನಗೂ ನನ್ನದೇ ಆದ ಅಭಿಮಾನಿಗಳು ಇದ್ದಾರೆ.

ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹೃದಯ ಸಂಬಂಧಿ ಅನಾರೋಗ್ಯದ ವೇಳೆ ಅವರ ಆರೋಗ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸಿದ್ದೇನೆ. ಅವರು ಹಳ್ಳಿಗಳಿಗೆ ಹೋಗಿ ಜನರ ಕಷ್ಟಗಳನ್ನು ಕೇಳುತ್ತಿದ್ದರು. ಜನತಾದರ್ಶನ ಮಾಡುತ್ತಿದ್ದರು. ಅವು ನನಗೆ ಪ್ರೇರಣೆಯಾಗಿವೆ. ಆದರೆ ಅವರು ನಮ್ಮ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಬೈದರೆ ನಾನು ಹೇಗೆ ಸುಮ್ಮನಿರಲಿ. ನಾನು ಡಿ.ಕೆ. ಶಿವಕುಮಾರ್ ಅವರನ್ನು ಹೆಚ್ಚು ಇಷ್ಟಪಡುವೆ ಎಂದು ಪ್ರದೀಪ್ ಈಶ್ವರ್ ಸಂದರ್ಶನದಲ್ಲಿ ಹೇಳಿದ್ದಾರೆ.

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿ ಬಣ

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ನಾಯಕರು ಪ್ರದೀಪ್ ಈಶ್ವರ್ ಮತ್ತು ಡಾ.ಎಂ.ಸಿ ಸುಧಾಕರ್ ಬಣ ಎಂದು ಹರಿದು ಹಂಚಿಹೋಗಿದ್ದಾರೆ. ಚಿಮುಲ್ ಚುನಾವಣೆಯಲ್ಲಿ ಈ ಬಣ ರಾಜಕಾರಣ ಮತ್ತಷ್ಟು ಹೆಚ್ಚಿತು. ಅನುದಾನದ ವಿಚಾರವಾಗಿ ಎರಡೂ ಬಣಗಳ ನಾಯಕರು ಬಹಿರಂಗವಾಗಿಯೇ ಆರೋಪ ಪ್ರತ್ಯಾರೋಪ ಮಾಡಿದ್ದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ