
ದಾವಣಗೆರೆ-ಚಿತ್ರದುರ್ಗ ಹೆದ್ದಾರಿಯಲ್ಲಿ ಕಾರು-ಬೈಕ್ ಡಿಕ್ಕಿ; ವಿದ್ಯಾರ್ಥಿನಿ ಸಾವು
ದಾವಣಗೆರೆ: ತಾಲ್ಲೂಕಿನ ಕೊಗ್ಗನೂರು ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ದ್ವಿಚಕ್ರ ವಾಹನ ಹಾಗೂ ಕಾರಿನ ನಡುವೆ ಸೋಮವಾರ ಸಂಭವಿಸಿದ ಡಿಕ್ಕಿಯಲ್ಲಿ ಪ್ರಥಮ ಪಿಯುಸಿ ವಿದ್ಯಾ ರ್ಥಿನಿ ಋತು (17) ಮೃತಪಟ್ಟಿದ್ದಾರೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಶಿವಗಂಗಾ ಗ್ರಾಮದ ನಾಗರಾಜಪ್ಪ ಅವರ ಪುತ್ರಿ ಋತು, ದಾವಣಗೆರೆಯ ಎವಿಕೆ ಕಾಲೇಜು ವಿದ್ಯಾರ್ಥಿನಿ. ಬೈಕ್ ಚಾಲನೆ ಮಾಡುತ್ತಿದ್ದ ಹೆಬ್ಬಾಳು ಗ್ರಾಮದ ಪ್ರಕಾಶ್ ನಾಯ್ಕ, ಇವರ ಪುತ್ರಿ ಸಿಂಚನಾ ಹಾಗೂ ಕಾರಿನಲ್ಲಿದ್ದ ಹಾವೇರಿ ಜಿಲ್ಲೆ ಹಾನಗಲ್ ತಾಲ್ಲೂಕಿನ ತಿಳುವಳ್ಳಿಯ ಸಂತೋಷ ಕುಮಾರ, ಸಾನ್ವಿತಾ, ಶಮಿತ್ ಹಾಗೂ ದೀಪಾ ಗಾಯಗೊಂಡಿದ್ದಾರೆ.
ಸಿಂಚನಾ ಹಾಗೂ ಋತು ಅವರೊಂದಿಗೆ ಪ್ರಕಾಶ್ ಅವರು ಹೆಬ್ಬಾಳ ಗ್ರಾಮದಿಂದ ದಾವಣಗೆರೆ ಕಡೆಗೆ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಹಿಂಬದಿಯಿಂದ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಋತು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಗ್ರಾಮಾಂತರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ.