
ಹಿಂದೂ ಜಾಗರಣಾ ವೇದಿಕೆಯ ಮುಖಂಡ ಕಾರ್ತಿಕ್ ಕೊಲೆ ಪ್ರಕರಣ: ಇಂದು ಶಿಕ್ಷೆ ಪ್ರಕಟ
ಪುತ್ತೂರು: ಏಳು ವರ್ಷದ ಹಿಂದೆ ಪುತ್ತೂರಿನ ಸಂಪ್ಯ ಪೊಲೀಸ್ ಠಾಣೆ ಮುಂಭಾಗ ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವ ಪೆಂಡಾಲ್ನಲ್ಲಿ ನಡೆದಿದ್ದ ಹಿಂದೂ ಜಾಗರಣಾ ವೇದಿಕೆಯ ಮುಖಂಡ ಕಾರ್ತಿಕ್ ಸುವರ್ಣ ಮೇರ್ಲ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳ ಮೇಲಿನ ಆರೋಪ ಸಾಬೀತಾಗಿದ್ದು, ಸೆ.22ರಂದು ಪುತ್ತೂರಿನ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ ಶಿಕ್ಷೆ ಪ್ರಕಟಿಸಲಿದೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಸಾಕ್ಷ್ಯಾಧಾರಗಳಿಂದ ಆರೋಪಿಗಳಾದ ಕಿರಣ್ ಹಾಗೂ ಪ್ರೀತೇಶ್ ಎಂಬುವರ ಮೇಲಿನ ಆರೋಪ ಸಾಬೀತಾಗಿರುವುದಾಗಿ ತೀರ್ಮಾನಿಸಿದ್ದು, ಅಪರಾಧಿಗಳಿಗೆ ಶಿಕ್ಷೆಯ ಪ್ರಮಾಣವನ್ನು ಸೆ.22ರಂದು ಪ್ರಕಟಿಸಲಿದೆ. ಸರ್ಕಾರಿ ಅಭಿಯೋಜಕಿ ಜಯಂತಿ ಸತೀಶ್ ಭಟ್ ಅವರು ಸರ್ಕಾರದ ಪರ ವಾದಿಸಿದ್ದರು.
2019ರ ಸೆ.3ರಂದು ರಾತ್ರಿ ಸಾರ್ವಜನಿಕ ಗಣೇಶೋತ್ಸವದ ಪ್ರಯುಕ್ತ ನಡೆಯುತ್ತಿದ್ದ ಯಕ್ಷಗಾನ ಕಾರ್ಯಕ್ರಮವನ್ನು ಕಾರ್ತಿಕ್ ಸುವರ್ಣ ವೀಕ್ಷಿಸುತ್ತಿದ್ದಾಗ ಅವರ ಮೇಲೆ ದಾಳಿ ನಡೆಸಿ ಚೂರಿಯಿಂದ ಇರಿದು ಕೊಲೆ ಮಾಡಲಾಗಿತ್ತು. ಸಂಪ್ಯ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಸಂಪ್ಯ ಠಾಣೆಯ ಪೊಲೀಸರು ಪ್ರೀತೇಶ್, ಸಂಪ್ಯ ಠಾಣೆಯ ಹಿಂಭಾಗದ ನಿವಾಸಿ ಸಹೋದರರಾದ ಚರಣ್ರಾಜ್, ಕಿರಣ್, ಸ್ಟೀವನ್ ಮೊಂತೆರೊ ಎಂಬು ವರನ್ನು ಬಂಧಿಸಿದ್ದರು. ಚರಣ್ ರಾಜ್ ಹಾಗೂ ಕಿರಣ್ ಎಂಬುವರು ಕಾರ್ತಿಕ್ ಅವರನ್ನು ಕೈಯಲ್ಲಿ ಹಿಡಿದುಕೊಂಡಿದ್ದ ವೇಳೆ ಪ್ರೀತೇಶ್ ಚೂರಿಯಿಂದ ಇರಿದಿದ್ದ ಎಂದು ಆರೋಪಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಚರಣ್ ರಾಜ್ ಪುತ್ತೂರು ತಾಲ್ಲೂಕಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ ಔಷಧಿ ಅಂಗಡಿ ತೆರಯಲು ತಯಾರಿಯಲ್ಲಿದ್ದ ವೇಳೆ 2022ರ ಜೂನ್ 4ರಂದು ತಂಡ ವೊಂದು ಅಂಗಡಿ ಎದುರಿನ ರಸ್ತೆಯಲ್ಲೇ ತಲ್ವಾರಿನಿಂದ ಕಡಿದು ಕೊಲೆ ಮಾಡಿತ್ತು.