
ಸೇಡಂ ಬರಪೀಡಿತ ತಾಲ್ಲೂಕು ಘೋಷಣೆಗೆ ಮಧ್ಯರಾತ್ರಿ ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ
ಸೇಡಂ: ಸೇಡಂ ತಾಲ್ಲೂಕು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು ಎಂದು ನಗರದ ಚಿಂಚೋಳಿ ವೃತ್ತದ ಬಳಿ ರೈತರು ನಡೆಸುತ್ತಿರುವ ಪ್ರತಿಭಟನೆ12 ಗಂಟೆಗಳ ನಂತರ ಬುಧವಾರ ಬೆಳಗಿನ ಜಾವ 1 ಗಂಟೆಗೂ ಅಂತ್ಯಗೊಂಡಿತು.
ಮಂಗಳವಾರ ಮಧ್ಯಾಹ್ನ 12 ಗಂಟೆಗೆ ಪ್ರತಿಭಟನಾ ಆರಂಭಿಸಿದ ರೈತರು ಮಂಗಳವಾರ ಮಧ್ಯರಾತ್ರಿ 11.50 ನಿಮಿಷದವರೆಗೂ ಪ್ರತಿಭಟನೆ ನಡೆಸಿದರು. ಮಧ್ಯರಾತ್ರಿ 12 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಇಕ್ರಂ ಷರೀಪ್ ರೈತರೊಂದಿಗೆ ಮಾತನಾಡಿ ಮನವಿ ಸ್ವೀಕರಿಸಿದರು.
ಜಿಲ್ಲಾಧಿಕಾರಿ ಇಕ್ರಂ ಷರೀಫ್ ಮಾತನಾಡಿ, ಬರ ಘೋಷಣೆಗೆ ಕೇಂದ್ರ ಸರ್ಕಾರದ ಮಾನದಂಡಗಳಿದ್ದು, ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಮಾರ್ಗಸೂಚಿಗಳ ಆಧಾರದ ಮೇಲೆ ಬರ ಪರಿಸ್ಥಿತಿಯನ್ನು ಪರಿಗಣಿಸಲಾಗುತ್ತದೆ. ತಾಲ್ಲೂಕಿಗೆ ಸಂಬಂಧಿಸಿದಂತೆ ಎಲ್ಲ ವರದಿಗಳನ್ನು ತರಿಸಿಕೊಂಡು ಪರಿಶೀಲಿಸಲಾಗುವುದು. ರೈತರಿಗೆ ಅನ್ಯಾಯವಾಗದಂತೆ ಅತ್ಯಂತ ಪ್ರಾಮಾಣಿಕವಾಗಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದ ನಂತರ ರೈತರು ಮನವಿ ಸಲ್ಲಿಸಿ ಪ್ರತಿಭಟನೆ ಹಿಂಪಡೆದರು. 12 ಗಂಟೆಗಳ ನಿರಂತರ ನಡೆದ ಪ್ರತಿಭಟನೆಯಿಂದಾಗಿ ಪ್ರಯಾಣಿಕರು ಪರದಾಡಿದರು. ಅಲ್ಲದೆ ರಾಜ್ಯ ಹೆದ್ದಾರಿ 10 ವಾಗ್ಧರಿ-ರಿಬ್ಬನಪಲ್ಲಿ ರಸ್ತೆ ಮೇಲೆ 10 ಕಿ.ಮೀ ದೂರದವರೆಗೆ ಸರತಿಯಲ್ಲಿ ವಾಹನಗಳು ನಿಂತಿದ್ದವು. ವಾಹನಗಳನ್ನು ಡಿವೈಎಎಸ್ಪಿ ಸಂಗಮನಾಥ ಹಿರೇಮಠ, ಸಿಪಿಐ ಮಹಾದೇವ ದಿಡ್ಡಿಮನಿ, ಪಿಎಸ್ಐ ಉಪೇಂದ್ರಕುಮಾರ ನೇತೃತ್ವದಲ್ಲಿ ಸುಗಮ ಸಂಚಾರ ನಡೆಯಿತು. ಸೇಡಂ ಇತಿಹಾಸದಲ್ಲಿಯೇ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನಾ ನಡೆಸಿದ ಮೊದಲ ದಾಖಲೆ ರೈತರ ಪ್ರತಿಭಟನೆ ಎಂದು ಜನರು ಅಂದಾಡಿಕೊಳ್ಳುತ್ತಿರುವುದು ಕಂಡು ಬಂತು.
ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು, ಉಪವಿಭಾಗಾಧಿಕಾರಿ ಪ್ರಭುರೆಡ್ಡಿ, ತಹಶೀಲ್ದಾರ್ ಶ್ರೀಯಾಂಕಾ ಧನಶ್ರೀ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಅಧ್ಯಕ್ಷ ಶಾಂತಕುಮಾರ ಚನ್ನಕ್ಕಿ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ರೇವಗೊಂಡ, ರವಿ ಸಾಹುಕಾರ ಸೂರವಾರ, ಆಮಶೆಟ್ಟಿ ಪಾಟೀಲ್, ಭೀಮರಾವ ಮಾಲಿಪಾಟೀಲ್, ನಾಗೀಂದ್ರಪ್ಪ ಪಾಟೀಲ್, ಮೋಹನರೆಡ್ಡಿ ಬಟಗೇರಾ, ರಾಜಶೇಖರ ಬಿಡಪ್, ಅಮರ ಪಾಟೀಲ್, ಮಹೇಶ ರೆಮಗೊಂಡ, ಚಂದ್ರಕಾಂತ ಇದ್ದರು.