
ಚಿಕ್ಕಬಳ್ಳಾಪುರ: ಉರ್ದು ವಿಷಯದಲ್ಲಿ ಸಾಧನೆಗೈದ 217 ವಿದ್ಯಾರ್ಥಿಗಳಿಗೆ ಸನ್ಮಾನ
ಚಿಕ್ಕಬಳ್ಳಾಪುರ: ಇಲ್ಲಿನ ಅಂಜುಮನ್ ತರಖ್ಖಿ ಉರ್ದು (ಹಿಂದ್) ಸಂಸ್ಥೆಯಿಂದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳಲ್ಲಿ ಉರ್ದು ವಿಷಯದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಈಚೆಗೆ ಸನ್ಮಾನಿಸಲಾಯಿತು.
ಉರ್ದು ವಿಷಯದಲ್ಲಿ 100ಕ್ಕೆ 100 ಅಂಕ ಗಳಿಸಿದ ಜಿಲ್ಲೆಯ ಎಂಟು ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 217 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕರ್ನಾಟಕ ಅಂಜುಮನ್ ತರಖ್ಖಿ ಉರ್ದು (ಹಿಂದ್) ಸಂಸ್ಥೆ ರಾಜ್ಯ ಅಧ್ಯಕ್ಷ ಮಹಮ್ಮದ್ ಉಬೇದುಲ್ಲಾ ಶರೀಫ್ ಮಾತನಾಡಿ, ಉರ್ದು ಭಾಷೆಯ ಅಭಿವೃದ್ಧಿ ಮತ್ತು ಉತ್ತೇಜನಕ್ಕಾಗಿ ಅಂಜುಮನ್ ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಐದು ವರ್ಷಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಉರ್ದು ಭಾಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸನ್ಮಾನ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ಕರ್ನಾಟಕ ಉರ್ದು ಅಕಾಡೆಮಿ ಮಾಜಿ ಅಧ್ಯಕ್ಷ ಮುಬೀನ್ ಮುನವ್ವರ್ ಮಾತನಾಡಿ, ಉರ್ದುವನ್ನು ಕೇವಲ ಮಾತೃಭಾಷೆ ಎಂದು ಹೇಳಿದರೆ ಸಾಲದು ತಾಯಿಯನ್ನು ಹೇಗೆ ಪ್ರೀತಿಸಿ ಗೌರವಿಸುತ್ತೇವೆಯೋ ಅದೇ ರೀತಿ ಉರ್ದು ಭಾಷೆಯನ್ನೂ ಪ್ರೀತಿಸಿ ಬೆಳೆಸಬೇಕು ಎಂದರು.
ಹೊಸ ಪೀಳಿಗೆಗೆ ಉರ್ದು ಭಾಷೆಯ ಪರಿಚಯ ಮಾಡಿಸುವುದರ ಜತೆಗೆ ಭಾಷೆಯ ಬಗ್ಗೆ ಪ್ರೀತಿ ಮತ್ತು ಅಭಿಮಾನ ಮೂಡಿಸಲು ಅಂಜುಮನ್ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಬೆಂಗಳೂರಿನ ದಾರುಲ್ ಉಲೂಮ್ ಸಬೀಲುರ್ ರಶಾದ್‌ನ ಮುಹ್ತಮಿಮ್ ಮೌಲಾನಾ ಮುಫ್ತಿ ಅಹ್ಮದ್ ಸಮಾಲ್ ರಶಾದಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಅಂಜುಮನ್ ತರಖ್ಖಿ ಉರ್ದು ಹಿಂದ್ ರಾಜ್ಯ ಉಪಾಧ್ಯಕ್ಷ ಇಜಾಜ್ ಅಲಿ, ಜಿಲ್ಲಾ ಅಧ್ಯಕ್ಷ ಇಮ್ತಿಯಾಝುಲ್ಲಾ ಕಾಶಿಫಿ, ಕಾರ್ಯದರ್ಶಿ ಮೊಹಮ್ಮದ್ ಜೀಲಾನಿ, ಜಮಾಅತ್ ಅಹ್ಲೆ ಇಸ್ಲಾಂ ಕಾರ್ಯದರ್ಶಿ ಮೌಲಾನಾ ಫಹದ್, ಅನ್ಸಾರ್ ಅಜೀಜ್ ನದ್ವಿ, ಶಫೀವುಲ್ಲಾ, ಸಯ್ಯದ್ ಅಮಾನುಲ್ಲಾ ಮತ್ತಿತರರು ಪಾಲ್ಗೊಂಡಿದ್ದರು.