
ಕಲಬುರಗಿ| 371(ಜೆ) ಕಲ್ಯಾಣ ಅಭ್ಯುದಯಕ್ಕೆ ಶ್ರೀರಕ್ಷೆ: ಪ್ರಿಯಾಂಕ್ ಖರ್ಗೆ
ಕಲಬುರಗಿ: ‘371(ಜೆ) ಕಲಂ ಕಲ್ಯಾಣ ಕರ್ನಾಟಕದ ಜನರ ಅಭ್ಯುದಯಕ್ಕೆ ಸಿಕ್ಕ ಶ್ರೀರಕ್ಷೆಯಾಗಿದೆ’ ಎಂದು 371(ಜೆ) ಸಂಪುಟ ಉಪ ಸಮಿತಿ ಅಧ್ಯಕ್ಷ ಪ್ರಿಯಾಂಕ್ ಖರ್ಗೆ ಪ್ರತಿಪಾದಿಸಿದರು.
ನಗರದ ಶರಣ ಬಸವ ವಿಶ್ವವಿದ್ಯಾಲಯ ಆವರಣದ ದೊಡ್ಡಪ್ಪ ಅಪ್ಪ ಸಭಾ ಮಂಟಪದಲ್ಲಿ ಶರಣಬಸವೇಶ್ವರ ವಿದ್ಯಾವರ್ಧಕ ಸಂಘ, ಶರಣ ಬಸವ ವಿಶ್ವವಿದ್ಯಾಲಯ ಹಾಗೂ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯಿಂದ ಬುಧವಾರ ಆಯೋಜಿಸಿದ್ದ 371(ಜೆ) ಕಲಂ ಅನುಷ್ಠಾನದ ಸಾಧನೆ ಮತ್ತು ಆಶಯ ಸರಣಿ ವಿಚಾರ ಸಂಕಿರಣಗಳ ಉದ್ಘಾಟನಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘371(ಜೆ) ಮೂಲಕ ಮಲ್ಲಿಕಾರ್ಜುನ ಖರ್ಗೆ ಅವರು ಪಂಚ ಗ್ಯಾರಂಟಿಗಳಿಗೂ ಮುನ್ನವೇ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ, ಅನುದಾನದ ಗ್ಯಾರಂಟಿಯನ್ನು ಕಲ್ಯಾಣ ಭಾಗಕ್ಕೆ ನೀಡಿದ್ದಾರೆ. ಹೀಗಾಗಿ 371(ಜೆ) ಸಂಪೂರ್ಣ ಅನುಷ್ಠಾನಕ್ಕೆ ನಮ್ಮ ಸರ್ಕಾರ ಕಟಿಬದ್ಧವಾಗಿದೆ’ ಎಂದು ಪುನರುಚ್ಚರಿಸಿದರು.
‘371(ಜೆ) ಕಲಂನಿಂದಾಗಿ ಕಲ್ಯಾಣಕ್ಕೆ ಈತನಕ ₹24,770 ಕೋಟಿ ಅನುದಾನ ಹರಿದು ಬಂದಿದೆ. 1,19,923 ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಸಿಕ್ಕಿದೆ. ಅದರಲ್ಲಿ 85 ಸಾವಿರ ಹುದ್ದೆಗಳ ಭರ್ತಿಯೂ ನಡೆದಿದೆ. 30 ಸಾವಿರ ಮಂದಿಗೆ ಬಡ್ತಿಯಲ್ಲಿ ನೆರವಾಗಿದೆ. 11 ಸಾವಿರಕ್ಕೂ ಹೆಚ್ಚು ವೈದ್ಯಕೀಯ ಸೀಟು ಸಿಕ್ಕಿವೆ. 30 ಸಾವಿರಕ್ಕೂ ಅಧಿಕ ಎಂಜಿನಿಯರಿಂಗ್ ಸೀಟು ದೊರೆತಿವೆ. ಇಷ್ಟೆಲ್ಲ ಆಗಿದ್ದರೂ ಮಲ್ಲಿಕಾರ್ಜುನ ಖರ್ಗೆ ಅವರು ಸೋತರು. ನಮ್ಮಲ್ಲಿ ಆಚಾರ, ವಿಚಾರ ಇದ್ದರೂ, ಪ್ರಚಾರದ ಕೊರತೆಯಿದೆ’ ಎಂದು ಅವರು ಹೇಳಿದರು.
‘371(ಜೆ) ಕಲಂ ಅನುಷ್ಠಾನದಲ್ಲಿ ತೊಡಕುಗಳ ನಿವಾರಣೆಗೆ ನಾನು, ಶರಣಪ್ರಕಾಶ ಪಾಟೀಲ ನಿರಂತರವಾಗಿ ಶ್ರಮಿಸುತ್ತಿದ್ದೇವೆ. ನಾನು 371(ಜೆ) ಸಂಪುಟ ಉಪಸಮಿತಿ ಅಧ್ಯಕ್ಷನಾದ ಬಳಿಕ 140 ಅರ್ಜಿಗಳು ವಿಲೇವಾರಿಗೆ ಕಾಯುತ್ತಿದ್ದವು. ಇದೀಗ ಅವುಗಳ ಸಂಖ್ಯೆ 68ಕ್ಕೆ ಇಳಿಸಿದ್ದೇನೆ. 371(ಜೆ) ಕಲಂ ಜಾರಿಯಾಗಿ 13 ವರ್ಷಗಳೇ ಉರುಳಿವೆ. ಬಹುತೇಕ ಯುವಜನರ ಒಂದು ತಲೆಮಾರು ಅದರ ಪ್ರಯೋಜನ ಪಡೆದಿದೆ. ಇದೀಗ ಯುವಜನರ ಭವಿಷ್ಯ ಕಟ್ಟುವಂಥ ಕೆಲಸ ನಾವು ಮಾಡುತ್ತಿದ್ದೇವೆ. ನವ ಕಲಬುರಗಿ ನಿರ್ಮಾಣಕ್ಕೆ ರೂಪುರೇಷೆ ಹಾಕಿದ್ದೇವೆ. ಜನರ ಜೀವನಮಟ್ಟ ಸುಧಾರಣೆಗೆ ಸ್ಥಳೀಯ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವ ಕಾರ್ಯ ಪ್ರಗತಿಯಲ್ಲಿದೆ’ ಎಂದರು.
ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘371(ಜೆ) ಕಲಂ ಮಲ್ಲಿಕಾರ್ಜುನ ಖರ್ಗೆ ಅವರ ಶ್ರಮದ ಫಲ. ಹೀಗಾಗಿ 371(ಜೆ) ಕಲಂ ಶೇ 100ರಷ್ಟು ಅನುಷ್ಠಾನ ಶತಸಿದ್ಧ. ಬಡ್ತಿಯಲ್ಲಿನ ತೊಡಕು ನಿವಾರಣೆ, ಪ್ರತ್ಯೇಕ ನೇಮಕಾತಿ ನಡೆಸಲು ಶಕ್ತಿಮೀರಿ ಶ್ರಮಿಸುತ್ತಿದ್ದೇವೆ. 371(ಜೆ) ಕಲಂ ಬಗ್ಗೆ ಸಮಸ್ಯೆಗಳಿದ್ದರೆ ಚರ್ಚಿಸಿ ಪರಿಹರಿಸೋಣ. ಆದರೆ, ಪಕ್ಷಾತೀತವಾಗಿ ಕಲ್ಯಾಣದವರೆಲ್ಲೂ ಏಕಧ್ವನಿಯಲ್ಲಿ 371(ಜೆ) ಕಲಂ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸಬೇಕಿದೆ’ ಎಂದು ಅವರು ಹೇಳಿದರು.
ಹೋರಾಟ ಸಮಿತಿ ಗೌರವಾಧ್ಯಕ್ಷ ಬಸವರಾಜ ದೇಶಮುಖ, ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಮೇಯರ್ ಅಜ್ಮಲ್ ಗೋಲಾ, ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ ಹರವಾಳ, ಗುಲಬರ್ಗಾ ವಿವಿ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ, ಕುಲಸಚಿವ ಪ್ರೊ.ರಮೇಶ ಲಂಡನಕರ್, ಕೆಕೆಸಿಸಿಐ ಅಧ್ಯಕ್ಷ ಶರಣು ಪಪ್ಪಾ, ಚಿಂತಕ ಆರ್.ಕೆ.ಹುಡಗಿ, ಮಾಜಿ ಸಚಿವ ರೇವೂ ನಾಯಕ ಬೆಳಮಗಿ, ಶರಣ ಬಸವ ವಿವಿ ಕುಲಪತಿ ಪ್ರೊ.ಅನಿಲಕುಮಾರ ಬಿಡವೆ, ಕೆಬಿಎನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸೈಯದ್ ಶಹಾ ಮುಸ್ತಫಾ ಹುಸೇನಿ, ಸರ್ವಜ್ಞ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ.ಚನ್ನಾರಡ್ಡಿ ಪಾಟೀಲ, ಫಾದರ್ ಜೋಸೆಫ್ ಪ್ರವೀಣ ಸೇರಿದಂತೆ ಹಲವರು ಹಾಜರಿದ್ದರು.
ಪರಿಶ್ರಮ ಬಿಚ್ಚಿಟ್ಟ ಸಚಿವ ಪ್ರಿಯಾಂಕ್
‘ಎನ್‌ಡಿಎ ಮೈತ್ರಿಕೂಟದಲ್ಲೇ ಇದ್ದರೂ ಚಂದ್ರಬಾಬು ನಾಯ್ಡು, ನಿತೀಶಕುಮಾರ್ ಅವರಿಗೆ ಇಂದಿಗೂ 371 ಕಲಂ ಸೌಲಭ್ಯ ಪಡೆಯಲು ಸಾಧ್ಯವಾಗಿಲ್ಲ. ಮಲ್ಲಿಕಾರ್ಜುನ ಖರ್ಗೆ ಅವರು 371(ಜೆ) ಜಾರಿಗೆ ಹಾಕಿದ ಶ್ರಮ, ಪಟ್ಟ ಕಷ್ಟ ಅಷ್ಟಿಷ್ಟಲ್ಲ’ ಎಂದು ಸಚಿವ ಪ್ರಿಯಾಂಕ್ ಸತ್ಯ ಸಂಗತಿಯೊಂದನ್ನು ಬಿಚ್ಚಿಟ್ಟರು.
‘ಅದು 2009. ಮಲ್ಲಿಕಾರ್ಜುನ ಖರ್ಗೆ ಅವರು ಮೊದಲ ಸಲ ಸಂಸತ್ ಚುನಾವಣೆಗೆ ಸ್ಪರ್ಧಿಸಿದ್ದರು. ಕಲಬುರಗಿಯ ಎನ್‌ವಿ ಮೈದಾನದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಗೆ ಆಗ ರಾಹುಲ್ ಗಾಂಧಿ ಬಂದಿದ್ದರು. ಅವರ ಭಾಷಣದ ಅಂಶಗಳನ್ನು ನಾನು ಹಾಗೂ ಅವರ ಕೆಲ ಅಧಿಕಾರಿಗಳು ಸಿದ್ಧಪಡಿಸಿದ್ದೆವು. ಅದರಲ್ಲಿ ನಾನು 371 ಕಲಂ ಸಾಂವಿಧಾನಿಕ ತಿದ್ದುಪಡಿ ಬಗ್ಗೆ ಸೇರಿಸಿದ್ದೆ. ಆದರೆ, ಅವರ ಅಧಿಕಾರಿಗಳು ತೆಗೆದು ಹಾಕಿದರು. ರಾಹುಲ್ ಅವರೊಂದಿಗೆ ಚರ್ಚಿಸಿದಾಗಲೂ, ಅದು ಸಂವಿಧಾನ ತಿದ್ದುಪಡಿ ಬೇಡುವ ಭರವಸೆ. ಸಾರ್ವಜನಿಕ ಸಭೆಯಲ್ಲಿ ಇಷ್ಟು ದೊಡ್ಡ ಭರವಸೆ ಕೊಡುವುದು ಕಷ್ಟ ಎಂದರು. ಮತ್ತೆ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ಚರ್ಚಿಸಿದರೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ರಾಹುಲ್ ಗಾಂಧಿ ಕುರ್ಚಿಯಿಂದ ಎದ್ದು ಭಾಷಣ ಮಾಡಲು ಮುಂದಾದಾಗ ನಾನು 371 ಕಲಂ ತಿದ್ದುಪಡಿಯ ವಾಗ್ದಾನ ಪ್ರತಿಯನ್ನು ಅವರ ಭಾಷಣದ ಪ್ರತಿಗಳಲ್ಲಿ ಸೇರಿಸಿದೆ. ಅದನ್ನು ರಾಹುಲ್ ಗಾಂಧಿ ನೋಡಿದರು. ನಾನು ಸುಮ್ಮನೆ ಕೈ ಮುಗಿದೆ. ಅಂತಿಮವಾಗಿ ಅವರು ಸಾರ್ವಜನಿಕವಾಗಿ ಅದನ್ನು ಘೋಷಿಸಿದರು. ಕಾಂಗ್ರೆಸ್ ಪಕ್ಷವು ಜನರಿಗೆ ಕೊಟ್ಟ ಮಾತು ತಪ್ಪಲ್ಲ ಎಂಬುದಕ್ಕೆ 371(ಜೆ) ಕಲಂ ಜಾರಿಯೇ ನಿದರ್ಶನ’ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.