
ಅರಣ್ಯ ಹುತಾತ್ಮರ ದಿನ ಇಂದು: ಜನಮನದಲ್ಲಿ ಶ್ರೀನಿವಾಸ್ ಅಮರ
ಹನೂರು: ಪ್ರಾಮಾಣಿಕ ಸೇವೆ, ಜನಪರ ಆಡಳಿತ ಹಾಗೂ ಜನಸ್ನೇಹಿ ವ್ಯಕ್ತಿತ್ವದ ಮೂಲಕ ತಾಲ್ಲೂಕಿನ ಗಡಿ ಭಾಗದ ಜನರ ಮನಸ್ಸಿನಲ್ಲಿ ಪೂಜನೀಯ ಸ್ಥಾನ ಪಡೆದಿದ್ದಾರೆ ದಿವಂಗತ ಪಿ.ಶ್ರೀನಿವಾಸ್.
1991, ಅ.11ರಂದು ತಾಲ್ಲೂಕಿನ ಎರಕೆಯಂ ಅರಣ್ಯ ಪ್ರದೇಶದಲ್ಲಿ ಕಾಡುಗಳ್ಳ ವೀರಪ್ಪನ್ ಗುಂಡಿಗೆ ಬರ್ಬರವಾಗಿ ಬಲಿಯಾದ ಅರಣ್ಯ ಇಲಾಖೆಯ ಅಂದಿನ ಡಿಸಿಎಫ್ ಪಿ.ಶ್ರೀನಿವಾಸ್ ದೈಹಿಕವಾಗಿ ದೂರವಾಗಿ ಮೂರುವರೆ ದಶಕಗಳು ಕಳೆದರೂ ಇಂದಿಗೂ ಸ್ಥಳೀಯರ ಮನಸ್ಸಿನಲ್ಲಿ ಭದ್ರವಾದ ಸ್ಥಾನ ಪಡೆದಿದ್ದಾರೆ.
ತಾಲ್ಲೂಕಿನ ಗೋಪಿನಾಥಂ ಗ್ರಾಮದಲ್ಲಿರುವ ಮಾರಮ್ಮನ ದೇವಸ್ಥಾನದೊಳಗೆ ಪಿ.ಶ್ರೀನಿವಾಸ್ ಭಾವಚಿತ್ರವನ್ನು ಇರಿಸಿ ಪೂಜಿಸಲಾಗುತ್ತಿದೆ. ಗ್ರಾಮದ 40ಕ್ಕೂ ಹೆಚ್ಚು ಮನೆಗಳಲ್ಲಿ ದೇವರ ಫೋಟೊಗಳ ಪಕ್ಕದಲ್ಲಿ ಶ್ರೀನಿವಾಸ್ ಅವರ ಚಿತ್ರಕ್ಕೆ ಜಾಗ ಮೀಸಲಿಸಲಾಗಿದೆ. ಗ್ರಾಮದ ಪ್ರಮುಖ ರಸ್ತೆಗೆ ಅವರ ಹೆಸರನಿಟ್ಟು ಗೌರವ ಸಲ್ಲಿಸಲಾಗಿದೆ.
ಸರ್ಕಾರಿ ಅಧಿಕಾರಿಯೊಬ್ಬರು ಜನರ ಮನಸ್ಸಿನಲ್ಲಿ ಪೂಜನೀಯ ಸ್ಥಾನ ಪಡೆದುಕೊಳ್ಳಲು ಹಲವು ಕಾರಣಗಳಿವೆ. ದಶಕಗಳ ಹಿಂದೆ ಕಾಡಿನಲ್ಲಿ ವನ್ಯಜೀವಿಗಳನ್ನು ಕೊಂದು ಅಟ್ಟಹಾಸ ಮೆರೆಯುತ್ತಿದ್ದ, ಪ್ರಾಕೃತಿಕ ಸಂಪತ್ತನ್ನು ದೋಚುತ್ತಿದ್ದ ವೀರಪ್ಪನ್ ಸೆರೆ ಕಾರ್ಯಾಚರಣೆಯ ನೇತೃತ್ವ ವಹಿಸಿದವರ ಪೈಕಿ ಪಿ.ಶ್ರೀನಿವಾಸ್ ಪ್ರಮುಖರು.
ವೀರಪ್ಪನ್ ಅಟ್ಟಹಾಸ ಅಡಗಿಸುವುದು ಒಂದು ಭಾಗವಾದರೆ, ಹಿರಿಯ ಅಧಿಕಾರಿ ಎಂಬ ಹಮ್ಮು–ಬಿಮ್ಮು ಇಲ್ಲದೆ ಕಾಡಂಚಿನ ಗ್ರಾಮಗಳ ಜನರ ಜೊತೆ ಆತ್ಮೀಯವಾಗಿ ಬೆರೆತು ಅವರ ಕಷ್ಟಸುಖಗಳಿಗೆ ಸ್ಪಂದಿಸುತ್ತ ಜನರ ಅಧಿಕಾರಿ ಎಂದೇ ಹೆಸರು ಪಡೆದುಕೊಂಡಿದ್ದರು. ಇಲಾಖೆ ಹಾಗೂ ಅರಣ್ಯವಾಸಿಗಳ ನಡುವೆ ವೈಮನಸ್ಸಿನಿಂದ ನಿರ್ಮಾಣವಾಗಿದ್ದ ಕಂದಕವನ್ನು ಮುಚ್ಚಿದ್ದರು.
1990ರಲ್ಲಿ ಗೋಪಿನಾಥಂ-ಹೊಗೇನಕಲ್ ಮಾರ್ಗ ಮಧ್ಯೆ ಇನ್‌ಸ್ಪೆಕ್ಟರ್ ದಿನೇಶ್ ಅವರನ್ನು ವೀರಪ್ಪನ್ ಗುಂಡು ಹಾರಿಸಿ ಹತ್ಯೆ ಮಾಡಿದಾಗ ಇಡೀ ಗ್ರಾಮದ ಜನರು ಭಯಭೀತರಾಗಿ ಊರು ತೊರೆದು ತಮಿಳುನಾಡಿಗೆ ಹೋಗಿದ್ದರು. ಈ ಸಂದರ್ಭ ಅರಣ್ಯ ಇಲಾಖೆ ನಿಮ್ಮೊಂದಿಗಿದೆ ಎಂದು ಅಭಯ ನೀಡಿ ಗ್ರಾಮಸ್ಥರಿಗೆ ಆತ್ಮಸ್ಥೈರ್ಯ ತುಂಬಿ ಮರಳಿ ಕರೆತಂದಿದ್ದನ್ನು ಸ್ಥಳೀಯರು ಇಂದಿಗೂ ಸ್ಮರಿಸಿಕೊಳ್ಳುತ್ತಾರೆ.
ಇದೇ ಕಾರಣಕ್ಕೆ ಗೋಪಿನಾಂಥಂ ಗ್ರಾಮದಲ್ಲಿ ಹಬ್ಬ ಉತ್ಸವಗಳು ನಡೆಯುವಾಗ ಊರಿನ ಹೆಬ್ಬಾಗಿಲಿನಲ್ಲಿ ಶ್ರೀನಿವಾಸ್ ಅವರ ಕಟೌಟ್ ನಿಲ್ಲಿಸಿ ಗೌರವ ಸಲ್ಲಿಸುತ್ತಾರೆ.
ಅರಣ್ಯ ಇಲಾಖೆ ಕೂಡ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಯನ್ನು ಪ್ರತಿವರ್ಷ ಸೆ.11ರಂದು ಅರಣ್ಯ ಹುತಾತ್ಮರ ದಿನದಂದು ಸ್ಮರಿಸಿ ಗೌರವ ಸಲ್ಲಿಸುತ್ತಾ ಬಂದಿದೆ. ಶ್ರೀನಿವಾಸ್ ಬಲಿಯಾದ ಎರಕೆಯಂ ಅರಣ್ಯ ಪ್ರದೇಶದಲ್ಲಿ ಹುತಾತ್ಮರ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ.
ಅರಣ್ಯಾಧಿಕಾರಿಯಾಗಿ ಇಲಾಖೆಯ ಕರ್ತವ್ಯವನ್ನು ದಕ್ಷವಾಗಿ ನಿರ್ವಹಿಸುವುದರ ಜೊತೆಗೆ ಗ್ರಾಮಸ್ಥರ ವಿಶ್ವಾಸಗಳಿಸಿ ಶ್ರೀನಿವಾಸ್ ಅವರು ಸಲ್ಲಿಸಿದ ಸೇವೆ ಸ್ಮರಣೀಯ. ಅವರ ಜನಪರ ಕಾರ್ಯಗಳು ಇಂದಿಗೂ ಅವರನ್ನು ಅಮರರನ್ನಾಗಿಸಿವೆ. ಇಲಾಖೆ ಸಹ ಪೊನ್ನಾಚಿ ಕ್ರಾಸ್‌ನಿಂದ ಎರಕೆಯಂ ಸಂಪರ್ಕ ಕಲ್ಪಿಸುವ 14 ಕಿ.ಮೀ ಕಾಡುದಾರಿಗೆ ಶ್ರೀನಿವಾಸ್ ಅವರ ಹೆಸರನ್ನಿಟ್ಟು ಗೌರವ ಸಲ್ಲಿಸಿದೆ.
ಪಿ.ಶ್ರೀನಿವಾಸ್ ಅವರ ಕಾರ್ಯದಕ್ಷತೆ, ಉದಾತ್ತ ಕೆಲಸಗಳು ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆದರ್ಶ ಎನ್ನುತ್ತಾರೆ ಕಾವೇರಿ ವನ್ಯಧಾಮದ ಪ್ರಭಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ.ಮರಿಸ್ವಾಮಿ.