
ಲಕ್ಷ್ಮೇಶ್ವರ: ರಂಭಾಪುರಿ ಕಾಲೋನಿಯಲ್ಲಿ ಮೂಲ ಸೌಲಭ್ಯಕ್ಕೆ ಆಗ್ರಹಿಸಿ ಪ್ರತಿಭಟನೆ
ಲಕ್ಷ್ಮೇಶ್ವರ: ಪಟ್ಟಣದ ರಂಭಾಪುರಿ ಆಶ್ರಯ ಕಾಲೊನಿಗೆ ಮೂಲ ಸೌಲಭ್ಯ ಒದಗಿಸಬೇಕು ಎಂದು ಆಗ್ರಹಿಸಿ ಅಲ್ಲಿನ ನಿವಾಸಿಗಳು ಮಂಗಳವಾರ ಪುರಸಭೆ ಮುಖ್ಯಾಧಿಕಾರಿ ಪಿ.ಕೆ. ಗುಡದಾರೆ ಅವರಿಗೆ ಮನವಿ ಸಲ್ಲಿಸಿದರು.
‘ಕಾಲೊನಿ ಅಸ್ತಿತ್ವಕ್ಕೆ ಬಂದು ಮೂರು ದಶಕ ಕಳೆದರೂ ಇನ್ನೂ ಅಲ್ಲಿ ನಿವಾಸಿಗಳು ಕೆಲ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾಲೊನಿಯಲ್ಲಿ ಬೀದಿದೀಪಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮುಖ್ಯ ದಾರಿ ಪಕ್ಕ ಗಿಡಗಂಟೆಗಳು ಬೆಳೆದಿದ್ದು, ಸಂಚಾರ ಕಷ್ಟವಾಗಿದೆ. ಕುಡುಕರು, ಕಳ್ಳರ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಗಮನ ಹರಿಸಬೇಕು. ಕಾಲೊನಿಯ ಮುಖ್ಯ ಸ್ಥಳಗಳಲ್ಲಿ ಕಸದ ಡಬ್ಬಿಗಳನ್ನು ಅಳವಡಿಸಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸಬೇಕು. ಕಸ ಸಂಗ್ರಹಿಸುವ ವಾಹನ ಪ್ರತಿದಿನ ರಂಭಾಪುರಿ ನಗರಕ್ಕೆ ಬರುವಂತೆ ವ್ಯವಸ್ಥೆ ಮಾಡಬೇಕು’ ಎಂದು ಮನವಿ ಸಲ್ಲಸಿದರು.
ನಿವಾಸಿಗಳಾದ ಗೋವಿಂದಪ್ಪ ಅರಳಿಕಟ್ಟಿ, ಸುನಿಲ ಸರ್ವದೆ, ರಮೇಶ ದುರಗಣ್ಣವರ, ಅಕ್ಷಯ ಅಚಲಕರ, ಸೋಮಶೇಖರ ಕೊರದಾಳ, ಬಸವಣ್ಣೆಪ್ಪ ದೂಮಖಾತಿ, ಮುತ್ತು ದುರಗಣ್ಣವರ, ಪ್ರಜ್ಜಲ ಅಂಗಡಿ, ಪವನಸಿಂಗ್ ಕಿಲ್ಲೆದಾರ, ಬಸವರಾಜ ಕುಂದ್ರಳ್ಳಿ, ಸಿದ್ದಪ್ಪ ಶರಸೂರಿ, ಸುಷ್ಮಾ ಸರ್ವದೆ, ಮುಕ್ತಾ ಪೂಜಾರ, ಲಕ್ಷ್ಮೀ ಕಡಬಿ, ರತ್ನವ್ವ ಮಾಳದಕರ, ಶಾರದಾ ಭಜಂತ್ರಿ, ಮಹಾದೇವಿ ಸೊರಟೂರ, ಕಮಲಾ ಮಾಂಡ್ರೆ ಇದ್ದರು.