
ಪ್ರಜಾವಾಣಿ ವರದಿ ಪರಿಣಾಮ: ಶಿಡ್ಲಘಟ್ಟದ ಜರುಗಹಳ್ಳಿ ಕಾಲೊನಿ ಚರಂಡಿ ಸ್ವಚ್ಛ
ಶಿಡ್ಲಘಟ್ಟ: ಜರುಗಹಳ್ಳಿ ಕಾಲೊನಿ ಮೂಲಸೌಕರ್ಯ ಮತ್ತು ಸ್ವಚ್ಛತೆ ಸಮಸ್ಯೆ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸೆಪ್ಟೆಂಬರ್ 1ರಂದು ಸುದ್ದಿ ಪ್ರಕಟವಾಗಿತ್ತು. ಇದಕ್ಕೆ ಅಧಿಕಾರಿಗಳು ಸ್ಪಂದಿಸಿದ್ದಾರೆ.
ಸುದ್ದಿ ಪ್ರಕಟವಾದ ನಂತರ, ಮುಖ್ಯಮಂತ್ರಿ ವಿಶೇಷ ಕರ್ತವ್ಯಾಧಿಕಾರಿ ಕೆ.ವೈಷ್ಣವಿ ಅವರು ಸೆಪ್ಟೆಂಬರ್ 2ರಂದು ಅಧಿಕಾರಿಗಳಿಗೆ ಪತ್ರ ಬರೆದು, ಸಮಸ್ಯೆ ಪರಿಶೀಲಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು.
ಅದರಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲಿಸಿ ಕ್ರಮ ಕೈಗೊಂಡಿದ್ದಾರೆ.ಕಾಲೊನಿಯ ಚರಂಡಿಗಳಲ್ಲಿದ್ದ ಕಸ, ಕಡ್ಡಿ ಮತ್ತು ತ್ಯಾಜ್ಯ ತೆರವು ಮಾಡಿ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಇದರಿಂದ ಕೊಳಚೆ ನೀರು ಸರಾಗವಾಗಿ ಹರಿಯುತ್ತಿದೆ.
ರಾತ್ರಿ ವೇಳೆ ಬೀದಿ ದೀಪಗಳು ಉರಿಯದೆ ಕತ್ತಲೆ ಇತ್ತು. ಈಗ ಅಗತ್ಯವಿರುವ ಕಡೆ ಬೀದಿ ದೀಪಗಳನ್ನು ಅಳವಡಿಸಲಾಗಿದೆ. ಇದರಿಂದ ರಾತ್ರಿ ಸಂಚಾರಕ್ಕೆ ಅನುಕೂಲವಾಗಿದೆ.