ಕುಂದುಕೊರತೆ ಸಭೆ ನಡೆಸದ ಅಧಿಕಾರಿಗೆ ಶೋಕಾಸ್ ನೋಟಿಸ್: ಚಿಕ್ಕಬಳ್ಳಾ‍ಪುರ ಡಿಸಿ

ಕುಂದುಕೊರತೆ ಸಭೆ ನಡೆಸದ ಅಧಿಕಾರಿಗೆ ಶೋಕಾಸ್ ನೋಟಿಸ್: ಚಿಕ್ಕಬಳ್ಳಾ‍ಪುರ ಡಿಸಿ

ಕುಂದುಕೊರತೆ ಸಭೆ ನಡೆಸದ ಅಧಿಕಾರಿಗೆ ಶೋಕಾಸ್ ನೋಟಿಸ್: ಚಿಕ್ಕಬಳ್ಳಾ‍ಪುರ ಡಿಸಿ

ಚಿಕ್ಕಬಳ್ಳಾಪುರ: ಅಂಗವಿಕಲರ ಕುಂದುಕೊರತೆಗಳನ್ನು ಆಲಿಸಿ, ತಾಲ್ಲೂಕು ಹಂತದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ತಾಲ್ಲೂಕು ಮಟ್ಟದಲ್ಲಿ ನಿಯಮಿತವಾಗಿ ಕುಂದುಕೊರತೆ ಸಭೆಗಳನ್ನು ನಡೆಸಲು ವಿಫಲವಾಗಿರುವ ಸಂಬಂಧಪಟ್ಟ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಿ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಪ್ರಭು ಸೂಚಿಸಿದರು.

ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಅಂಗವಿಕಲರ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯಲ್ಲಿ ಮಾತನಾಡಿದರು.

ಅಂಗವಿಕಲರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಪ್ರತಿ ಬಾರಿ ಜಿಲ್ಲಾ ಕಚೇರಿಗೆ ಬರುವ ಪರಿಸ್ಥಿತಿ ನಿರ್ಮಾಣ ಆಗಬಾರದು. ತಾಲ್ಲೂಕು ಹಂತದಲ್ಲಿಯೇ ಸಮಸ್ಯೆಗಳನ್ನು ಪರಿಹರಿಸಬೇಕು. ಸರ್ಕಾರದ ಸೌಲಭ್ಯಗಳು ಮತ್ತು ಸೇವೆಗಳನ್ನು ಅರ್ಹರಿಗೆ ಸಮರ್ಪಕವಾಗಿ ಒದಗಿಸಬೇಕು ಎಂದರು.

ಪ್ರತಿ ಸರ್ಕಾರಿ ಕಚೇರಿ ಹಾಗೂ ಆಸ್ಪತ್ರೆಗಳಲ್ಲಿ ರ‍್ಯಾಂ‍ಪ್ ಅಥವಾ ಲಿಫ್ಟ್ ವ್ಯವಸ್ಥೆ ಇರಬೇಕು. ಜಿಲ್ಲೆಯಲ್ಲಿ ರ‍್ಯಾಂ‍ಪ್ ಸೌಲಭ್ಯ ಇಲ್ಲದ ಕಚೇರಿಗಳು ಮತ್ತು ಆಸ್ಪತ್ರೆಗಳ ಮಾಹಿತಿಯನ್ನು ಪಟ್ಟಿ ಮಾಡಿ ಜಿಲ್ಲಾ ಮಟ್ಟದಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಅಂಗವಿಕಲ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘ- ಸಂಸ್ಥೆಗಳು ಹಾಗೂ ಎಂಆರ್‌ಡಬ್ಲ್ಯು , ಯುಆರ್‌ಡಬ್ಲ್ಯು, ವಿ.ಆರ್‌ಡಬ್ಲ್ಯುಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ನಡೆಯುವ ಸರ್ಕಾರಿ ಕಟ್ಟಡ ಕಾಮಗಾರಿಗಳಲ್ಲಿ ರ‍್ಯಾಂ‍ಪ್ ವ್ಯವಸ್ಥೆ ಅಳವಡಿಸಿರುವ ಬಗ್ಗೆ ಎಲ್ಲಾ ಕಾರ್ಯಪಾಲಕ ಎಂಜಿನಿಯರ್‌ಗಳಿಂದ ದೃಢೀಕರಣ ಪತ್ರ ಪಡೆಯಬೇಕು ಎಂದು ಅಂಗವಿಕಲರ ಕಲ್ಯಾಣಾಧಿಕಾರಿಗೆ ನಿರ್ದೇಶನ ನೀಡಿದರು.

ಒಂದು ತಿಂಗಳೊಳಗೆ ಉದ್ಯೋಗ ಮೇಳ: ಅಂಗವಿಕಲರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಮುಂದಿನ ಒಂದು ತಿಂಗಳೊಳಗಾಗಿ ಉದ್ಯೋಗ ಮೇಳ ಆಯೋಜಿಸಬೇಕು. ಮೇಳದಲ್ಲಿ ಅಂಗವಿಕಲರಿಗೆ ಆದ್ಯತೆ ನೀಡಿ ಉದ್ಯೋಗ ದೊರಕಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಉದ್ಯೋಗಾಧಿಕಾರಿಗೆ ತಿಳಿಸಿದರು.

ಆಧಾರ್ ಕಾರ್ಡ್ ಮಾಡಿಸಲು ಅಥವಾ ತಿದ್ದುಪಡಿಗೆ ತಂತ್ರಾಂಶದಲ್ಲಿ ಬೆರಳಚ್ಚು ಸ್ವೀಕರಿಸದ ಸಂದರ್ಭದಲ್ಲಿ ತಾಲ್ಲೂಕು ಮಟ್ಟದ ಆಹಾರ ನಿರೀಕ್ಷಕರ ಮೂಲಕ ಪ್ರಮಾಣಪತ್ರ ನೀಡಿ ಅರ್ಹರಿಗೆ ಸೌಲಭ್ಯಗಳು ದೊರೆಯುವಂತೆ ಕ್ರಮವಹಿಸಬೇಕು ಎಂದರು.

ಜಿಲ್ಲೆಯ 22 ಸಾವಿರ ಅಂಗವಿಕಲರು ಇದ್ದಾರೆ. ಈ ಪೈಕಿ ವಿದ್ಯಾರ್ಥಿಗಳನ್ನು‌ ಗುರುತಿಸಿ, ವಿದ್ಯಾರ್ಥಿವೇತನ ಹಾಗೂ ವಿದ್ಯಾರ್ಥಿ ಪ್ರೋತ್ಸಾಹ ಯೋಜನೆಗಳಡಿ ನೋಂದಣಿ ಮಾಡಿಸಲು ಅರಿವು ಮೂಡಿಸಬೇಕು. ಮೊಬೈಲ್ ಕ್ಲಿನಿಕ್ ಮೂಲಕ ಅವರು ಇರುವ ಸ್ಥಳಗಳಿಗೆ ತೆರಳಿ ನಿಯಮಿತ ಆರೋಗ್ಯ ತಪಾಸಣೆ ನಡೆಸಬೇಕು. ಅಂಗವಿಕಲ ಸ್ನೇಹಿ ಬಸ್‌ಗಳ ಸೌಲಭ್ಯ ಕಲ್ಪಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಸೂಲಾಗುವ ತೆರಿಗೆಯಶೇ 5ರಷ್ಟು ಮೊತ್ತವನ್ನು ಅಂಗವಿಕಲರ ಕಲ್ಯಾಣಕ್ಕೆ ಬಳಸುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಲಭ್ಯವಾಗುವಅನುದಾನದ ಮಾಹಿತಿ ಪಡೆದು, ಅದರಡಿ 2,000 ಅಂಗವಿಕಲರಿಗೆ ಅಗತ್ಯ ಸಾಧನ ಸಲಕರಣೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಅತಿಕ್ ಪಾಷ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಚೇತನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ವೆಂಕಟೇಶರೆಡ್ಡಿ, ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಜ್ಯೋತಿಲಕ್ಷ್ಮಿ ಮತ್ತಿತರರು ಪಾಲ್ಗೊಂಡಿದ್ದರು.

‘ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ಜಾಗ ಗುರುತಿಸಿ’

ಜಿಲ್ಲಾ ಕೇಂದ್ರದಲ್ಲಿ ಅಂಗವಿಕಲರ ಪುನರ್ವಸತಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಜಾಗ ಗುರುತಿಸಬೇಕು. ಕಟ್ಟಡ ನಿರ್ಮಾಣಕ್ಕೆ ಕ್ರಮವಹಿಸಬೇಕು. ವಿವಿಧ ಯೋಜನೆಗಳಡಿ ಬ್ಯಾಂಕ್ ಸಾಲ ಹಾಗೂ ಸಹಾಯಧನಕ್ಕೆ ಮಂಜೂರಾತಿಗೆ ಅಂಗವಿಕಲ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಲು ಕೆಲವು ಬ್ಯಾಂಕುಗಳು ನಿರ್ಲಕ್ಷ್ಯ ತೋರುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಎಲ್ಲಾ ಬ್ಯಾಂಕ್ ವ್ಯವಸ್ಥಾಪಕರ ಸಭೆ ಆಯೋಜಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ