
ಪ್ರತಾಪ್ ಸಿಂಹರಿಂದ ವಿಷಬೀಜ ಬಿತ್ತುವ ಕೆಲಸ: ದೇವಿಂದ್ರ ಕರದಳ್ಳಿ ಆಕ್ರೋಶ
ವಾಡಿ: ‘ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸ ಮಾಡಿ, ತಮ್ಮ ರಾಜಕೀಯ ಬೆಳೆ ಬೇಯಿಸಿಕೊಳ್ಳುತ್ತಿದ್ದಾರೆ’ ಎಂದು ಹಿರಿಯ ದಲಿತ ಮುಖಂಡ, ಪುರಸಭೆ ಮಾಜಿ ಉಪಾಧ್ಯಕ್ಷ ದೇವಿಂದ್ರ ಕರದಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ದಲಿತ ಸಮುದಾಯದ ಬಗ್ಗೆ ಅವಹೇಳನಕಾರಿ ಹಾಗೂ ಹಗುರವಾಗಿ ಮಾತನಾಡಿರುವ ಬಿಜೆಪಿಯ ಮಾಜಿ ಸಂಸದರು ಇಡೀ ದಲಿತ ಸಮುದಾಯವನ್ನು ಕೆರಳಿಸಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಿಂದ ಇಂದು ಎಲ್ಲರಿಗೂ ಸಮಾನ ಹಕ್ಕು ಸಿಕ್ಕಿದೆ. ಅಂತಹ ಸಂವಿಧಾನವನ್ನು ತಲೆಮೇಲೆ ಹೊತ್ತುಕೊಳ್ಳಬೇಕಾದವರು ದಲಿತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದು ಖಂಡನೀಯ’ ಎಂದು ಹೇಳಿದ್ದಾರೆ.
‘ಅಧಿಕಾರ ಕಳೆದುಕೊಂಡ ಬಳಿಕ ಪ್ರಚಾರಕ್ಕಾಗಿ ಇಂತಹ ಪ್ರಚೋದನಕಾರಿ ಹೇಳಿಕೆ ನೀಡುತ್ತಿರುವ ಅವರು ದಲಿತ ಸಮುದಾಯದ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಜಿಲ್ಲೆಯಾದ್ಯಂತ ದಲಿತ ಸಂಘಟನೆಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸೇರಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ’ ಎಂದು ಎಚ್ಚರಿಸಿದ್ದಾರೆ.