
ಚಿಂಚೋಳಿ ಶಾಲೆ ಮಕ್ಕಳಿಗೆ ಐದು ವರ್ಷದಿಂದ ಉಚಿತ ಬಟ್ಟೆ, ಬ್ಯಾಗ್ ವಿತರಣೆ
ಚಿಂಚೋಳಿ: ಪುರಸಭೆ ವ್ಯಾಪ್ತಿಯ ಚಂದಾಪುರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಕಳೆದ ಐದು ವರ್ಷಗಳಿಂದ ಉಚಿತ ಬಟ್ಟೆ, ಬ್ಯಾಗ್ ಹಾಗೂ ಗುರುತಿನ ಚೀಟಿ ವಿತರಣೆಗೆ ಶಾಲೆಯ ಶಿಕ್ಷಕಿಯರಾದ ಫಿರ್ದೋಸ್ ತಹಸೀನ್ ಮತ್ತು ಖಾಲೀದಾ ಬೇಗಂ ಅವರು ಕೈಜೋಡಿಸಿದ್ದಾರೆ.
ಶಾಲೆಯ ಎಲ್ಲಾ ಮಕ್ಕಳಿಗೆ ಸ್ವಂತ ಹಣದಲ್ಲಿ ಬಿಳಿ ಬಟ್ಟೆಯನ್ನು ವಿತರಿಸುತ್ತಾ ಬಂದಿದ್ದು, ಮಕ್ಕಳು ಅವುಗಳನ್ನು ಹೊಲಿಸಿ ಪ್ರತಿ ಬುಧವಾರ ಮತ್ತು ಶನಿವಾರ ಧರಿಸಿಕೊಂಡು ಶಾಲೆಗೆ ಬರುತ್ತಿದ್ದಾರೆ.
ಮಕ್ಕಳ ಭವಿಷ್ಯ ನಿರ್ಮಾಣದ ಕೇಂದ್ರವಾದ ಶಾಲೆಯತ್ತ ಮಕ್ಕಳನ್ನು ಸೆಳೆಯಲು ಸರ್ಕಾರದ ಹಲವು ಯೋಜನೆಗಳಿದ್ದರೂ ಕೂಡ ಶಿಕ್ಷಕರು ತಮ್ಮ ಸ್ವಂತ ಹಣ ಖರ್ಚು ಮಾಡಿ ಶಾಲೆಯತ್ತ ಮಕ್ಕಳನ್ನು ಆಕರ್ಷಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಸಕಾರಾತ್ಮಕ ಬೆಳವಣಿಗೆಯಿಂದ ಶಾಲೆಯಲ್ಲಿ ಮಕ್ಕಳ ದಾಖಲಾತಿಯೂ ಹೆಚ್ಚುತ್ತಿದೆ.
‘2022-23ರಲ್ಲಿ 67, 2023-24ರಲ್ಲಿ 68, 2024-25ರಲ್ಲಿ 64, 2025-26ರಲ್ಲಿ 84, 2026-27ರಲ್ಲಿ 76 ಮಕ್ಕಳಿಗೆ ಫಿರ್ದೋಸ್ ತಸಹೀನ್ ಅವರು ಬಟ್ಟೆಗಳನ್ನು ವಿತರಿಸಿದ್ದಾರೆ. ಇನ್ನೋರ್ವ ಶಿಕ್ಷಕಿ ಖಾಲಿದಾ ಬೇಗಂ ಅವರು ಉಚಿತವಾಗಿ ಬ್ಯಾಗ್ ಮತ್ತು ಗುರುತಿನ ಚೀಟಿ ಮಾಡಿಸಿ ಕೊಟ್ಟಿದ್ದಾರೆ’ ಎಂದು ಮುಖ್ಯಶಿಕ್ಷಕರೂ ಆದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕಾಧ್ಯಕ್ಷ ಸುರೇಶ ಕೊರವಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಪ್ರತಿವರ್ಷ ಆಗಸ್ಟ್ 15ರಂದು ಮಕ್ಕಳಿಗೆ ಬಟ್ಟೆ, ಬ್ಯಾಗ್ ವಿತರಣೆ ಮಾಡಲಾಗುತ್ತದೆ. ಶಾಲೆಯೇ ನಮ್ಮ ಉಜ್ವಲ ಭವಿಷ್ಯಕ್ಕೆ ಕಾರಣವಾಗಿದೆ. ಸರ್ಕಾರಿ ಶಾಲೆಗೆ ಬರುವ ಮಕ್ಕಳು ಹೆಚ್ಚಾಗಿ ಬಡವರೇ ಇರುವುದರಿಂದ ಮಕ್ಕಳಿಗೆ ಬಟ್ಟೆ, ಬ್ಯಾಗ್ ನೀಡಲು ನಿರ್ಧರಿಸಿದ್ದೇವೆ’ ಎಂದು ಇಬ್ಬರು ಶಿಕ್ಷಕಿಯರು ತಿಳಿಸಿದರು.
‘ಶಿಕ್ಷಕಿಯರು ಶಾಲಾ ಮಕ್ಕಳಿಗೆ ಉಚಿತ ಬಟ್ಟೆ, ಬ್ಯಾಗ್, ಗುರುತಿನ ಚೀಟಿ ನೀಡುತ್ತಿರುವುದರಿಂದ ಮಕ್ಕಳು ಶಾಲೆಯತ್ತ ಆಕರ್ಷಿತರಾಗುತ್ತಿದ್ದಾರೆ ಇದರಿಂದ ದಾಖಲಾತಿಯೂ ಹೆಚ್ಚುತ್ತಿದೆ’ ಎಂದು ಉರ್ದು ಸಿಆರ್‌ಪಿ ಮಕ್ಸೂದ್ ಅಲಿ ವಿವರಿಸಿದರು.