ಕೈಕೊಟ್ಟಿದ್ದ ಟೊಮೆಟೊ ಬೆಳೆ ಈ ವರ್ಷ ಕೈ ಹಿಡಿಯಿತು: ಯುವ ರೈತನ ಮುಖದಲ್ಲಿ ಮಂದಹಾಸ

ಕೈಕೊಟ್ಟಿದ್ದ ಟೊಮೆಟೊ ಬೆಳೆ ಈ ವರ್ಷ ಕೈ ಹಿಡಿಯಿತು: ಯುವ ರೈತನ ಮುಖದಲ್ಲಿ ಮಂದಹಾಸ

ಕೈಕೊಟ್ಟಿದ್ದ ಟೊಮೆಟೊ ಬೆಳೆ ಈ ವರ್ಷ ಕೈ ಹಿಡಿಯಿತು: ಯುವ ರೈತನ ಮುಖದಲ್ಲಿ ಮಂದಹಾಸ

ಕಮಲನಗರ( ಬೀದರ್): ತಾಲ್ಲೂಕಿನ ಖತಗಾಂವ ಗ್ರಾಮದ ಯುವ ರೈತ ಬಾಲಾಜಿ ಪಾಂಚಾಳ ಅವರು ಟೊಮೆಟೊ ಬೆಳೆದು ಉತ್ತಮ ಆದಾಯ ಗಳಿಸುತ್ತಿದ್ದಾರೆ.

ಪ್ರಕೃತಿ ವಿಕೋಪ, ರೋಗ-ರುಜಿನಗಳ ಕಾಟ, ಬೆಲೆಯಲ್ಲಿ ಏರಿಳಿತ, ವೆಚ್ಚ ಹೆಚ್ಚಳದಿಂದಾಗಿ ಕೃಷಿಯಿಂದ ವಿಮುಖವಾಗುತ್ತಿರುವವರೇ ಹೆಚ್ಚಾಗಿರುವ ದಿನಗಳಲ್ಲಿ ಯುವ ರೈತನೊಬ್ಬ ಯೋಜನಾಬದ್ಧ ಹಾಗೂ ಆಧುನಿಕ ಪದ್ಧತಿ ಅಳವಡಿಸಿಕೊಂಡು ಟೊಮೆಟೊ ಕೃಷಿಯಲ್ಲಿ ಕೈತುಂಬ ಹಣ ಗಳಿಸುತ್ತ ಯಶಸ್ಸಿನ ಹಾದಿ ಸವೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ತಮ್ಮ 1ಎಕರೆ24 ಗುಂಟೆ ಜಮೀನಿನಲ್ಲಿ 20 ಗುಂಟೆಯಲ್ಲಿ ಶಾವು ತಳಿಯ 2600 ಟೊಮೆಟೊ ಸಸಿಗಳನ್ನು ಮಹಾರಾಷ್ಟ್ರದ ಕರಡಖೇಲ್ ನರ್ಸರಿಯಿಂದ ತಂದು ಸಾವಯವ ಗೊಬ್ಬರ ಬಳಸಿ ನಾಟಿ ಮಾಡಿದ್ದಾರೆ. ಉತ್ತಮ ಫಸಲು ಬಂದಿದ್ದು, ಭರ್ಜರಿ ಹಣ್ಣು ನೀಡುತ್ತಿದೆ. ‌

ತಂದೆ ವಿಶ್ವನಾಥ ಪಾಂಚಾಳ ಹಾಗೂ ಪತ್ನಿ ಜನಾಬಾಯಿ ಬಾಲಾಜಿ ಪಾಂಚಾಳ ಕೂಡ ಕೈಜೊಡಿಸುತ್ತಿರುವುದರಿಂದ ಅನುಕೂಲವಾಗಿದೆ. ಮನೆಯವರೇ ಹೊಲದಲ್ಲಿ ದುಡಿದು ಎಲ್ಲ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಕಾಳಜಿಯಿಂದ ಉತ್ತಮ ಇಳುವರಿ ಬರುತ್ತಿದೆ ಎನ್ನುತ್ತಾರೆ ಬಾಲಾಜಿ.

ವಾರದಲ್ಲಿ 15 ರಿಂದ 20 ಕ್ವಿಂಟಾಲ್ ಟೊಮೆಟೊ ಇಳುವರಿ ಬರುತ್ತಿದ್ದು, ಔರಾದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈವರೆಗೆ ಬರೋಬ್ಬರಿ ₹ 50 ಸಾವಿರ ಆದಾಯ ಗಳಿಸಿದ್ದಾರೆ. ಸತತ ಪ್ರಯತ್ನವೇ ಸಾಧನೆಗೆ ಸ್ಫೂರ್ತಿ ಎನ್ನುವಂತೆ ಹಿಂದಿನ ವರ್ಷ ಇದೇ ಜಾಗದಲ್ಲಿ ಬೆಳೆದಿದ್ದ ಟೊಮೆಟೊ ಬೆಳೆ ಉತ್ತಮ ಬೆಲೆ ಸಿಗದೆ ಜಮೀನಿನಲ್ಲಿ ಕೊಳೆತು ನಷ್ಟ ಉಂಟಾಗಿತ್ತು. ಛಲ ಬಿಡದ ಯುವ ರೈತ ಈ ವರ್ಷ ಟೊಮ್ಯಾಟೋ ಬೆಳೆದು ಕೈ ತುಂಬ ಆದಾಯ ಸಂಪಾದಿಸುತ್ತಿದ್ದಾರೆ.

ಸಮೃದ್ಧವಾಗಿ ಬೆಳೆದ ಟೊಮೆಟೊ ಬೆಳೆ

ಸಸಿಗಳನ್ನು ಅಂತರದಲ್ಲಿ ನಾಟಿ ಮಾಡಿ 30 ದಿನಗಳಲ್ಲಿ ಬಿದಿರು ಕೋಲು ಅಡ್ಡಲಾಗಿ ಬಿಗಿದು ಬೆಳೆ ಕೆಡದಂತೆ ಎಚ್ಚರ ವಹಿಸಿದ್ದರಿಂದ ಬಂಪರ್ ಬೆಳೆ ಬಂದಿದೆ. ಎರಡರಿಂದ ಮೂರು ತಿಂಗಳವರೆಗೆ ಪ್ರತಿದಿನ ಕಾಯಿಗಳನ್ನು ನೀಡುತ್ತದೆ. ಸದ್ಯಕ್ಕೆ ಭರಪೂರ ಬೆಳೆ ಬಂದಿದ್ದು, ನಿರೀಕ್ಷಿತ ಆದಾಯ ಪಡೆಯುತ್ತಿದ್ದಾರೆ.

ಬಾಲಾಜಿ ಪಾಂಚಾಳ ಪ್ರತಿದಿನ ಟೊಮ್ಯಾಟೋ ಔರಾದ ಮಾರುಕಟ್ಟೆಗೆ ಕೊಂಡೊಯ್ದು ಮಾರುತ್ತಿದ್ದಾರೆ. ಪ್ರತಿ ಕ್ರೇಟ್‌ಗೆ ₹200 ರಿಂದ ₹ 250 ದರ ಸಿಗುತ್ತಿದೆ. ಕೃಷಿಯಲ್ಲಿ ಆಸಕ್ತಿಯಿಂದ ದುಡಿದರೆ ಬೇಕಾದಷ್ಟು ಸಾಧನೆ ಮಾಡಬಹುದು ಎನ್ನುತ್ತಾರೆ.

ಟೊಮೆಟೊ ಬೆಳೆಯಲ್ಲಿ ಹೆಚ್ಚು ಆದಾಯ ಪಡೆಯಲು ಸಾಧ್ಯವಾಗುತ್ತಿದೆ ಎಂದು ಮನಗಂಡು ಇನ್ನೂ 20 ಗುಂಟೆಯಲ್ಲಿ ಟೊಮ್ಯಾಟೋ ಹಾಗೂ 20 ಗುಂಟೆಯಲ್ಲಿ ಕೊತ್ತಂಬರಿ ಬೆಳೆ ಬೆಳೆಸಿದ್ದಾರೆ. ಸಾಧಾರಣ ಜಮೀನಿನಲ್ಲೂ ಮನಸ್ಸು ಮಾಡಿದರೆ ಉತ್ತಮ ಆದಾಯ ಪಡೆಯಬಹುದು ಎನ್ನುವುದಕ್ಕೆ ಬಾಲಾಜಿ ಹಾಗೂ ತಂದೆ ವಿಶ್ವನಾಥ ಪಾಂಚಾಳ ಸಾಕ್ಷಿಯಾಗಿದ್ದಾರೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿ ಅಂಬಿಕಾ ಪ್ರಭಾ ಹೇಳುತ್ತಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ