
ಕೆಪಿಸಿಸಿ ಅಧ್ಯಕ್ಷರ ಸಮ್ಮುಖದಲ್ಲೇ ಪ್ರದೀಪ್ ವಿರುದ್ಧ ಮುಖಂಡರ ಕಿಡಿ
ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ತೀವ್ರ ಆಕ್ರೋಶಗೊಂಡಿರುವ ಕಾಂಗ್ರೆಸ್ ನಾಯಕರ ನಿಯೋಗ ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಅವರನ್ನು ಭೇಟಿ ಮಾಡಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿನ ಕಾಂಗ್ರೆಸ್ ಬೆಳವಣಿಗೆಗಳು ಮತ್ತು ಶಾಸಕರ ವರ್ತನೆಗಳ ಬಗ್ಗೆ ದೂರು ಹೇಳಿದರು.
ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಲ್ಲಿನಜಟಾಪಟಿ ಈ ಹಿಂದೆ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರ ಮಟ್ಟಕ್ಕೂ ತಲುಪಿತ್ತು. ಈಗ ಕೆಪಿಸಿಸಿ ಅಧ್ಯಕ್ಷರನ್ನೇ ಕೂರಿಸಿಕೊಂಡು ಮುಖಂಡರು ಮಾಹಿತಿ ನೀಡಿದ್ದಾರೆ.
ಮಾಜಿ ಸಚಿವ ಹಾಗೂ ಚಿಂತಾಮಣಿ ಶಾಸಕ ಡಾ.ಎಂ.ಸಿ ಸುಧಾಕರ್, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ರಕ್ಷಾ ರಾಮಯ್ಯ, ಚಿಕ್ಕಬಳ್ಳಾಪುರ ಮಾಜಿ ಶಾಸಕರಾದ ಕೆ.ಪಿ ಬಚ್ಚೇಗೌಡ, ಎಸ್.ಎಂ.ಮುನಿಯಪ್ಪ, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಮೋಹನ್ ರೆಡ್ಡಿ, ಜಿ.ಪಂ ಮಾಜಿ ಸದಸ್ಯ ಪ್ರಕಾಶ್, ನಗರಸಭೆ ಮಾಜಿ ಸದಸ್ಯ ರಫೀಕ್, ಮುಖಂಡರಾದ ಎಸ್.ಪಿ ಶ್ರೀನಿವಾಸ್, ಕೆ.ಆರ್.ರಾಜಣ್ಣ, ಎಸ್.ಎಂ.ಜಗದೀಶ್ ಹೀಗೆ ಅಪಾರ ಸಂಖ್ಯೆಯ ಕಾಂಗ್ರೆಸ್ ಮುಖಂಡರು ನಿಯೋಗದಲ್ಲಿ ಇದ್ದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರಕ್ಕೆ ಕೆಪಿಸಿಸಿಯಿಂದ ವೀಕ್ಷಕರನ್ನು ನೇಮಿಸಬೇಕು. ಸ್ಥಳೀಯವಾಗಿ ಮುಖಂಡರನ್ನು ಒಳಗೊಂದ ಸಮಿತಿ ರಚಿಸಬೇಕು. ವೀಕ್ಷಕರು ಮತ್ತು ಸಮಿತಿಯು ಪಕ್ಷದ ಬೆಳವಣಿಗೆಗಳ ಬಗ್ಗೆ ತೀರ್ಮಾನಕೈಗೊಳ್ಳಬೇಕು. ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಬರಲಿದೆ. ಆಗ ಪಕ್ಷಕ್ಕೆ ದುಡಿದವರಿಗೆ ಮಣೆ ಹಾಕಬೇಕು ಎಂದು ಮುಖಂಡರು ಕೋರಿದರು.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನಿರ್ದೇಶಕ ವೆಂಕಟೇಶ್ ಮಾತನಾಡಿ, ಚಿಕ್ಕಬಳ್ಳಾಪುರ ನಗರಸಭೆಯಲ್ಲಿ ಕಾಂಗ್ರೆಸ್‌ನ 18 ಸದಸ್ಯರು ಇದ್ದರು. ಅವರಲ್ಲಿ ಕೆಲವನ್ನು ಶಾಸಕ ಪ್ರದೀಪ್ ಈಶ್ವರ್ ಹೀನಾಯವಾಗಿ ಬೈದ ಕಾರಣ ಅವರು ಡಾ.ಕೆ.ಸುಧಾಕರ್ ಜೊತೆ ತೆರಳಿದರು. ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿಯೂ ಅಷ್ಟೇ ಅಂದಿನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ ಸುಧಾಕರ್ ನೇತೃತ್ವದಲ್ಲಿ ಚುನಾವಣೆಯ ಖರ್ಚು ವೆಚ್ಚವನ್ನು ನೋಡಿಕೊಳ್ಳಲಾಗಿತ್ತು. ಎರಡು ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತು. ಆದರೆ ಶಾಸಕರು ಗುಂಪುಗಾರಿಕೆ ಮಾಡಿದರು. ಈ ಪರಿಣಾಮ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿಯೂ ಸೋಲಾಯಿತು ಎಂದು ದೂರಿದರು.
ನಾನು ಕೋಚಿಮುಲ್ ನಿರ್ದೇಶಕನಾಗಿದ್ದೆ. ಚಿಮುಲ್ ಚುನಾವಣೆಯಲ್ಲಿ ನನ್ನ ವಿರುದ್ಧ ಯಲುವಳ್ಳಿ ರಮೇಶ್ ಅವರನ್ನು ಅಭ್ಯರ್ಥಿ ಮಾಡಿದರು. ಶಾಸಕರದ್ದು ಒಂದು ದಾರಿಯಾದರೆ ಮುಖಂಡರದ್ದು ಮತ್ತೊಂದು ದಾರಿಯಾಗಿದೆ. ಎಲ್ಲರನ್ನೂ ಒಗ್ಗಟ್ಟಿನಿಂದ ಕೊಂಡೊಯ್ಯುವಲ್ಲಿ ವಿಫಲರಾಗಿದ್ದಾರೆ ಎಂದರು.
ಕೆಪಿಸಿಸಿಯಿಂದ ವೀಕ್ಷಕರನ್ನು ನೇಮಿಸಬೇಕು. ಮುಖಂಡರ ಸಮಿತಿಯನ್ನೂ ರಚಿಸಿ. ವೀಕ್ಷಕರು ಮತ್ತು ಮುಖಂಡರ ಸಮಿತಿ ಪಕ್ಷದ ಹಿತದೃಷ್ಟಿಯಿಂದ ತೀರ್ಮಾನಗಳನ್ನು ಕೈಗೊಳ್ಳುವಂತೆ ಮಾಡಬೇಕು. ಜಿ.ಪಂ ಮತ್ತು ತಾ.ಪಂ ಚುನಾವಣೆಯಲ್ಲಿ ಯಾರಿಗೆ ಗೆಲ್ಲುವ ಸಾಮರ್ಥ್ಯವಿದೆಯೊ ಅವರನ್ನು ಗುರುತಿಸಿ ಟಿಕೆಟ್ ನೀಡಬೇಕು ಎಂದರು ಕೋರಿದರು.
ಮುಖಂಡ ‘ಮಿಲ್ಟನ್’ ವೆಂಕಟೇಶ್ ಮಾತನಾಡಿ, ‘ಸ್ವಂತ ಹಣ ವೆಚ್ಚ ಮಾಡಿ ಬೂತ್‌ಗಳಲ್ಲಿ ಕೆಲಸ ಮಾಡಿದ್ದೇವೆ. ಗೆಲ್ಲಿಸಿದ ಒಂದು ವಾರದಲ್ಲಿಯೇ ಕಚೇರಿಯಲ್ಲಿ ಹೊರ ನಡೆಯಿರಿ ಎಂದು ಶಾಸಕರು ಮುಖಂಡರನ್ನು ಹೊರಗೆ ಕಳುಹಿಸಿದರು. ಮನಸ್ಸಿಗೆ ನೋವು ಆಯಿತು. ಪಕ್ಷದ ಹಿತದ ಕಾರಣ ಸುಮ್ಮನಿದ್ದೆವು ಎಂದರು.
ನಾಮನಿರ್ದೇಶನ ವಿಚಾರವಾಗಿ ಎಲ್ಲವನ್ನೂ ಬಿಜೆಪಿಯವರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ. ನರೇಂದ್ರ ಮೋದಿ ಅವರ ಹಚ್ಚೆ ಹಾಕಿಸಿಕೊಂಡ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಿದ್ದಾರೆ. ಕಾರ್ಯಕರ್ತರು ಕಷ್ಟಗಳನ್ನು ಹೇಳಿಕೊಳ್ಳಬೇಕು ಎಂದರೆ ಶಾಸಕರ ಮನೆ ಚಿಕ್ಕಬಳ್ಳಾಪುರದಲ್ಲಿ ಇಲ್ಲ. ಯಾರ ಕೈಗೂ ಸಿಗುವುದಿಲ್ಲ. ಅವರ ನಡವಳಿಕೆಗಳ ಬಗ್ಗೆ ಮಾಹಿತಿ ತರಿಸಿಕೊಳ್ಳಿ. ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಸರ್ವನಾಶ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ‘ಲಾಯರ್’ ನಾರಾಯಣಸ್ವಾಮಿ ಮಾತನಾಡಿ, ಡಾ.ಕೆ.ಸುಧಾಕರ್ ಸೋಲಬೇಕು ಎನ್ನುವುದಷ್ಟೇ ನಮ್ಮ ಮುಂದಿತ್ತು. ಆ ಕಾರಣದಿಂದ ಎಲ್ಲ ಮುಖಂಡರು ಒಗ್ಗೂಡಿ ಕೆಲಸ ಮಾಡಿದರು. ಆದರೆ ಈಗ ಮುಖಂಡನ್ನೇ ವಿಶ್ವಾಸಕ್ಕೆ ಪಡೆಯುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲರ ಮಾತುಗಳನ್ನು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಆಲಿಸಿದರು.
‘ರಕ್ಷಾ ಸೋಲಿಗೆ ಮಾತೇ ಕಾರಣ’
ರಕ್ಷಾ ರಾಮಯ್ಯ ಅವರು ಲೋಕಸಭಾ ಚುನಾವಣೆಯಲ್ಲಿ ಸೋಲಲು ಶಾಸಕ ಪ್ರದೀಪ್ ಈಶ್ವರ್ ಮಾತು ಮತ್ತು ನಡವಳಿಕೆಗಳೇ ಕಾರಣ. ಯಾವುದೇ ಮುಖಂಡರಿಗೂ ಗೌರವವಿಲ್ಲ ಎಂದು ಮಿಲ್ಟನ್ ವೆಂಕಟೇಶ್ ತಿಳಿಸಿದರು.
‘30ನೇ ವಾರ್ಡ್‌ನಲ್ಲಿ ನಾವು ಹೆಚ್ಚು ಮತ ಕೊಡಿಸಿದೆವು. ನಮ್ಮ ವಾರ್ಡ್‌ಗೆ ಬರುವಾಗ ನಮಗೆ ಮಾಹಿತಿ ಇಲ್ಲ’ ಎಂದರು.
ರಕ್ಷಾ ರಾಮಯ್ಯ ಪ್ರವೇಶ ಕುತೂಹಲದ ನಡೆ
ಲೋಕಸಭಾ ಚುನಾವಣೆ ಸೋಲಿನ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ಬಹಿರಂಗವಾಗಿ ಮಾತನಾಡದ ರಕ್ಷಾ ರಾಮಯ್ಯ ಈಗ ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿನ ಕೆಲವು ಕಾಂಗ್ರೆಸ್ ಮುಖಂಡರು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಚಿಕ್ಕಬಳ್ಳಾಪುರ ಕಾಂಗ್ರೆಸ್ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಬಿಂಬಿಸುತ್ತಿದ್ದಾರೆ.
ಡಾ.ಎಂ.ಸಿ ಸುಧಾಕರ್ ಜೊತೆ ಗುರುತಿಸಿಕೊಂಡಿರುವ ಚಿಕ್ಕಬಳ್ಳಾಪುರ ಕಾಂಗ್ರೆಸ್ ನಾಯಕರು ರಕ್ಷಾ ರಾಮಯ್ಯ ಅವರ ಜೊತೆ ಉತ್ತಮ ಸಂಬಂಧ ಹೊಂದಿದ್ದಾರೆ.