
ವಿರೋಧ ಪಕ್ಷಗಳಿಂದ ಅಪಪ್ರಚಾರ: ಶಾಸಕ ಡಾ. ಮಂತರ್ ಗೌಡ
ಸೋಮವಾರಪೇಟೆ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿಗೆ ಸಾಕಷ್ಟು ಹಣ ನೀಡುತ್ತಿದ್ದು, ವಿರೋಧ ಪಕ್ಷಗಳು ಅಭಿವೃದ್ಧಿ ಸಹಿಸಲು ಸಾಧ್ಯವಾಗದೆ. ಸರ್ಕಾರದಲ್ಲಿ ಹಣವಿಲ್ಲದೆ ದಿವಾಳಿಯಾಗಿದೆ ಎಂದು ಅಪಪ್ರಚಾರದಲ್ಲಿ ತೊಡಗಿರುವುದು ವಿಪರ್ಯಾಸ ಎಂದು ಶಾಸಕ ಡಾ. ಮಂತರ್ ಗೌಡ ಅಭಿಪ್ರಾಯಪಟ್ಟರು.
ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ₹1.50 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿ ಹಾಗೂ ₹40 ಲಕ್ಷ ವೆಚ್ಚದಲ್ಲಿ ಸಿ.ಕೆ. ಸುಬ್ಬಯ್ಯ ರಸ್ತೆಯ ಮರು ಡಾಂಬರೀಕರಣ ಮತ್ತು ಇಂಟರ್ ಲಾಕ್ ಕಾಮಗಾರಿಗಳಿಗೆ ಸೋಮವಾರ ಭೂಮಿ ಪೂಜೆ ನೆರವೇರಿದ ಬಳಿಕ ಅವರು ಮಾತನಾಡಿ, ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿದ್ದು, ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ ಬೇಡ. ಎಲ್ಲರೂ ಸಹಕರಿಸಬೇಕು ಎಂದರು.
ಸೋಮವಾರಪೇಟೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಲಾಗುತ್ತಿದೆ. ಯಡೂರು ಗ್ರಾಮದ ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನ ಅವರಣದಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ ಸಂಬಂಧಪಟ್ಟ ಸಚಿವರು ಶೀಘ್ರ ಭೂಮಿ ಪೂಜೆ ನಡೆಸುವರು. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ₹8 ಕೋಟಿ ವೆಚ್ಚದ ಮಾರುಕಟ್ಟೆ ಮತ್ತು ವಾಹನ ನಿಲ್ದಾಣಕ್ಕೆ ಕ್ರಿಯಾ ಯೋಜನೆ ತಯಾರಿಸಿದ್ದು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಶತಮಾನೋತ್ಸವ ಕಟ್ಟಡ ಕಾಮಗಾರಿಯನ್ನು ₹2 ಕೋಟಿ ವೆಚ್ಚದಲ್ಲಿ ಮುಂದಿನ ವಾರದಲ್ಲಿ ಪ್ರಾರಂಭಿಸಲಾಗುವುದು. ಕೆಶಿಪ್ ಯೋಜನೆಯಲ್ಲಿ ರಾಜ್ಯ ಹೆದ್ದಾರಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಎಂಜಿನಿಯರ್‌ಗಳು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವಂತೆ ಕ್ರಮ ತೆಗೆದುಕೊಳ್ಳಬೇಕು. ಭೂಮಿಪೂಜೆಯಾದ ತಕ್ಷಣ ಕಾಮಗಾರಿ ಪ್ರಾರಂಭಿಸಬೇಕು. ಸ್ಥಳೀಯರು ಕೆಲಸ ನಡೆಯುವ ಸಂದರ್ಭ ಸಹಕರಿಸಬೇಕೆಂದು ಮನವಿ ಮಾಡಿದರು.
ಬಸವೇಶ್ವರ ದೇವಾಲಯದ ಅಬಿವೃದ್ಧಿ, ಅಕ್ಕನ ಬಳಗದ ಬಳಿಯ ಕಲ್ಯಾಣಿ ಅಭಿವೃದ್ಧಿ, ತಡೆಗೋಡೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನಡೆಸಲಾಯಿತು. ಪಟ್ಟಣ ಪಂಚಾಯಿತಿ ಸೂಡ ಅಧ್ಯಕ್ಷ ಕೆ.ಎ.ಆದಂ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಜಿ.ಎಂ.ಕಾಂತರಾಜು, ಪಕ್ಷದ ಹಿರಿಯರಾದ ಚಂದ್ರಮೌಳಿ, ಪ್ರಮುಖರಾದ ಬಿ.ಬಿ. ಸತೀಶ್, ಎ.ಪಿ. ವೀರರಾಜು, ಶೀಲಾ ಡಿಸೋಜ, ಚೇತನ್, ಎಂಜಿನಿಯರ್ ಹೇಮಂತ್ ಇದ್ದರು.