
ನರೇಗಾ: ₹ 107 ಕೋಟಿ ಬಿಡುಗಡೆಗೆ ಸಾಮಗ್ರಿ ಸರಬರಾಜುದಾರರ ಆಗ್ರಹ
ಕೋಲಾರ: ನರೇಗಾ ಯೋಜನೆಯಡಿ ಸರಬರಾಜು ಮಾಡಲಾದ ಸಾಮಗ್ರಿಗಳ ₹ 107 ಕೋಟಿ ಮೊತ್ತದ ಬಿಲ್‌ಗಳು ನಾಲ್ಕು ವರ್ಷಗಳಿಂದ ಬಾಕಿ ಉಳಿದಿದ್ದು, ತಕ್ಷಣವೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಜಿಲ್ಲಾ ನೋಂದಾಯಿತ ಸಾಮಗ್ರಿ ಸರಬರಾಜುದಾರು ಬುಧವಾರ ಜಿಲ್ಲಾ ಪಂಚಾಯಿತಿ ಕಚೇರಿಗೆ ಮನವಿ ಪತ್ರ ಒತ್ತಾಯಿಸಿದರು.
ಹಣ ಬಿಡುಗಡೆ ಮಾಡುವವರೆಗೆ ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆಲಸ ಮಾಡಲ್ಲ. ಜಿಲ್ಲಾ ಪಂಚಾಯಿತಿ ಮುಂದೆ ಸಾವಿರ ಜನ ಸೇರಿ ಅಹೋರಾತ್ರಿ ಧರಣಿ ನಡೆಸುತ್ತೇವೆ. ಅಲ್ಲೂ ಬಗೆಹರಿಯದಿದ್ದರೆ ರಾಜ್ಯಮಟ್ಟದಲ್ಲಿ ಧರಣಿ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾಮಗ್ರಿ ಸರಬರಾಜುದಾರರ ಅಧ್ಯಕ್ಷ ಮದನಹಳ್ಳಿ ಮಹೇಶ್ ಮಾತನಾಡಿ, ‘ನರೇಗಾ ಯೋಜನೆಯಡಿ 2022–23ನೇ ಸಾಲಿನಿಂದ 2026-27ನೇ ಸಾಲಿನವರೆಗೆ ವಿವಿಧ ಗ್ರಾಮ ಪಂಚಾಯಿತಿಗಳು ಮತ್ತು ಅನುಷ್ಠಾನ ಇಲಾಖೆಗಳ ವ್ಯಾಪ್ತಿಯಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳಿಗೆ ನಿಯಮಾನುಸಾರ ಸಾಮಗ್ರಿ ಪೂರೈಸಲಾಗಿದೆ. ವಿಶೇಷವಾಗಿ ಬೂದು ನೀರು ನಿರ್ವಹಣಾ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆಯ ಮೂಲಕ ಕಾರ್ಯಾದೇಶ ಪಡೆದು, ಶೇ 5 ರಷ್ಟು ಭದ್ರತಾ ಠೇವಣಿ ಪಾವತಿಸಿ ಸಾಮಗ್ರಿ ಸರಬರಾಜು ಮಾಡಲಾಗಿರುತ್ತದೆ. 4 ವರ್ಷಗಳಿಂದ ಅನುಷ್ಠಾನ ಇಲಾಖೆಗಳಿಗೆ ಸಾಮಗ್ರಿ ವೆಚ್ಚ ಬಿಡುಗಡೆಯಾಗಿರುವುದಿಲ್ಲ. ಜಿಲ್ಲಾ ಅನುಷ್ಠಾನ ಇಲಾಖೆಗಳ ಸಾಮಗ್ರಿ ವೆಚ್ಚ ಸೇರಿ ಸುಮಾರು ₹ 33 ಕೋಟಿ ಹಾಗೂ ಗ್ರಾಮ ಪಂಚಾಯಿತಿಗಳ ಸಾಮಗ್ರಿ ವೆಚ್ಚ ₹ 74ಕೋಟಿ ಸೇರಿದಂತೆ ಒಟ್ಟು ₹ 107 ಕೋಟಿ ಮೊತ್ತದ ಬಿಲ್‌ಗಳು ಪಾವತಿಯಾಗದೆ ಸಾಮಗ್ರಿ ಸರಬರಾಜುದಾರರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ’ ಎಂದು ಹೇಳಿದರು.
ಬ್ಯಾಂಕ್‌ಗಳಲ್ಲಿ ಸಾಲ, ಕೈಸಾಲ ಮಾಡಿ ಮನೆಯ ಒಡವೆಗಳನ್ನು ಅಡವಿಟ್ಟು ಗ್ರಾಮಗಳ ಅಭಿವೃದ್ಧಿಗೆ ಸಾಮಗ್ರಿಗಳನ್ನು ಪೂರೈಸಿದ್ದೇವೆ ಎಂದರು.
ಸಾಮಗ್ರಿ ಸರಬರಾಜು ಮಾಡಿದ ಮೂರರಿಂದ ಆರು ತಿಂಗಳ ಅವಧಿಯೊಳಗೆ ಸಾಮಗ್ರಿ ವೆಚ್ಚ ಪಾವತಿಸಬೇಕು ಹಾಗೂ ಭೌತಿಕವಾಗಿ ಕಾಮಗಾರಿ ಮುಕ್ತಾಯವಾದ ಮೇಲೆ ಶೇ 5ರಷ್ಟು ಭದ್ರತಾ ಠೇವಣಿಯನ್ನು ವಾಪಸ್ ನೀಡಬೇಕು ಎಂದು ಆಗ್ರಹಿಸಿದರು.
ಒಂಬುಡ್ಸ್‌ಮನ್‌ಗೆ ಸಲ್ಲಿಕೆಯಾಗುವ ದೂರುಗಳಲ್ಲಿ ಸೂಕ್ತ ದಾಖಲೆಗಳಿಲ್ಲದಿದ್ದಾಗ ಮತ್ತು ಸ್ಥಳ ಪರಿಶೀಲನೆ ವೇಳೆಯಲ್ಲಿ ದೂರುದಾರರು ಗೈರುಹಾಜರಾದರೆ, ಅಂತಹ ಅರ್ಜಿಗಳನ್ನು ವಜಾಗೊಳಿಸಿ ಸಾಮಗ್ರಿ ವೆಚ್ಚ ಪಾವತಿಗೆ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ನೋಂದಾಯಿತ ಸರಬರಾಜುದಾರರ ಕುಂದುಕೊರತೆ ಆಲಿಸಲು ಜಿ.ಪಂ ಸಿಇಒ ಅಧ್ಯಕ್ಷತೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ನಡೆಸಬೇಕು ಹಾಗೂ ವಿಬಿ ಜಿ ರಾಮ್ ಜಿ ಯೋಜನೆಯ ನೂತನ ಮಾರ್ಗಸೂಚಿಗಳ ಬಗ್ಗೆ ಅರಿವು ಮೂಡಿಸಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಅಧಿಕಾರಿ ಚಲಪತಿ, ‘ತಾವು ಉಲ್ಲೇಖಿಸಿರುವ ವಿವರಗಳೆಲ್ಲವೂ ಎಂಐಎಸ್‌ನಲ್ಲಿ ನಮೂದಾಗಿದ್ದು, ಸರ್ಕಾರದ ಗಮನದಲ್ಲಿದೆ. ಮನವಿಯನ್ನು ಸಿಇಒ ಮೂಲಕ ಸರ್ಕಾರದ ಗಮನಕ್ಕೆ ತರಲಾಗುವುದು’ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ನೋಂದಾಯಿತ ಸಾಮಗ್ರಿ ಸರಬರಾಜುದಾರರಾದ ಎಚ್.ಗೊಲ್ಲಹಳ್ಳಿ ಜಗದೀಶ್, ಮಾಸ್ತೇನಹಳ್ಳಿ ನಾರಾಯಣಸ್ವಾಮಿ, ಆಂಜನೇಯರೆಡ್ಡಿ, ತಿಪ್ಪಸಂದ್ರ ಸುಭಾಷ್, ಎಂ.ಬಿ.ಬೈರೇಗೌಡ, ವಿಟ್ಟಪ್ಪನಹಳ್ಳಿನಾರಾಯಣಸ್ವಾಮಿ, ಜಗದೀಶ್ ಅರಹಳ್ಳಿ, ಚಲಪತಿ, ಬೈರೇಗೌಡ, ಆಂಜಪ್ಪ, ರಮೇಶ್, ಪುರುಷೋತ್ತಮ, ನಂದೀಶ್, ಗಿರೀಶ್, ಆನಂದಕುಮಾರ್, ಶ್ರೀರಾಮರೆಡ್ಡಿ, ನಟರಾಜ್, ರಮೇಶ್, ಶ್ರೀಧರಮೂರ್ತಿ ಇದ್ದರು.