
ಪ್ರಜಾಸೇವಾ ಆಂದೋಲನ: ಸಚಿವ ಶಿವರಾಜ ತಂಗಡಗಿ ಅವರಿಂದ 910 ಅರ್ಜಿಗಳ ಸ್ವೀಕಾರ
ಗಂಗಾವತಿ: ‘ಪ್ರಜಾಸೇವಾ ಆಂದೋಲನವು ಸಾರ್ವಜನಿಕರ ಸೇವಾ ಸಭೆಯಾಗಿದೆ. ಸಮಸ್ಯೆಗಳನ್ನು ಹೊತ್ತು ಬರುವ ಅರ್ಜಿದಾರನ ಸಮಸ್ಯೆ ಇತ್ಯರ್ಥವಾಗಬೇಕು. ಇಲ್ಲದಿದ್ದರೆ ಹಿಂಬರಹ ನೀಡಬೇಕು. ಈ ವಿಚಾರದಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ನಗರದ ಅಮರಜ್ಯೋತಿ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನ ಸಭೆ ಉದ್ಘಾಟಿಸಿ ಮಾತನಾಡಿದ ಅವರು ‘ಅಧಿಕಾರಿಗಳು ಒಂದು ಬಾರಿ ಪರೀಕ್ಷೆ ಉತ್ತೀರ್ಣರಾದರೆ ಸಾಕು 60 ವರ್ಷ ಸೇವೆ ಸಲ್ಲಿಸಬಹುದು. ರಾಜಕೀಯ ವ್ಯಕ್ತಿಗಳಿಗೆ ಐದು ವರ್ಷಗಳಿಗೊಮ್ಮೆ ಪರೀಕ್ಷೆ ನಡೆಯುತ್ತದೆ. ಜನಸೇವೆ ಮಾಡದಿದ್ದರೆ ಮೂಲೆಗುಂಪು ಮಾಡುತ್ತಾರೆ. ಹಾಗಾಗಿ ಅಧಿಕಾರಿಗಳು ಜನರ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಿದಾಗ ಮಾತ್ರ, ನಾವು ಜನರ ಸೇವೆ ಮಾಡಲು ಸಾಧ್ಯ’ ಎಂದರು.
‘ಮುಖ್ಯಮಂತ್ರಿ ಆದೇಶದಂತೆ ಜಿಲ್ಲೆಯ 50 ಸಾವಿರ ಜನರಿಗೆ ನಿವೇಶನ ಕಲ್ಪಿಸಲು, ಈಗಾಗಲೇ 32,000 ನಿವೇಶನ ಸಾಮರ್ಥ್ಯದ ಜಮೀನು ಗುರುತಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 10 ಸಾವಿರ ನಿವೇಶನ ನೀಡುವ ಗುರಿ ಹೊಂದಲಾಗಿದೆ’ ಎಂದರು.
ಶಾಸಕ ಜಿ.ಜನಾರ್ದನ ರೆಡ್ಡಿ ಮಾತನಾಡಿ ‘ಸರ್ಕಾರದ ಪ್ರಜಾಸೇವೆ ಆಂದೋಲನ ಸಭೆ ಉತ್ತಮ ಕಾರ್ಯಕ್ರಮವಾಗಿದೆ. ಜನರ ಸಮಸ್ಯೆಗಳನ್ನು ಅಧಿಕಾರಿಗಳು ಪ್ರಾಮಾಣಿಕವಾಗಿ ಇತ್ಯರ್ಥ ಮಾಡಿದರೇ, ಸರ್ಕಾರಕ್ಕೆ 6 ತಿಂಗಳಲ್ಲಿ ಉತ್ತಮ ಹೆಸರು ಬರಲಿದೆ’ ಎಂದರು.
ಆನೆಗೊಂದಿ ಭಾಗಕ್ಕೆ ಪೊಲೀಸ್ ಠಾಣೆ ಮಂಜೂರಾತಿ. ಗಂಗಾವತಿ ನಗರಕ್ಕೆ ಬೈಪಾಸ್ ರಸ್ತೆ. ಆನೆಗೊಂದಿ, ವೆಂಕಟಗಿರಿ ಭಾಗಕ್ಕೆ ಮಂಜೂರಾದ ಪದವಿ ಕಾಲೇಜುಗಳ ನಿರ್ಮಾಣಕ್ಕೆ ಕ್ರಮ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜಿನ ವಿದ್ಯಾರ್ಥಿಗಳಿಗೆ ಹೆಚ್ಚುವರಿ ವಸತಿ ನಿಲಯದ ವ್ಯವಸ್ಥೆ, ನೂತನ ಮಿನಿವಿಧಾನಸೌಧ ನಿರ್ಮಾಣ, ವಡ್ಡರಹಟ್ಟಿ ನೀರಾವರಿ ಆಸ್ತಿ ದುರ್ಬಳಕೆ ತಡೆಗೆ ಕ್ರಮ, ದುರ್ಗಮ್ಮ ಹಳ್ಳ ಸ್ವಚ್ಛತೆ ಸೇರಿ ಹಲವು ಸಮಸ್ಯೆಗಳನ್ನು ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿ ಹಾಗೂ ಸಚಿವರಿಗೆ ಜನಾರ್ದನ ರೆಡ್ಡಿ ಮನವಿ ಮಾಡಿದರು.
910 ಅರ್ಜಿ ಸ್ವೀಕಾರ: ನಿವೇಶನ, ಚರಂಡಿ, ರಸ್ತೆ ದುರಸ್ತಿ, ಜಮೀನು ಸರ್ವೆ, ಪಡಿತರ ಚೀಟಿ, ವಿದ್ಯುತ್ ಕಂಬ ಸ್ಥಳಾಂತರ, ಪಿಂಚಣಿ, ಗೃಹಲಕ್ಷ್ಮಿ, ಶಾಲಾ ಕೊಠಡಿ ದುರಸ್ತಿ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಒಟ್ಟು 910 ಅರ್ಜಿಗಳು ಸ್ವಿಕೃತವಾಗಿವೆ.
ಜಿಲ್ಲಾ ಪಂಚಾಯಿತಿ ಸಿಇಒ ವರ್ಣಿತ್ ನೇಗಿ, ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಾಹಿಲ್ ಬಾಗ್ಲಾ, ಡಿಎಚ್‌ಒ ಡಾ. ಈಶ್ವರ ಸವಡಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ತಹಶೀಲ್ದಾರ್ ಯು.ವಸಂತಕುಮಾರಿ, ತಾಲ್ಲೂಕು ಪಂಚಾಯಿತಿ ಇಒ ರಾಮರೆಡ್ಡಿ ಪಾಟೀಲ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಇಲಿಯಾಸ್ ಖಾದ್ರಿ, ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಫಲಾನುಭವಿಗಳಿಗೆ ಪರಿಹಾರ ವಿತರಣೆ
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬದ ಸದಸ್ಯೆ ಶಾಂತಮ್ಮಳಿಗೆ ಕಾರ್ಮಿಕ ಇಲಾಖೆಯಿಂದ ₹8 ಲಕ್ಷ ಪರಿಹಾರ ಚೆಕ್ ವಿತರಿಸಲಾಯಿತು. ಭಾಗ್ಯಲಕ್ಷ್ಮಿ, ಪಿಂಚಣಿ, ಕೃಷಿ ಯಂತ್ರೋಕರಣ, ರಾಷ್ಟ್ರೀಯ ಭದ್ರತಾ ಯೋಜನೆ, ಸಂಧ್ಯಾ ಸುರುಕ್ಷಾ, ರಾಷ್ಟ್ರೀಯ ತೋಟಗಾರಿಕೆ ಮಿಷನ್, ಈರುಳ್ಳಿ ಶೇಖರಣ ಘಟಕ ಸಹಾಯಧನ, ಮಿನಿ ಟ್ರಾಕ್ಟರ್ ಸಹಾಯಧನದ ಪ್ರತಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಯಿತು.
ಸ್ವ ಸಹಾಯ ಗುಂಪುಗಳಿಂದ ಸಂಜೀವಿನಿ ಮಾಸಿಕ ಸಂತೆ, ಕೃಷಿ, ಆರೋಗ್ಯ, ನಗರಸಭೆ, ಪಶುಪಾಲನ, ಜಿಲ್ಲಾ ಆಯುಷ್, ಸೇರಿದಂತೆ ವಿವಿಧ ಇಲಾಖೆಗಳ ಮಳಿಗೆಗಳು ಸರ್ಕಾರಿ ಯೋಜನೆ ಕುರಿತು ಜಾಗೃತಿ ಮೂಡಿಸಿದರು. ಅರಣ್ಯ ಇಲಾಖೆ ಅಧಿಕಾರಿಗಳು ಆಸಕ್ತರಿಗೆ ಸಸಿಗಳು ವಿತರಿಸಿದರು.
ಕೊಪ್ಪಳ: ತುಂಗಭದ್ರಾ ಜಲಾಯಶದಿಂದ ನದಿಗೆ ನೀರು ಹರಿಸಲು ಒತ್ತಾಯಿಸಿ ಮಾನ್ವಿ, ರಾಯಚೂರು ಭಾಗದ ರೈತರು ಕಲ್ಯಾಣ ಮಂಟಪದ ಆವರಣಲ್ಲಿ ಕುಳಿತು ಪ್ರತಿಭಟನೆ ನಡೆಸಿದರು. ಘಟನಾ ಸ್ಥಳಕ್ಕೆ ಬಂದ ಸಚಿವರು ನದಿಗೆ ಒಂದು ಸಾವಿರ ಕ್ಯುಸೆಕ್ ನೀರು ಬಿಡಲಾಗುತ್ತಿದೆ ಎಂದರು.
ರೈತರು ಈ ನೀರು ಸಾಕಾಗಲ್ಲ, ನಮಗೆ ಇನ್ನೂ ಹೆಚ್ಚಿನ ನೀರು ಹರಿಸಬೇಕು ಎಂದು ಆಗ್ರಹಿಸಿದರು. ಸಚಿವರು ಪ್ರತಿಕ್ರಿಯಿಸಿ ಜಲಾಶಯದಲ್ಲಿ ನೀರಿನ ಸಂಗ್ರಹ ಪ್ರಮಾಣ ಕಡಿಮೆಯಿದೆ. ಅಷ್ಟೊಂದು ನೀರು ಹರಿಸಲು ಸಾಧ್ಯವಿಲ್ಲ ಎಂದಾಗ ರೈತರು ಸಚಿವರ ಕಾರಿಗೆ ಮುತ್ತಿಗೆ ಹಾಕಲು ಮುಂದಾದರು.
ಕಿಷ್ಕಿಂಧೆ: ಸಚಿವ ಸಂಪುಟ ಸಭೆಗೆ ಪ್ರಯತ್ನ
ರಾಜ್ಯದಲ್ಲಿ ಈಗಾಗಲೇ ಕಲಬುರಗಿ, ಬೆಳಗಾವಿ, ಮೈಸೂರು, ಮಂಗಳೂರು ಭಾಗದಲ್ಲಿ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಈಗ ರಾಜ್ಯದ 15 ಕಡೆಗಳಲ್ಲಿ ಸಚಿವ ಸಂಪುಟ ಸಭೆ ನಡೆಸುವ ಹೊಸ ಸಂಪ್ರದಾಯವನ್ನು ಮುಖ್ಯಮಂತ್ರಿ ಆರಂಭಿಸಿದ್ದು, ಕೊಪ್ಪಳ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಆಲೋಚನೆಯೊಂದಿಗೆ ಕಿಷ್ಕಿಂಧೆ ಭಾಗದಲ್ಲಿ ಸಚಿವ ಸಂಪುಟ ಸಭೆ ಆಯೋಜಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ತಂಗಡಗಿ ಹೇಳಿದರು.