
9 ಕೆಜಿ ತೂಕ ಇಳಿಸಿಕೊಂಡ ನಟಿ ಕೀರ್ತಿ ಸುರೇಶ್: ಆಹಾರ ಪದ್ಧತಿ ಹೀಗಿತ್ತು...
ತಮಿಳು ನಟಿ ಕೀರ್ತಿ ಸುರೇಶ್ ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಡಯೆಟ್ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 2018 ಹಾಗೂ 2019ರ ನಡುವೆ ಸಿನಿಮಾದ ಪಾತ್ರವೊಂದಕ್ಕೆ ಬರೋಬ್ಬರಿ 9 ಕೆ.ಜಿ ತೂಕ ಇಳಿಸಿಕೊಂಡಿದ್ದೆ ಎಂದು ಹೇಳಿಕೊಂಡಿದ್ದಾರೆ.
‘ಬಿಹೈಂಡ್‌ವುಡ್ಸ್ ಹಿಟ್ಸ್’ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು ತಮ್ಮ ಆರೋಗ್ಯದ ಗುಟ್ಟನ್ನು ಹೇಳಿದ್ದಾರೆ. ಪ್ರತಿದಿನ ಆಹಾರದಲ್ಲಿ ಏನೆಲ್ಲಾ ಇರಲಿದೆ ಎಂಬುದನ್ನು ಬಹಿರಂಗ ಪಡಿಸಿದ್ದಾರೆ.
ತಮ್ಮ ಆಹಾರ ಪದ್ಧತಿಯ ಬಗ್ಗೆ ಹೇಳಿಕೊಂಡಿರುವ ಅವರು, ‘ ನಾನು ತೂಕ ಇಳಿಸಿಕೊಂಡ ಆ ಸಮಯ ನನ್ನ ಜೀವನದ ಅತ್ಯುತ್ತಮ ಕ್ಷಣ ಎಂದೇ ಭಾವಿಸುತ್ತೇನೆ. ದಿನಕ್ಕೆ 6 ರಿಂದ 7 ಮೊಟ್ಟೆಗಳ ಬಿಳಿ ಭಾಗವನ್ನು ಮಾತ್ರ ಆಹಾರದ ಜತೆ ಸೇವಿಸುತ್ತಿದ್ದೆ’ ಎಂದು ಹೇಳಿಕೊಂಡಿದ್ದಾರೆ.
‘ಇದರ ಜತೆಗೆ ಪನೀರ್, ತೋಫು, ಕಡಲೆ, ಸೋಯಾ ಹಾಗೂ ಬೇಳೆಕಾಳುಗಳಿಂದ ತಯಾರಿಸಿದ ಆಹಾರ ಸೇವಿಸುತ್ತಿದ್ದೆ. ಇವುಗಳ ಜತೆಗೆ ವಿವಿಧ ನಟ್ಸ್‌ಗಳು ಹಾಗೂ ತರಕಾರಿಗಳನ್ನು ತಿನ್ನುತ್ತಿದ್ದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಯಾವುದೇ ಪ್ರೋಟೀನ್ ಶೇಕ್ ತೆಗೆದುಕೊಳ್ಳುವುದಿಲ್ಲ. ನಾನು ಸೇವಿಸುವ ಆಹಾರದಲ್ಲಿಯೇ ಹೆಚ್ಚಿನ ಪ್ರೋಟೀನ್ ಇರುತ್ತದೆ’ ಎಂದು ಹೇಳಿದ್ದಾರೆ.
ಪನೀರ್, ಪ್ರೋಟೀನ್ ಹಾಗೂ ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುತ್ತದೆ. ಇದು ಕರುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಇದರ ಜತೆಗೆ ಹಾಲು ಹಾಗೂ ಮೊಸರು ನಿಯಮಿತವಾಗಿ ಸೇವಿಸುವುದು ಉತ್ತಮ ಎಂದು ವೈದ್ಯರೂ ಸಲಹೆ ನೀಡುತ್ತಾರೆ. ಡಯೆಟ್‌ಗೆ ಸಂಬಂಧಿಸಿದ ಆಹಾರ ಪದ್ಧತಿಯನ್ನು ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಉತ್ತಮ ಎಂದು ಹೇಳಿದ್ದಾರೆ.