
ನಾಪೋಕ್ಲು ಸಹಕಾರ ಸಂಘಕ್ಕೆ ₹77.45 ಲಕ್ಷ ಲಾಭ: ಪೂವಯ್ಯ
ನಾಪೋಕ್ಲು: ‘ನಾಪೋಕ್ಲುವಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು 2025-26ರ ಸಾಲಿನಲ್ಲಿ ₹77.45 ಲಕ್ಷ ಲಾಭ ಗಳಿಸಿದೆ. ಸಂಘದ ವಾರ್ಷಿಕ ಮಹಾಸಭೆ ಇಲ್ಲಿನ ಕೊಡವ ಸಮಾಜದಲ್ಲಿ ಸೆ.19ರಂದು ನಡೆಯಲಿದೆ’ ಎಂದು ಸಂಘದ ಅಧ್ಯಕ್ಷ ಕೆಟೋಳಿರ ಎಸ್. ಪೂವಯ್ಯ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಂಘದಲ್ಲಿ 2546 ಸದಸ್ಯರಿದ್ದು, ಒಟ್ಟು ಠೇವಣಿ ₹58.96 ಕೋಟಿಯಾಗಿದೆ. ಸದಸ್ಯರಿಗೆ ಒಟ್ಟು ವಿತರಿಸಿದ ಸಾಲ ₹51.96ಕೋಟಿ. 2025–26ನೇ ಸಾಲಿನಲ್ಲಿ ಒಟ್ಟು ₹249 ಕೋಟಿ ವ್ಯವಹಾರ ಮಾಡಿದೆ’ ಎಂದರು.
‘ಸಂಘದಿಂದ ರೈತರಿಗೆ ಕೃಷಿ ಸಾಲಗಳನ್ನು ವಿತರಿಸಲಾಗುತ್ತಿದೆ. ₹5 ಲಕ್ಷದವರೆಗೆ ಕೆಸಿಸಿ ಸಾಲವನ್ನು ಶೂನ್ಯ ಬಡ್ಡಿ ದರದಲ್ಲಿ ವಿತರಿಸಲಾಗುತ್ತಿದೆ. ಕೆರೆ ಸಾಲ, ಗೋದಾಮು ಸಾಲ, ಕಾಂಕ್ರೀಟ್ ಕಣಸಾಲ, ಕೃಷಿ ಯಂತ್ರೋಪಕರಣ ಸಾಲ ಸೇರಿದಂತೆ ಮಧ್ಯಮಾವಧಿ ಕೃಷಿ ಸಾಲಗಳನ್ನು ಶೇ 3 ಬಡ್ಡಿದರದಲ್ಲಿ ರೈತರಿಗೆ ವಿತರಿಸಲಾಗುತ್ತಿದೆ. ಇದಲ್ಲದೆ ವಾಹನ ಸಾಲ, ಜಮೀನು ಸಾಲ, ಆಭರಣ ಸಾಲ ಸೇರಿದಂತೆ ಕೃಷಿಯೇತರ ಸಾಲಗಳನ್ನು ನೀಡಲಾಗುತ್ತಿದೆ. ಸದಸ್ಯರು ಹಾಗೂ ಇತರ ಗ್ರಾಹಕರ ಕೃಷಿ ಚಟುವಟಿಕೆಗಳ ಅನುಕೂಲಕ್ಕಾಗಿ ಉತ್ತಮ ಗುಣಮಟ್ಟದ ವಸ್ತುಗಳ ಮಾರಾಟ ಮಳಿಗೆ ಇದೆ. ಅಕ್ಕಿ ಗಿರಣಿ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುತ್ತಿದೆ’ ಎಂದರು.
2025- 26ನೇ ಸಾಲಿನ ಮಡಿಕೇರಿ ತಾಲ್ಲೂಕು ವಿಭಾಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಸಂಘವೆಂದು ಡಿಡಿಸಿ ಬ್ಯಾಂಕಿನಿಂದ ಪ್ರಥಮ ಬಹುಮಾನ ಪಡೆದುಕೊಂಡಿದೆ ಎಂದರು.
ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹದಾಯಕ ಬಹುಮಾನ ವಿತರಿಸಲಾಗುವುದು. ಅಲ್ಲದೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಕ್ರೀಡೆಯಲ್ಲಿ ಕೀರ್ತಿ ತಂದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹದಾಯಕ ಬಹುಮಾನ ನೀಡಲು ಉದ್ದೇಶಿಸಲಾಗಿದೆ ಎಂದರು.
ಉಪಾಧ್ಯಕ್ಷ ಚೀಯಕ ಪೂವಂಡ ಎನ್.ದೇವಯ್ಯ ನಿರ್ದೇಶಕರಾದ ಕುಂಡ್ಯೋಳಂಡ, ಎಂ.ಕವಿತಾ, ಚೋಕಿರ ಬಿ. ಪೂವಪ್ಪ, ಕೇಲೇಟಿರ ಬಿ. ಮುತ್ತಮ್ಮ, ಶಿವಚಾಳಿಯಂಡ ಕಾರ್ಯಪ್ಪ, ಅರೆಯಡ ಎಂ. ಪೆಮ್ಮಯ್ಯ, ಬೊಳ್ಳು, ಕುಂಡ್ಯೋಳಂಡ ಸಿ.ಪೂವಯ್ಯ, ಚೋಕಿರ ಎಸ್. ಚಿಣ್ಣಪ್ಪ, ಟಿ.ಎ. ಮಿಟ್ಟು ಅಪ್ಪಚ್ಚಿರ, ರೀನಾ ನಾಣಯ್ಯ, ಎನ್.ಕೆ.ಪುಷ್ಪ ಇದ್ದರು.