
ಕೋಲಾರ ಹೋಟೆಲ್ ತಿಂಡಿಯಲ್ಲಿ ಹುಳು; ನಗರಸಭೆಗೆ ದೂರು
ಕೋಲಾರ: ನಗರದ ಬಾಲಕರ ಕಾಲೇಜು ವೃತ್ತದ ಬಳಿಯ ಹೋಟೆಲ್‌ವೊಂದರ ತಿಂಡಿಯಲ್ಲಿ ಗ್ರಾಹಕರೊಬ್ಬರಿಗೆ ಜಿರಲೆ ರೀತಿಯ ಹುಳು ಸಿಕ್ಕಿದ್ದು, ನಗರಸಭೆಗೆ ದೂರು ನೀಡಿದ್ದಾರೆ.
ಕಾರಂಜಿಕಟ್ಟೆಯ ನಿವಾಸಿ ಕೆ.ಎಂ.ಶಿವಕುಮಾರ್ ಎಂಬುವರು ಸೆ.16ರಂದು ಬೆಳಿಗ್ಗೆ ಹೋಟೆಲ್‌ಗೆ ಬಂದು ಪೊಂಗಲ್ ತರಿಸಿಕೊಂಡಿದ್ದಾರೆ. ಅದರಲ್ಲಿ ಜಿರಲೆ ರೀತಿಯ ಸತ್ತ ಹುಳು ಕಂಡು ಮಾಲೀಕರ ಗಮನಕ್ಕೆ ತಂದಿದ್ದಾರೆ. ಆದರೆ, ಉಡಾಫೆಯ ಉತ್ತರ ನೀಡಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಚಿತ್ರ ಸಮೇತ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ನಗರಸಭೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ.
‘ಪೊಂಗಲ್‌ನಲ್ಲಿ ಹುಳು ಬಿದ್ದಿರುವುದನ್ನು ಮಾಲೀಕರ ಗಮನಕ್ಕೆ ತಂದೆ. ‘ಏನು ಮಾಡಲು ಆಗದು, ತಿಂದು ಹೋಗಿ' ಎಂದು ಉಡಾಫೆಯಿಂದ ಹೇಳಿದರು. ಕೆಲ ತಿಂಗಳ ಹಿಂದೆ ಬೋಂಡಾದಲ್ಲಿ ಹುಳು ಸಿಕ್ಕಿತ್ತು. ಈ ಸಂಬಂಧ ಕ್ರಮ ವಹಿಸಬೇಕು’ ಎಂದು ಪತ್ರದಲ್ಲಿ ಆಗ್ರಹಿಸಿದ್ದಾರೆ.