
ದಾಸ ಸಾಹಿತ್ಯ ವಿಶ್ವದೆಲ್ಲೆಡೆ ಪಸರಿಸಲಿ: ಕುಲಪತಿ ಬಿ.ವಿ.ಕೆ.ಶಾಸ್ತ್ರಿ
ಬಾಗಲಕೋಟೆ: ದಾಸ ಸಾಹಿತ್ಯವನ್ನು ಸ್ಥಳೀಯವಾಗಿ ಸೀಮಿತಗೊಳಿಸದೇ ವಿಶ್ವದೆಲ್ಲೆಡೆ ಹರಡುವ ಕಾರ್ಯ ಆಗಬೇಕಿದೆ ಎಂದು ಅಮೆರಿಕದ ಫ್ಲೋರಿಡಾದಲ್ಲಿರುವ ಯೋಗ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಬಿ.ವಿ.ಕೆ.ಶಾಸ್ತ್ರಿ ಹೇಳಿದರು.
ನವನಗರದ ಪ್ರಸನ್ನವೆಂಕಟದಾಸರ ಸ್ಮಾರಕ ಭವನದಲ್ಲಿ ಭಾನುವಾರದಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಅಖಿಲ ಕರ್ನಾಟಕ ಹರಿದಾಸ ಸಾಹಿತ್ಯ ಸಮ್ಮೇಳನದಲ್ಲಿ ಅಖಿಲ ಕರ್ನಾಟಕ ಹರಿದಾಸ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಗೆ ತಮ್ಮ ಯೋಗ ಸಂಸ್ಕೃತ ವಿಶ್ವವಿದ್ಯಾಲಯದ ಮಾನ್ಯತಾ ಪತ್ರವನ್ನು ವಿತರಿಸಿ ಮಾತನಾಡಿದರು.
ಮಾತನಾಡುವ ಮೂಲಕ ಕೆಲ ಕ್ಷಣಗಳವರೆಗೆ ನೆನಪಿನಲ್ಲಿರಿಸಬಹುದು. ಆದರೆ, ಬರವಣಿಗೆಯ ಮೂಲಕ ಶಾಶ್ವತವಾಗಿ ದಾಖಲಿಸಬಹುದು. ತಲೆಮಾರಿನಿಂದ ತಲೆಮಾರಿಗೆ ತಲುಪಿಸಬಹುದು. ದಾಸ ಸಾಹಿತ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಇನ್ನಷ್ಟು ಆಗಬೇಕಿದೆ ಎಂದರು.
ಪಂ.ಬಿಂದುಮಾಧವಾಚಾರ್ಯ ನಾಗಸಂಪಿಗೆ ಮಾತನಾಡಿ, ಮಠಕ್ಕೆ ಬಂದವರನ್ನು ಗುರುಗಳು ಉದ್ಧರಿಸುತ್ತಾರೆ. ಮಠಕ್ಕೆ ಬಾರದವರನ್ನು ಕಾಲಿಗೆ ಗೆಜ್ಜೆಕಟ್ಟಿ ಹೆಜ್ಜೆಹಾಕುವುದರ ಮೂಲಕ ದಾಸರು ಉದ್ಧಾರ ಮಾಡುತ್ತಾರೆ ಎಂಬ ಮಾತಿದೆ. ಬಹುಪಾಲು ದಾಸರ ಬದುಕು ಅವಮಾನದಿಂದ ಅನುಗ್ರಹದ ಕಡೆಗೆ ಸಾಗಿದೆ. ಸಮಾಜವನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಪ್ರಸನ್ನವೆಂಕಟ ವ್ಯಾಸ-ದಾಸ ಸಾಹಿತ್ಯ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಶೋಧಕ ಧೂಳಖೇಡ ನಾರಾಯಣಾಚಾರ್ಯ, ಬಾಲ್ಯದಲ್ಲಿ ಬಡತನ ಕಂಡಿದ್ದೇನೆ. ಪೇಜಾವರ ಶ್ರೀಗಳು ನಮ್ಮ ಬಾಳಿಗೆ ಬೆಳಕಾದರು. ನನ್ನ ಜೀವನದಲ್ಲಿ ಸಾಧನೆಗೆ ಅವರೇ ಕಾರಣ ಎಂದರು.
ಸಂಘಟಕ ಸುಭಾಸ ಕಾಖಂಡಕಿ ಮಾತನಾಡಿ, ಪ್ರಸನ್ನವೆಂಕಟ ದಾಸರ ಸ್ಮಾರಕ ಭವನದ ಮೇಲ್ಭಾಗದಲ್ಲಿ ಸಂಶೋಧನಾ ಮತ್ತು ಅಧ್ಯಯನ ಕೇಂದ್ರ ತೆರೆಯಲಾಗಿದೆ. ಅತ್ಯಾಧುನಿಕ ಗ್ರಂಥಾಲಯದ ವ್ಯವಸ್ಥೆಯಿದೆ. ಸಂಶೋಧಕರಿಗೆ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಅಮೇರಿಕದ ಯೋಗ ಸಂಸ್ಕೃತ ವಿಶ್ವವಿದ್ಯಾಲಯವು ಮಾನ್ಯತೆಯನ್ನೂ ನೀಡಿದೆ ಎಂದರು.
ಎನ್.ಜಿ.ವಿಜಯಲಕ್ಷ್ಮಿ ಅವರಿಗೆ ಪ್ರಸನ್ನವೆಂಕಟದಾಸ ಸಾಹಿತ್ಯರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಂಶೋಧಕ ಕೃಷ್ಣ ಕೋಲ್ಹಾರ ಕುಲಕರ್ಣಿ, ಕಬ್ಬಿನಾಲೆ ವಸಂತಭಾರಧ್ವಾಜ, ಸಮ್ಮೇಳನಾಧ್ಯಕ್ಷ ಸ್ವಾಮಿರಾವ್ ಕುಲಕರ್ಣಿ ಇದ್ದರು. ಆರ್ಯ ಅಕ್ಷೋಭ್ಯತೀರ್ಥ ಮಠಾಧೀಶ ರಘುವಿಜಯತೀರ್ಥ ಸ್ವಾಮೀಜಿ ಪ್ರವಚನ ನೀಡಿದರು.
ದಾಸರ ಕೀರ್ತನೆಗಳು ಮನಕುಲಕ್ಕೆ ಅನ್ವಯ: ಕೃಷ್ಣ ಕುಲಕರ್ಣಿ
ಬಾಗಲಕೋಟೆ: ಹರಿದಾಸ ಸಾಹಿತ್ಯ ಯಾವುದೇ ತತ್ವ, ಸಿದ್ಧಾಂತ, ಜಾತಿಗೆ ಸೀಮಿತವಲ್ಲ. ದಾಸರ ಪದಗಳು ಮನಕುಲಕ್ಕೆ ಅನ್ವಯವಾಗುವ ರೀತಿಯಲ್ಲಿವೆ ಎಂದು ಸಂಶೋಧಕಕೃಷ್ಣ ಕೋಲ್ಹಾರ ಕುಲಕರ್ಣಿ ಹೇಳಿದರು.
ಹರಿದಾಸ ಸಾಹಿತ್ಯದಲ್ಲಿ ಸಮಾಜಮುಖಿ ದೃಷ್ಟಿ ವಿಷಯ ಕುರಿತು ಮಾತನಾಡಿದ ಅವರು, ಹರಿದಾಸ ಸಾಹಿತ್ಯ ಎಂದರೆ ಕೇವಲ ಬ್ರಾಹ್ಮಣರಿಗೆ ಅನ್ವಯಿಸಿದ್ದು ಎಂಬಂತೆ ಬಿಂಬಿತವಾಗಿದೆ. ಆದರೆ, ದಾಸರ ಕೀರ್ತನೆಗಳು, ತತ್ವಗಳ ವರ್ಣನೆಯಲ್ಲಿ ಮಾನವ ಕುಲಕ್ಕೆ ಅನ್ವಯವಾಗುವ ಸಂದೇಶಗಳು ಅಡಗಿವೆ. ಆ ಕಾರಣದಿಂದಾಗಿ ಗ್ರಾಮೀಣ ಭಾಗದ ಭಜನೆಗಳಲ್ಲೂ ಹರಿದಾಸರ ಕೀರ್ತನೆಗಳು ಜನಜನಿತವಾಗಿದೆ ಎಂದರು.