
ಸಿಮೆಂಟ್ ಉತ್ಪಾದನಾ ಘಟಕ | ರಾಜ್ಯ ಸರ್ಕಾರಕ್ಕೆ ₹2.56 ಕೋಟಿ ನಷ್ಟ
ಚಿತ್ತಾಪುರ : ‘ತಾಲ್ಲೂಕಿನ ಸೂಲಹಳ್ಳಿ ರೈಲು ನಿಲ್ದಾಣ ಸಮೀಪ ಶ್ರೀ ಸಿಮೆಂಟ್ ಕಂಪನಿಯ ‘ಸಿಮೆಂಟ್ ಉತ್ಪಾದನಾ ಘಟಕ’ದ ಕಟ್ಟಡವನ್ನು ಪರವಾನಗಿ ಪಡೆಯದೆ ಅಕ್ರಮವಾಗಿ ನಿರ್ಮಿಸಿರುವುದರಿಂದ ಸರ್ಕಾರಕ್ಕೆ ₹2.56 ಕೋಟಿ ನಷ್ಟವಾಗಿದೆ’ ಎಂದು ಸ್ಥಳೀಯ ನಗರ ಯೋಜನಾ ಪ್ರಾಧಿಕಾರವು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದೆ.
‘ಸರ್ಕಾರದಿಂದ ಅನುಮತಿ ಪಡೆದು ತಾಲ್ಲೂಕಿನ ಪೇಠ ಚಿತ್ತಾಪುರ, ಕೆ.ನಾಗಾಂವ, ಕೆ.ಚಿತ್ತಾಪುರ ಗ್ರಾಮಗಳ ರೈತರಿಂದ 212 ಎಕರೆ 5 ಗುಂಟೆ ಕೃಷಿ ಜಮೀನನ್ನು ಶ್ರೀ ಸಿಮೆಂಟ್ ಕಂಪನಿ ಖರೀದಿಸಿದೆ. ಆದರೆ, ಸಂಬಂಧಿಸಿದ ಪ್ರಾಧಿಕಾರದಿಂದ ಕೃಷಿಯೇತರ ಜಮೀನಾಗಿ ಭೂಪರಿವರ್ತಿಸಿಕೊಳ್ಳದೆ ಸಿಮೆಂಟ್ ಘಟಕದ ಕಾರ್ಯನಿರ್ವಹಣೆ ನಡೆಸಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಮತ್ತು ನಗರ ಯೋಜನಾ ಪ್ರಾಧಿಕಾರಕ್ಕೆ ₹2,56,01,805 ನಷ್ಟವಾಗಿದೆ’ ಎಂದು ಸರ್ಕಾರಕ್ಕೆ ಪತ್ರ ಬರೆದಿರುವ ಅಂಶ ಮಾಹಿತಿ ಹಕ್ಕಿನಡಿ ಬಹಿರಂಗಗೊಂಡಿದೆ.
ಘಟಕ ಸ್ಥಳದಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಿ ಕಾರ್ಖಾನೆ ಆಡಳಿತ ಮಂಡಳಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು. ₹2.56 ಕೋಟಿ ಭೂ ಕಂದಾಯ ಬಾಕಿ ವಸೂಲಿ ಮಾಡಬೇಕು ಎಂದು ಚಿತ್ತಾಪುರ ನಗರ ಯೋಜನಾ ಪ್ರಾಧಿಕಾರ ಪತ್ರವ್ಯವಹಾರ ನಡೆಸಿದೆ.
2024ರಲ್ಲೇ ಜಿಲ್ಲಾಧಿಕಾರಿಗೆ ಪತ್ರ: ‘ರೈತರಿಂದ ಖರೀದಿಸಿರುವ 212 ಎಕರೆ 5 ಗುಂಟೆ ಜಮೀನನ್ನು ಕೈಗಾರಿಕೆ ಉದ್ದೇಶಕ್ಕಾಗಿ ಭೂಪರಿವರ್ತನೆ ಮಾಡಿಸಿಕೊಳ್ಳದೆ ₹1,72,24,056 ಭೂಕಂದಾಯದಿಂದ ಸರ್ಕಾರಕ್ಕೆ ಆರ್ಥಿಕ ನಷ್ಟವಾಗಿದೆ. ಅದನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯು 2024ರ ಸೆ.3 ರಂದೇ ಜಿಲ್ಲಾಧಿಕಾರಿಗೆ ಪತ್ರ ಬರೆದಿರುವ ದಾಖಲೆಯೂ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.
ವಿವಿಧ ಇಲಾಖೆಗಳಿಗೂ ಮಾಹಿತಿ: ಸರ್ಕಾರಕ್ಕೆ ₹1.72 ಕೋಟಿ ನಷ್ಟ ಕುರಿತು ಸ್ಥಳೀಯ ನಗರ ಯೋಜನಾ ಪ್ರಾಧಿಕಾರವು ನಗರಾಭಿವೃದ್ಧಿ ಇಲಾಖೆ, ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತರಿಗೆ ಮತ್ತು ನಿರ್ದೇಶಕರಿಗೆ, ಹೆಚ್ಚುವರಿ ನಿರ್ದೇಶಕರಿಗೆ, ಪೌರಾಡಳಿತ ನಿರ್ದೇಶಕರಿಗೆ ಮತ್ತು ಪ್ರಧಾನ ಕಾರ್ಯದರ್ಶಿಗೆ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ, ತಾಲ್ಲೂಕು, ಉಪ ವಿಭಾಗದ ಅಧಿಕಾರಿಗಳಿಗೂ 2024ರಲ್ಲೇ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಕೋರಿದೆ. ಇದುವರೆಗೂ ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಮಾಹಿತಿ ಪಡೆಯಲು ಸೂಲಹಳ್ಳಿ ಸಿಮೆಂಟ್ ಉತ್ಪಾದನಾ ಘಟಕದ ಅಧಿಕಾರಿ ಚೆನ್ನಾರೆಡ್ಡಿ ಅವರನ್ನು ಸಂಪರ್ಕಿಸಿದರೂ ಪ್ರತಿಕ್ರಿಯೆ ನೀಡಲು ಅವರು ನಿರಾಕರಿಸಿದರು.
‘ಶೀಘ್ರವೇ ಡಿಸಿಗೆ ಸಮಗ್ರ ವರದಿ’
‘ಶ್ರೀ ಸಿಮೆಂಟ್ ಕೈಗಾರಿಕೆ ಸ್ಥಾಪನೆಗಾಗಿ ಕರ್ನಾಟಕ ಭೂ ಸುಧಾರಣೆ ಕಾಯ್ದೆ ಕಲಂ 109 ಪ್ರಕಾರ ಅನುಮತಿ ಪಡೆದುಕೊಂಡಿದ್ದಾರೆ. ಕೈಗಾರಿಕೆ ನಕ್ಷೆ ಅನುಮೋದನೆ, ಕಟ್ಟಡ ಪರವಾನಗಿ, ತೆರಿಗೆ ಸಂಗ್ರಹವು ಸಂಬಂಧಿಸಿದ ಪ್ರಾಧಿಕಾರಗಳ ವ್ಯಾಪ್ತಿಗೆ ಬರುತ್ತದೆ. ಶೀಘ್ರದಲ್ಲೇ ಜಿಲ್ಲಾಧಿಕಾರಿಗೆ ಈ ಕುರಿತು ಸಮಗ್ರ ವರದಿ ಸಲ್ಲಿಸಲಾಗುವುದು’ ಎಂದು ತಹಶೀಲ್ದಾರ್ ನಾಗಯ್ಯ ಹಿರೇಮಠ ತಿಳಿಸಿದರು.
‘ಭೂ ಪರಿವರ್ತನೆ ಆಗಿಲ್ಲ’: ‘ಕೃಷಿ ಜಮೀನು ಕೃಷಿಯೇತರ ಜಮೀನಾಗಿ ಭೂ ಪರಿವರ್ತನೆ ಮಾಡಿಸಿಕೊಂಡಿಲ್ಲ. ಸರ್ಕಾರದ ಬೊಕ್ಕಸಕ್ಕೆ ₹2.56 ಕೋಟಿ ಆರ್ಥಿಕ ನಷ್ಟವಾಗಿದ್ದು, 5 ನೋಟಿಸ್ ನೀಡಲಾಗಿದೆ. ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಬರೆದು ಕ್ರಮಕ್ಕೆ ಕೋರಲಾಗಿದೆ’ ಎಂದು ಚಿತ್ತಾಪುರ ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೈಯದ್ ಸಮೀರ್ ಪಾಷಾ ತಿಳಿಸಿದರು.