
ಸಾಗುವಳಿ ಆದೇಶ ನೀಡಲು ₹ 25,000 ಲಂಚ: ಎಸಿ ಕಚೇರಿ ಎಫ್‌ಡಿಎ ಲೋಕಾಯುಕ್ತ ಬಲೆಗೆ
ಚಿತ್ರದುರ್ಗ: ಸಾಗುವಳಿ ಆದೇಶ ನೀಡಲು ಜಮೀನು ಮಾಲೀಕರಿಂದ ₹ 25,000 ಲಂಚ ಪಡೆಯುತ್ತಿದ್ದ ನಗರದ ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಎ) ಎಚ್.ಜಿ. ಬಸವರಾಜ್ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹೊಸದುರ್ಗ ತಾಲ್ಲೂಕಿನ ಕೆಲ್ಲೋಡು ಗ್ರಾಮದ ನಿವಾಸಿ ಟಿ. ಹನುಮಂತಪ್ಪ ಎಂಬವರು ತಮ್ಮ ತಂದೆ ತಿಮ್ಮಪ್ಪ ಅವರಿಗೆ ಸೇರಿದ, ಶ್ರೀರಾಮಪುರ ಹೋಬಳಿಯ ಹುಳುವಿನಗುಂಡಿ ಗ್ರಾಮದ ಜಮೀನಿನ ಸಾಗುವಳಿ ಆದೇಶ ನೀಡುವಂತೆ ಉಪವಿಭಾಗಾಧಿಕಾರಿ ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ಮುಗಿದು ಜೂನ್ 9ರಂದು ಆದೇಶ ಕಾಯ್ದಿರಿಸಲಾಗಿತ್ತು.
ಈ ಪ್ರಕರಣದ ಕಡತವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದ ಎಫ್‌ಡಿಎ ಬಸವರಾಜ್, ಆದೇಶ ಮಾಡಿಸಿಕೊಡಲು ವಿಳಂಬ ಮಾಡುತ್ತಾ ದೂರುದಾರರಿಂದ ₹ 30,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಸೆ.7ರಂದು ₹ 5,000 ಪಡೆದುಕೊಂಡಿದ್ದರು. ₹ 25,000 ನೀಡುವಂತೆ ಪಟ್ಟು ಹಿಡಿದಿದ್ದರು. ಲಂಚ ನೀಡಲು ಇಷ್ಟವಿಲ್ಲದ ಹನುಮಂತಪ್ಪ ಅವರು ಚಿತ್ರದುರ್ಗದ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಸೋಮವಾರ ಸಂಜೆ ಬಸವರಾಜ್ ಅವರು ಲಂಚದ ಹಣ ಪಡೆದು ಆಟೊದಲ್ಲಿ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದರು.