
ನವೋದ್ಯಮಕ್ಕೆ ಉತ್ಸಾಹ: 70ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆ
ಮಂಗಳೂರು: ಕರಾವಳಿಯು ಸ್ಟಾರ್ಟ್‌ಅಪ್‌ಗಳ ತವರಾಗಿ ರೂಪುಗೊಳ್ಳುವ ಭರವಸೆ ಮೂಡಿಸಿದ್ದು, ಹೊಸ ಸ್ಟಾರ್ಟ್ ಅಪ್‌ಗಳನ್ನು ಪ್ರಾರಂಭಿಸಲು 70ಕ್ಕೂ ಹೆಚ್ಚು ನವೋದ್ಯಮಿಗಳು ಆಸಕ್ತಿ ತೋರಿದ್ದಾರೆ.
ಡಿಜಿಟಲ್ ಮಿಷನ್‌ನ ಬಿಯಾಂಡ್ ಬೆಂಗಳೂರು ಮತ್ತು ಲೋಕಲ್ ಎಕಾನಮಿ ಆಕ್ಸಿಲರೇಟರ್ ಪ್ರೋಗ್ರಾಂ (ಎಲ್‌ಇಎಪಿ) ಅಡಿಯಲ್ಲಿ ಉದ್ಯಮ, ಸ್ಟಾರ್ಟ್‌ಅಪ್‌ಗಳನ್ನು ಪ್ರೋತ್ಸಾಹಿಸಲು ರಾಜ್ಯ ಸರ್ಕಾರವು ‘ಕೆ– ಕಾಂಬಿನೇಟರ್’ ಕಾರ್ಯಕ್ರಮವನ್ನು ಪರಿಚಯಿಸಿದೆ. ಕರಾವಳಿ ಭಾಗದಲ್ಲಿ ಇದನ್ನು ಅನುಷ್ಠಾನಗೊಳಿಸಲು ‘ಟೈ’ (ಟಿಐಇ) ಮಂಗಳೂರು ಆಯ್ಕೆಯಾಗಿದೆ.
ಯಾವ ಉದ್ಯಮಕ್ಕೆ ಉತ್ಸಾಹ?: ಕಾರ್ಯಕ್ರಮದ ಭಾಗವಾಗಿ ‘ಟೈ ನರ್ಚರ್’ ಆಸಕ್ತ ನವೋದ್ಯಮಿಗಳಿಂದ ಅರ್ಜಿ ಆಹ್ವಾನಿಸಿತ್ತು. 20 ದಿನಗಳ ಅವಧಿಯಲ್ಲಿ 70ಕ್ಕೂ ಅಧಿಕ ಅರ್ಜಿಗಳು ಟೈ ನರ್ಚರ್ ಟೇಬಲ್ ಮೇಲಿವೆ. ಕೃಷಿ ತಂತ್ರಜ್ಞಾನ (ಅಗ್ರಿಟೆಕ್), ರಕ್ಷಣೆ ಮತ್ತು ಕಡಲ ತಂತ್ರಜ್ಞಾನ (ಡಿಫೆನ್ಸ್ ಆ್ಯಂಡ್ ಮೆರಿಟೈಮ್ ಟೆಕ್), ಎಜು ಟೆಕ್, ಫಿನ್‌ಟೆಕ್, ಕೈಗಾರಿಕಾ ತಂತ್ರಜ್ಞಾನ, ನೀರು ಮತ್ತು ಇಂಧನ ತಂತ್ರಜ್ಞಾನ, ಮೊಬಿಲಿಟಿ, ಸ್ಪೋರ್ಟ್ಸ್‌ಟೆಕ್ ಹೀಗೆ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಅರ್ಜಿಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಮಾತ್ರವಲ್ಲದೆ, ಹೊರ ಜಿಲ್ಲೆಗಳ ನವೋ ದ್ಯಮಿಗಳು ಬಹುಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದು, ಕರಾವಳಿಯೆಡೆಗೆ ಅವರು ಮುಖ ಮಾಡಿರುವುದು ವಿಶೇಷ ಎನ್ನುತ್ತಾರೆ ಟೈ ಪ್ರಮುಖರು.
‘ಕೆ– ಕಾಂಬಿನೇಟರ್‌ಗೆ ಅತ್ಯುತ್ತಮ ಪ್ರತಿಕ್ರಿಯೆ ದೊರೆತಿದೆ. ಸ್ಥಳೀಯ ಸಾಧ್ಯತೆಗಳನ್ನು ಅಧ್ಯಯನ ಮಾಡಿಕೊಂಡು ಉದ್ಯಮ ಸ್ಥಾಪನೆಗೆ ನವೋದ್ಯಮಿಗಳು ಆಸಕ್ತಿ ತೋರಿದ್ದಾರೆ. ಕರಾವಳಿ ಕರ್ನಾಟಕವನ್ನು ಭಾರತದ ಸಿಲಿಕಾನ್ ಬೀಚ್ ಆಗಿ ಅಭಿವೃದ್ಧಿಪಡಿಸಿರುವ ನಮ್ಮ ಕನಸಿಗೆ ರೆಕ್ಕೆ ಬಂದಿದೆ. ಇಲ್ಲಿ ಜನ್ಮ ತಳೆಯುವ ಸ್ಟಾರ್ಟ್‌ಅಪ್‌ಗಳು ಜಾಗತಿಕ ಮಟ್ಟದಲ್ಲಿ ಬೆಳೆಯಬೇಕು ಎಂಬುದು ನಮ್ಮ ಗುರಿ’ ಎನ್ನುತ್ತಾರೆ ಟೈ ಮಂಗಳೂರಿನ ಅಧ್ಯಕ್ಷ ಶ್ಯಾಮಪ್ರಸಾದ್ ಹೆಬ್ಬಾರ್.
ಮೌಲ್ಯಮಾಪನ ಹೇಗೆ?: ಅರ್ಜಿ ಸಲ್ಲಿಕೆ ಸೆ.20ಕ್ಕೆ ಮುಕ್ತಾಯಗೊಂಡಿದೆ. ಟೈ ಮಂಗಳೂರು ಪರಿಶೀಲನಾ ಸಮಿತಿಯು ಪ್ರತಿ ಅರ್ಜಿಯನ್ನೂ ಗಂಭೀರವಾಗಿ ಪರಿಗಣಿಸಿ ಮೌಲ್ಯಮಾಪನ ನಡೆಸಿದೆ. ಸ್ಟಾರ್ಟ್‌ಅಪ್ ತಂಡದ ಸಾಮರ್ಥ್ಯ, ಭವಿಷ್ಯದ ದೃಷ್ಟಿಕೋನ, ಮಾರುಕಟ್ಟೆ ವಿಸ್ತರಣೆ ಸಾಧ್ಯತೆ, ವ್ಯವಸ್ಥಿತ ಮಾರ್ಗದರ್ಶನ ಪಡೆದು ಬೆಳವಣಿಗೆ ಹೊಂದುವ ಹಂತ ಇಂತಹ ಪ್ರಮುಖ ಅಂಶಗಳನ್ನು ಮಾನದಂಡವಾಗಿ ಇಟ್ಟುಕೊಳ್ಳಲಾಗಿದೆ. ಎಲ್ಲ ಅಡೆತಡೆಗಳನ್ನು ಮೀರಿ ಜಾಗತಿಕ ಮಾರುಕಟ್ಟೆ ಪ್ರವೇಶಿಸಬಹುದಾದ ಭರ ವಸೆಯ ಕೆಲವು ಉದ್ಯಮಗಳನ್ನು ಮೊದಲ ಹಂತದಲ್ಲಿ ಆಯ್ಕೆ ಮಾಡಲಾ ಗುತ್ತದೆ’ ಎಂದು ಟೈ ನರ್ಚರ್‌ನ ಅಧ್ಯಕ್ಷ ಸುಯೋಗ್ ಶೆಟ್ಟಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಕೆ– ಕಾಂಬಿನೇಟರ್ ಅಡಿಯಲ್ಲಿ ನೆರವು ಪಡೆಯಲಿರುವ ಉದ್ಯಮಗಳ ಹೆಸರನ್ನು ಸೆ. 23ರಂದು ನಗರದ ಟಿಎಂಎ ಪೈ ಸಭಾಭವನದಲ್ಲಿ ನಡೆಯಲಿರುವ ಟೆಕ್ನೊವಾಂಝಾ ಕಾರ್ಯಕ್ರಮದಲ್ಲಿ ಘೋಷಿಸಲಾಗುತ್ತದೆ. ಅಂತಿಮವಾಗಿ ಆರು ಉದ್ಯಮಗಳು ಆಯ್ಕೆಯಾಗುವ ಸಾಧ್ಯತೆಗಳು ಇವೆ. ಆಯ್ಕೆಯಾಗುವ ನವೋದ್ಯಮಕ್ಕೆ ಬೂಟ್ ಕ್ಯಾಂಪ್‌ಗಳು, ಮಾಸ್ಟರ್ ಕ್ಲಾಸ್, ಮಾರ್ಗದರ್ಶನ ಕಾರ್ಯಾಗಾರ, ಮಾರುಕಟ್ಟೆ, ಉದ್ಯಮ ಸಂಪರ್ಕ ಸೇರಿದಂತೆ 16 ವಾರಗಳ ಬಲವರ್ಧನೆ ತರಬೇತಿ ನೀಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು ಹೊರತುಪಡಿಸಿ ಟೈರ್–2 ಮತ್ತು ಟೈರ್–3 ನಗರಗಳಲ್ಲಿ ಸ್ಟಾರ್ಟ್‌ಅಪ್ ಸ್ಥಾಪನೆ, ವಿಸ್ತರಣೆಗೆ ಪ್ರೋತ್ಸಾಹ ನೀಡುವುದು ರಾಜ್ಯ ಸರ್ಕಾರದ ಕೆ– ಕಾಂಬಿನೇಟರ್ ಕಾರ್ಯಕ್ರಮದ ಮುಖ್ಯ ಉದ್ದೇಶ. ಇದಕ್ಕಾಗಿ ಸರ್ಕಾರವು ಟೈ ಮಂಗಳೂರಿಗೆ ಐದು ವರ್ಷಗಳಲ್ಲಿ ₹9.26 ಕೋಟಿ ನೆರವು ನೀಡಲಿದೆ. ಪ್ರಥಮ ಹಂತದಲ್ಲಿ ₹1.89 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಆಯ್ಕೆಯಾಗುವ ಸ್ಟಾರ್ಟ್‌ಅಪ್‌ಗಳು ತಲಾ ₹10 ಲಕ್ಷ ನೆರವು ಪಡೆಯಲಿವೆ.