
ಕಾವೇರಿ ಕಣಿವೆ ಜಲಾಶಯಗಳಿಂದ 25 ಸಾವಿರ ಕ್ಯುಸೆಕ್ ನೀರು ಹೊರಕ್ಕೆ
ಬೆಂಗಳೂರು: ಕಾವೇರಿ ಕಣಿವೆಯ ನಾಲ್ಕು ಪ್ರಮುಖ ಜಲಾಶಯಗಳಿಂದ ಹೊರ ಹರಿಸುತ್ತಿರುವ ನೀರಿನ ಪ್ರಮಾಣ 25 ಸಾವಿರ ಕ್ಯುಸೆಕ್ ತಲುಪಿದೆ.
ಬುಧವಾರ ಬೆಳಿಗ್ಗೆ ಹೊತ್ತಿಗೆ ಜಲಾಶಯದಿಂದ 24854 ಕ್ಯುಸೆಕ್ ನೀರನ್ನು ಜಲಾಶಯಗಳಿಂದ ಹರಿಬಿಡಲಾಗುತ್ತಿದೆ. ಜಲಾಶಯಗಳಿಗೆ 14071 ಕ್ಯುಸೆಕ್ ನೀರು ಮಾತ್ರ ಹರಿದು ಬರುತ್ತಿದೆ.
ನಾಲ್ಕು ಜಲಾಶಯಗಳಲ್ಲಿ ಸದ್ಯ 79 ಟಿಎಂಸಿ ನೀರು ಸಂಗ್ರಹವಿದ್ದು, ಶೇ 69ರಷ್ಟು ಲಭ್ಯವಿದೆ. ಇಲ್ಲಿ 114.57 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ಕಳೆದ ವರ್ಷ ಇದೇ ದಿನ 113 ಟಿಎಂಸಿ ನೀರು ಸಂಗ್ರಹವಿತ್ತು.
ಹಾಸನ ಜಿಲ್ಲೆಯ ಹೇಮಾವತಿ ಜಲಾಶಯದಿಂದ ಹೊರ ಹರಿವಿನ ಪ್ರಮಾಣವನ್ನು ಮತ್ತಷ್ಟು ಏರಿಕೆ ಮಾಡಲಾಗಿದೆ. ಜಲಾಶಯದಿಂದ 9150 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದ್ದು, 4456 ಕ್ಯುಸೆಕ್ ಒಳಹರಿವು ಇದೆ. ಜಲಾಶಯದಲ್ಲಿ ಸದ್ಯ 28 ಟಿಎಂಸಿ ನೀರು ಇದ್ದು, ಶೇ 75ರಷ್ಟು ಸಂಗ್ರಹವಿದೆ. ಕಳೆದ ವರ್ಷ ಇದೇ ದಿನ 36.91 ಟಿಎಂಸಿ ನೀರು ಸಂಗ್ರಹವಿತ್ತು. 37 ಟಿಎಂಸಿ ನೀರು ಸಂಗ್ರಹಿಸಲು ಅವಕಾಶವಿದೆ. ನೀರಿನ ಪ್ರಮಾಣ 2269.95 ಅಡಿಯಷ್ಟಿದೆ.
ಮಂಡ್ಯ ಜಿಲ್ಲೆಯ ಕೆಆರ್ ಎಸ್ ಜಲಾಶಯದಿಂದಲೂ ಈಗ 8544 ಕ್ಯುಸೆಕ್ ನೀರು ಹೊರಕ್ಕೆ ಹರಿಸಲಾಗುತ್ತಿದೆ. ಒಳ ಹರಿವು 3864 ಕ್ಯುಸೆಕ್ ಮಾತ್ರ ಇದೆ. ಜಲಾಶಯದ ನೀರಿನ ಮಟ್ಟವು 31 ಟಿಎಂಸಿಯಷ್ಟಿದೆ. ಸದ್ಯ 109.32 ಅಡಿ ನೀರು ಸಂಗ್ರಹವಿದೆ. ಕಳೆದ ವರ್ಷ ಜಲಾಶಯವು ಭರ್ತಿಯಾಗಿತ್ತು.
ಮೈಸೂರು ಜಿಲ್ಲೆಯ ಕಬಿನಿ ಜಲಾಶಯದಿಂದ ಸದ್ಯ 4660 ಕ್ಯುಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯಕ್ಕೆ 3217 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಹೆಚ್ಚಿನ ನೀರು ಹರಿಸಿದ್ದರಿಂದ ನೀರಿನ ಮಟ್ವು 2269.95 ಅಡಿಗೆ ಕುಸಿದಿದೆ. 11.66 ಟಿಎಂಸಿ ನೀರು ಲಭ್ಯವಿದ್ದು, ಶೇ 60ರಷ್ಟು ನೀರು ಸಂಗ್ರಹವಾಗಿದೆ.
ಕೊಡಗಿನ ಹಾರಂಗಿ ಜಲಾಶಯಕ್ಕೆ 2534 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, 2500 ಕ್ಯುಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಶೇ 98ರಷ್ಟು ನೀರು ಸಂಗ್ರಹವಾಗಿದ್ದು, 8.36 ಟಿಎಂಸಿ ನೀರು ಲಭ್ಯವಿದೆ. 2258.59 ಅಡಿ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಕೊಂಚ ಹೆಚ್ಚು ನೀರು ಜಲಾಶಯದಲ್ಲಿ ಸಂಗ್ರಹವಾಗಿದೆ.