
ಮುಂಗಾರು ಬೆಳೆ ಸಮೀಕ್ಷೆ ಆರಂಭ, ಮಾಹಿತಿ ನೀಡದಿದ್ದರೆ ಸಾಲ, ಸೌಲಭ್ಯಕ್ಕೆ ಅಡ್ಡಿ
ಬೆಂಗಳೂರು: ಕರ್ನಾಟಕದ ಬಹುತೇಕ ಭಾಗದಲ್ಲಿ ಬರದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರವು ಈಗಾಗಲೇ 101 ತಾಲ್ಲೂಕುಗಳಲ್ಲಿ ಅಧಿಕೃತ ಬರ ಎಂದು ಘೋಷಣೆ ಮಾಡಿದ್ದು, ಇದರ ಬೆನ್ನಲ್ಲೇ 2026-27ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆಗೆ ಮುಂದಾಗಿದೆ.
ಸರ್ಕಾರದ ಆದೇಶದ ಅನುಸಾರ ಈ ಬಾರಿಯ ರೈತರ ಬೆಳೆ ಸಮೀಕ್ಷೆ ಕಾರ್ಯದಲ್ಲಿ ರೈತರು ಸ್ವತಃ ತಮ್ಮ ಜಮೀನಿನಲ್ಲಿ ತಾವು ಬೆಳೆದ ಬೆಳೆಯ ವಿವರ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ.
ಮೊಬೈಲ್ ಆಪ್ ಬಳಕೆ ಮಾಡುವ ರೀತಿಯನ್ನು ರೈತರಿಗೆ ತಿಳಿಸಲು ಪ್ರತಿ ಗ್ರಾಮದಲ್ಲಿ ನುರಿತ ಖಾಸಗಿ ನಿವಾಸಿಗಳನ್ನು ನೇಮಿಸಲಾಗಿದ್ದು. ತಮ್ಮ ಗ್ರಾಮಗಳ ನಿಯೋಜಿಸಲ್ಪಟ್ಟ ಖಾಸಗಿ ನಿವಾಸಿಗಳ ವಿವರಗಳನ್ನು ಸಂಬಂಧಪಟ್ಟ ಕೃಷಿ/ ಕಂದಾಯ ಇಲಾಖೆಯ ಕಚೇರಿಯಿಂದ ಪಡೆಯಬಹುದಾಗಿದೆ.
ರೈತರು ಬೆಳೆ ಸಮೀಕ್ಷೆ ಮೊಬೈಲ್ ಆಪ್ ಅನ್ನು ಬಳಸಲು ಹೊಸ ರೈತರ ಸಮೀಕ್ಷೆ ಅಪ್ಲಿಕೇಷನ್ ಫ್ರೂಟ್ಸ್ ತಂತ್ರಾಂಶದ ಎಫ್‍ಐಡಿ ಸಂಖ್ಯೆಗೆ ಜೋಡಣೆಯಾಗಿರುವುದರಿಂದ ಅಪ್ಲಿಕೇಷನ್ ಬಳಸಲು ರೈತರು ಫ್ರೂಟ್ಸ್ ತಂತ್ರಾಂಶದ ಎಫ್‍ಐಡಿ ಸಂಖ್ಯೆ ಹೊಂದಿರುವುದು ಕಡ್ಡಾಯವಾಗಿದೆ.
ರೈತರು ತಾವು ಬೆಳೆದ ಬೆಳೆಯ ಗಿಡದ ಸಂಖ್ಯೆ ಮತ್ತು ಪ್ರತಿ ಗಿಡ ಅಂತರ ನಮೂದಿಸಬೇಕು. ರೈತರು ತಾವು ಬೆಳೆದ ಪ್ರತಿ ಬೆಳೆಯ ವಿಸ್ತೀರ್ಣದ ಜೊತೆಗೆ ಪ್ರತಿ ಬೆಳೆಯ 2 ಛಾಯಾ ಚಿತ್ರಗಳನ್ನು ತೆಗೆದು ಅಪ್ಲೋಡ್ ಮಾಡಬೇಕು. ಹೀಗೆ ಅಪ್ಲೋಡ್ ಮಾಡಲಾದ ಮಾಹಿತಿಯನ್ನು ಪ್ರತಿ ಗ್ರಾಮಕ್ಕೆ ನೇಮಿಸಲಾದ ಸರ್ಕಾರಿ ಅಧಿಕಾರಿಗಳು (ಮೇಲ್ವಿಚಾರಕರು) ಪರಿಶೀಲಿಸಿ ಅನುಮೋದಿಸುತ್ತಾರೆ.
ರೈತರು ಎಫ್‍ಐಡಿ ಸಂಖ್ಯೆ ಹೊಂದಿಲ್ಲದಿದ್ದಲ್ಲಿ ರೈತ ಸಂಪರ್ಕ ಕೇಂದ್ರ. ಗ್ರಾಮ ಒನ್ ಕೇಂದ್ರ. ತೋಟಗಾರಿಕೆ ಇಲಾಖೆ ಅಥವಾ ಕಂದಾಯ ಇಲಾಖೆ ಸಂಪರ್ಕಿಸಿ ಎಫ್‍ಐಡಿ ಸಂಖ್ಯೆ ಮಾಡಿಸಿಕೊಳ್ಳಬಹುದು. ಎಫ್‍ಐಡಿ ಸಂಖ್ಯೆಗೆ ಯಾವುದಾದರೂ ಜಮೀನು ಸೇರ್ಪಡೆ ಆಗದೇ ಇದ್ದಲ್ಲಿ ಸೇರಿಸಿಕೊಳ್ಳಲು ಇದೇ ಮೊಬೈಲ್ ಆಫ್‍ನಲ್ಲಿ ಅವಕಾಶ ಕಲ್ಪಿಸಲಾಗಿದೆ.
ಒಂದು ವೇಳೆ ರೈತರು ತಮ್ಮ ಜಮೀನಿನ ಬೆಳೆ ವಿವರಗಳನ್ನು ನಿಗದಿತ ಸಮಯದೊಳಗೆ ಆಪ್ ಲೋಡ್ ಮಾಡದಿದ್ದಲ್ಲಿ ಇಲಾಖೆಯಿಂದ ನೇಮಿಸಲಾದ ಖಾಸಗಿ ನಿವಾಸಿಗಳ ಮೂಲಕ ಸಮೀಕ್ಷೆ ಕಾರ್ಯಕೈಗೊಳ್ಳಲಾಗುವುದು. ಹೀಗೆ ಸಂಗ್ರಹಿಸಲಾದ ರೈತರ ಬೆಳೆ ಸಮೀಕ್ಷೆ ಮಾಹಿತಿಯನ್ನು ಸರ್ಕಾರದ ಯೋಜನೆಗಳಿಗೆ ಬಳಸಲಾಗುತ್ತದೆ ಎನ್ನುವುದು ಕೃಷಿ ಇಲಾಖೆ ಅಧಿಕಾರಿಗಳ ವಿವರಣೆ.
ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಅರ್ಹ ಫಲಾನುಭವಿಗಳನ್ನು ಗುರುತಿಸುವ ಜತೆಗೆ ಬೆಳೆ ವಿಮಾ ಯೋಜನೆಯಡಿ ಬೆಳೆ ವಿವರ ಪರಿಶೀಲಿಸಲು ಸಹಕಾರಿಯಾಗಲಿದೆ.
ಸಾಂಖ್ಯಿಕ ಇಲಾಖೆ, ಕೃಷಿ, ತೋಟಗಾರಿಕೆ ಮತ್ತುರೇಷ್ಮೆ ಇಲಾಖೆಗಳ ಬೆಳೆ ವಿಸ್ತೀರ್ಣ ವರದಿ ಕಾರ್ಯದಲ್ಲಿ ಬೆಳೆ ಕಟಾವು ಪ್ರಯೋಗ ಕೈಗೊಳ್ಳುವ ಜತೆಯಲ್ಲಿ ಬೆಳೆ ಮಾನದಂಡಗಳಿಗೆ ಅನುಗುಣವಾಗಿ ಕೃಷಿ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನಕ್ಕೆ ಇದು ಉಪಯೋಗಕ್ಕೆ ಬರಲಿದೆ.
ಪಹಣಿಯಲ್ಲಿ ಬೆಳೆ ವಿವರ ದಾಖಲಿಸಿಕೊಂಡು ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಘಗಳ ಮುಖಾಂತರ ಬೆಳೆ ಸಾಲ ನೀಡುವ ಸಂದರ್ಭದಲ್ಲಿ ಬೆಳೆ ಪರಿಶೀಲನೆ ಮಾಡಲು ಇದು ಸಹಕಾರಿಯಾಗಲಿದೆ.
ಕೆಲವೊಂದು ಸಂದರ್ಭಗಳಲ್ಲಿ ಖಾಸಗಿ ನಿವಾಸಿಗಳು ತಲುಪಲು ಸಾಧ್ಯವಾಗದ ಪ್ರದೇಶಗಳಲ್ಲಿರುವ ಬೆಳೆಗಳು ಅವರು ದಾಖಲಿಸುವ ಬೆಳೆ ಸಮೀಕ್ಷೆಯಿಂದ ಹೊರಗುಳಿಯುವ ಸಾಧ್ಯತೆಗಳಿವೆ. ಈ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಜಿಲ್ಲೆಯ ರೈತರು ಈ ಅವಕಾಶದ ಸದುಪಯೋಗ ಪಡೆದುಕೊಂಡು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆ ವಿವರವನ್ನು ಸೆಪ್ಟಂಬರ್ 30ರೊಳಗೆ ವರದಿ ಮಾಡುವಂತೆ ಸೂಚನೆ ನೀಡಲಾಗಿದೆ.
ಮಾಹಿತಿಗೆ ಇಲ್ಲಿ ಸಂಪರ್ಕಿಸಿ
ಹೆಚ್ಚಿನ ಮಾಹಿತಿಗೆ ತಮ್ಮ ಗ್ರಾಮದ ಖಾಸಗಿ ನಿವಾಸಿಯನ್ನು ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ತಮ್ಮ ಗ್ರಾಮದ ಗ್ರಾಮ ಲೆಕ್ಕಿಗರನ್ನು ಅಥವಾ ನಾಡಕಚೇರಿ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದು ಕೃಷಿ ಇಲಾಖೆ ನಿರ್ದೇಶಕರು ತಿಳಿಸಿದ್ದಾರೆ.