
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ.25ರಿಂದ 28ರ ವರೆಗೆ ಕೃಷಿ ಮೇಳ
ಧಾರವಾಡ: ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಸೆ.25ರಿಂದ 28ರ ವರೆಗೆ ನಡೆಯುವ ಕೃಷಿ ಮೇಳಕ್ಕೆ ವಿಶ್ವವಿದ್ಯಾಲಯದ ಆವರಣ ಸಜ್ಜುಗೊಂಡಿದೆ.
‘ಸಶಕ್ತ ಮಹಿಳೆ –ಸುಸ್ಥಿರ ಕೃಷಿ’ ಮೇಳದ ಘೋಷ ವಾಕ್ಯವಾಗಿದೆ. ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ 25ರಂದು ಬೆಳಿಗ್ಗೆ 11.30ಕ್ಕೆ ಬೀಜ ಮೇಳ ಉದ್ಘಾಟನೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಕೃಷಿಯಲ್ಲಿ ‘ರೈತ ಮಹಿಳೆಯರ ಮಹತ್ವ ಮತ್ತು ಸಬಲೀಕರಣ’ ವಿಚಾರಗೋಷ್ಠಿ ನಡೆಯಲಿದೆ. ವಿಶ್ವವಿದ್ಯಾಲಯದ ಒಳಾಂಗಣ ಕ್ರೀಡೆ –ವ್ಯಾಯಾಮ ಶಾಲೆ ಮತ್ತು ಸುತ್ತಲಿನ ಪ್ರದೇಶದಲ್ಲಿ ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ.
‘ಸ್ಮಾರ್ಟ್ ಫಾರ್ಮಿಂಗ್’ ಪ್ರಾತ್ಯಕ್ಷಿಕೆ: ಒಳಾಂಗಣ ಕ್ರೀಡೆ –ವ್ಯಾಯಾಮ ಶಾಲೆ ಹಿಂಭಾಗದ ಒಂದು ಎಕರೆ ಪ್ರದೇಶದಲ್ಲಿ ‘ಸ್ಮಾರ್ಟ್ ಫಾರ್ಮಿಂಗ್’ ಪ್ರಾತ್ಯಕ್ಷಿಕೆಗೆ ವ್ಯವಸ್ಥೆ ಮಾಡಲಾಗಿದೆ.
ಐಒಟಿ ಆಧಾರಿತ ಕೊಳವೆಬಾವಿ ನೀರು ನಿರ್ವಹಣಾ ವ್ಯವಸ್ಥೆ, ಐಒಟಿ ಆಧಾರಿತ ಮೊಳಕೆ ಹಂತದ ಕಳೆ ತೆಗೆಯುವ ಯಂತ್ರ, ಬ್ಯಾಟರಿ ಮತ್ತು ಮೊಬೈಲ್ ಫೋನ್‌ನಿಂದ ಕಾರ್ಯನಿರ್ವಹಿಸುವ ಸ್ವಯಂಚಾಲಿತ ವಾಲ್ವ್, ಸೌರಶಕ್ತಿ ಚಾಲಿತ ಕಡಲೆ ಸಸ್ಯದ ಕುಡಿ ಚಿವುಟುವ ಯಂತ್ರ ಮೊದಲಾದವುಗಳ ಪ್ರಾತ್ಯಕ್ಷಿಕೆ ಇರಲಿದೆ.
ವಿಶ್ವವಿದ್ಯಾಲಯದ ಮುಖ್ಯ ಪ್ರವೇಶ ದ್ವಾರದ ಬಳಿ (ಎಡಭಾಗ) ನೋಂದಣಿ ಕೇಂದ್ರ, ಜಾನುವಾರು ಪ್ರದರ್ಶನ, ಪಶುವೈದ್ಯಕೀಯ ಮಳಿಗೆ ವ್ಯವಸ್ಥೆ ಮಾಡಲಾಗಿದೆ. ವಿಶ್ವವಿದ್ಯಾಲಯದ ಆವರಣದಲ್ಲಿನ ಸಮುದಾಯ ವಿಜ್ಞಾನ ಕಾಲೇಜು ಬಳಿ ಬೀಜ ಘಟಕದಲ್ಲಿ ಬಿತ್ತನೆ ಬೀಜಗಳ ಮಳಿಗೆಗಳನ್ನು ಸಜ್ಜುಗೊಳಿಸಲಾಗಿದೆ.
ಒಳಾಂಗಣ ಕ್ರೀಡೆ –ವ್ಯಾಯಾಮಶಾಲೆ ಕಟ್ಟಡ ಮತ್ತು ಸುತ್ತಲಿನ ಪ್ರದೇಶದಲ್ಲಿ ಹೈಟೆಕ್ ಮಳಿಗೆ, ಯಂತ್ರೋಪಕರಣ, ಕೃಷಿ ಪರಿಕರ (ರಸಾಯನಿಕ ಗೊಬ್ಬರ, ರೋಗನಾಶಕ, ಕಳೆನಾಶಕ...) , ಆಹಾರ ಮಳಿಗೆಗಳನ್ನು ಸಿದ್ಧಗೊಳಿಸಲಾಗಿದೆ.
ಹಿಂಗಾರು ಬೆಳೆ ತಾಂತ್ರಿಕತೆ, ಫಲಪುಷ್ಪ ಪ್ರದರ್ಶನ, ವಿಸ್ಮಯಕಾರಿ ಕೀಟ ಪ್ರಪಂಚ, ಸ್ಟಾರ್ಟ್ ಅಪ್ (ನವೋದ್ಯಮ) ಪೆವಿಲಿಯನ್, ಕೃಷಿಯಲ್ಲಿ ಡ್ರೋನ್ ಬಳಕೆ ಮೊದಲಾದವು ಮೇಳದ ಆಕರ್ಷಣೆಗಳು.
ವಾಹನ ನಿಲುಗಡೆ: 13 ಸ್ಥಳ ನಿಗದಿ
ಮೇಳಕ್ಕೆ ಬರುವವರ ವಾಹನ ನಿಲುಗಡೆಗೆ ಬೀಜ ಸಂಸ್ಕರಣೆ ಘಟಕ ಆವರಣ, ಎತ್ತಿನಗುಡ್ಡ ಬಯಲು ಪ್ರದೇಶ, ಎತ್ತಿನಗುಡ್ಡ ಗೌಟನ್ ಬಯಲು ಪ್ರದೇಶ, ವಿಕಾಸ್ ಪಿಸಿ ಹಾಸ್ಟೆಲ್, ಎತ್ತಿನಗುಟ್ಟ ಶಾಲೆ, ಪ್ರಾಥಮಿಕ ಶಾಲೆ, ಫುಟ್‌ಬಾಲ್ ಮೈದಾನ, ವಿ.ವಿ ಡೈರಿ, ಐಸಿಎಆರ್ ಸಂಸ್ಥೆ, ಹೈಟೆಕ್ ತೋಟಗಾರಿಕೆ ಸಂಸ್ಥೆ, ಗಾಂವ್ಕರ್ ಪ್ಲಾಟ್, ಬಸವನಗರ ಹಾಗೂ ಇಸ್ಕಾನ್ ಮುಂಭಾಗದ ಬಯಲು ಪ್ರದೇಶದಲ್ಲಿ ವಾಹನ ನಿಲುಗಡೆಗೆ ಸ್ಥಳ ನಿಗದಿಪಡಿಸಲಾಗಿದೆ.
krishimela.hdcitypolice.com ವೆಬ್‌ಸೈಟ್‌ನಲ್ಲಿ ಕ್ಯುಆರ್ ಕೋಡ್ ಸ್ಕ್ಯಾನ್ ಮಾಡಿ ವಾಹನ ನಿಲುಗಡೆ ಸ್ಥಳ ಮಾಹಿತಿ ಪಡೆಯುಬಹುದು.
ವಾಹನ ಮಾರ್ಗ ಬದಲಾವಣೆ: ಬೆಳಗಾವಿಯಿಂದ ಧಾರವಾಡ ಕಡೆಗೆ ಸಾಗುವ ವಾಹನಗಳು ನರೇಂದ್ರ ಬೈಪಾಸ್ ಮಾರ್ಗವಾಗಿ ಕೆಲಗೇರಿ ಬ್ರಿಡ್ಜ್ – ಜರ್ಮನ್ ವೃತ್ತ ಮಾರ್ಗವಾಗಿ ಧಾರವಾಡ ನಗರ ತಲುಪುವುದು.
ಧಾರವಾಡದಿಂದ ಬೆಳಗಾವಿ ಕಡೆಗೆ ಸಾಗುವ ವಾಹನಗಳು ಉಪನಗರ ಠಾಣೆ–ಜರ್ಮನ್ ವೃತ್ತ– ಕೆಲಗೇರಿ ರಸ್ತೆ ಮೂಲಕ ಬೈಪಾಸ್ ಮಾರ್ಗವಾಗಿ ಸಂಚರಿಸುವುದು. ಕೃಷಿ ಮೇಳಕ್ಕೆ ಬರುವ ವಾಹನಗಳ ಹೊರತಾಗಿ ಇತರ ವಾಹನಗಳಿಗೆ ಕೃಷಿ ವಿ.ವಿ ಮುಂಭಾಗದ ರಸ್ತೆಯಲ್ಲಿ ಸಂಚಾರ ನಿರ್ಬಂಧಿಸಲಾಗಿದೆ ಎಂದು ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.