
ತುಮಕೂರು: 'ನಮ್ಮ ಕ್ಲಿನಿಕ್' ವೈದ್ಯರು,ಸಿಬ್ಬಂದಿಗೆ 2 ತಿಂಗಳಿಂದ ಕೊಟ್ಟಿಲ್ಲ ಸಂಬಳ
ತುಮಕೂರು: ಸಣ್ಣ–ಪುಟ್ಟ ಕಾಯಿಲೆಗೂ ದೊಡ್ಡಾಸ್ಪತ್ರೆಗೆ ಅಲೆಯುವುದನ್ನು ತಪ್ಪಿಸುವ ಉದ್ದೇಶದಿಂದ ಆರಂಭಿಸಿರುವ ‘ನಮ್ಮ ಕ್ಲಿನಿಕ್’ನಲ್ಲಿ ಕೆಲಸ ಮಾಡುತ್ತಿರುವ ವೈದ್ಯರು, ಸಿಬ್ಬಂದಿಗೆ ಕಳೆದ ಎರಡು ತಿಂಗಳಿನಿಂದ ವೇತನ ಜಮಾ ಆಗಿಲ್ಲ.
ಜಿಲ್ಲೆಯಲ್ಲಿ ಒಟ್ಟು 25 ಕ್ಲಿನಿಕ್ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸದ್ಯ 24 ಕ್ಲಿನಿಕ್ ಕಾರ್ಯನಿರ್ವಹಿಸುತ್ತಿವೆ. ನಗರದಲ್ಲಿಯೇ 13 ಕ್ಲಿನಿಕ್‌ಗಳಿವೆ. ಪ್ರತಿ ಕೇಂದ್ರದಲ್ಲಿ ಒಬ್ಬರು ವೈದ್ಯರು, ಶುಶ್ರೂಷಕಿ, ಆರೋಗ್ಯ ನಿರೀಕ್ಷಕರು ಮತ್ತು ಗ್ರೂಪ್–ಡಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯಾದ್ಯಂತ ಒಟ್ಟು 96 ಮಂದಿಯನ್ನು ನೇಮಕ ಮಾಡಲಾಗಿದೆ. ಅವರಿಗೆ ಕೊನೆಯದಾಗಿ ಜೂನ್ ತಿಂಗಳಿನಲ್ಲಿ ವೇತನ ಬಿಡುಗಡೆ ಮಾಡಲಾಗಿತ್ತು. ಕಳೆದ ಎರಡು ತಿಂಗಳಿನಿಂದ ಬ್ಯಾಂಕ್ ಖಾತೆ ಪರಿಶೀಲಿಸುವುದು ಅವರ ನಿತ್ಯದ ಕಾಯಕವಾಗಿದೆ.
ವೈದ್ಯರಿಗೆ ₹60 ಸಾವಿರ, ಶುಶ್ರೂಷಕರಿಗೆ ₹18 ಸಾವಿರ ಸಂಬಳ ನಿಗದಿ ಪಡಿಸಲಾಗಿದೆ. ಕೆಲ ಕ್ಲಿನಿಕ್‌ಗಳಲ್ಲಿ ವೈದ್ಯರ ನೇಮಕ ಪೂರ್ಣಕಾಲಿಕವಾಗಿಲ್ಲ. ಆರು ತಿಂಗಳು, ಒಂದು ವರ್ಷ ಕೆಲಸ ಮಾಡಿ ನಂತರ ಅಲ್ಲಿಂದ ಬೇರೆ ಕಡೆಗೆ ಹೋಗುತ್ತಿದ್ದಾರೆ. ಎಂಬಿಬಿಎಸ್ ಕೋರ್ಸ್ ಮುಗಿಸಿಕೊಂಡು ಬಂದವರು ನೇರವಾಗಿ ಕ್ಲಿನಿಕ್‌ಗಳಿಗೆ ಸೇರುತ್ತಿದ್ದಾರೆ. ನಂತರ ಉನ್ನತ ಶಿಕ್ಷಣ ಪಡೆಯಲು ಹುದ್ದೆ ತೊರೆಯುತ್ತಿದ್ದಾರೆ. ಇದರಿಂದ ಕ್ಲಿನಿಕ್ ಸುತ್ತಮುತ್ತಲಿನ ಭಾಗದ ಜನರಿಗೆ ತೊಂದರೆ ಆಗುತ್ತಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದೆ ತಾಲ್ಲೂಕು, ಜಿಲ್ಲಾ ಕೇಂದ್ರಗಳ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.
ಸದ್ಯ ಕ್ಲಿನಿಕ್‌ಗಳಲ್ಲಿ ಸರ್ಕಾರದ ವೇತನ ನಂಬಿಕೊಂಡು ಜೀವನ ಸಾಗಿಸುತ್ತಿದ್ದವರು ಹೆಚ್ಚಿನಸಮಸ್ಯೆ ಅನುಭವಿಸುತ್ತಿದ್ದಾರೆ. ಬದುಕು ಸಾಗಿಸಲು ಹೆಣಗಾಡುತ್ತಿದ್ದಾರೆ.
‘ಕೊಡುವುದು ಕಡಿಮೆ ಸಂಬಳ. ಅದೂ ಸೂಕ್ತ ಸಮಯಕ್ಕೆ ಸಿಗುತ್ತಿಲ್ಲ. ಮಕ್ಕಳ ಶಿಕ್ಷಣ, ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಪ್ರತಿ ಬಾರಿ ಇದೇ ರೀತಿಯಾಗುತ್ತಿದೆ. ಎರಡು– ಮೂರು ತಿಂಗಳಿಗೊಮ್ಮೆ ವೇತನ ಬಿಡುಗಡೆಯಾಗುತ್ತಿದೆ. ಹೀಗಾದರೆ ನಮ್ಮ ಭವಿಷ್ಯ ಹೇಗೆ?’ ಎಂದು ಕ್ಲಿನಿಕ್‌ನ ಸಿಬ್ಬಂದಿಯೊಬ್ಬರು ಪ್ರಶ್ನಿಸಿದರು.
ಕ್ಲಿನಿಕ್ ಆರಂಭದ ಹಂತದಲ್ಲಿ ಜನರಿಂದ ಉತ್ತಮ ಸ್ಪಂದನೆ ಸಿಕ್ಕರೂ ವೈದ್ಯರು, ಶುಶ್ರೂಷಕಿ ಇಲ್ಲದೆ ಅಗತ್ಯ ಸೇವೆ ಲಭ್ಯವಾಗುತ್ತಿರಲಿಲ್ಲ. ಈಗ ನಿಧಾನವಾಗಿ ಹಳಿಗೆ ಮರಳುತ್ತಿವೆ. ರೋಗಿಗಳಿಗೆ ಚಿಕಿತ್ಸೆ ನೀಡಿ, ಆರೋಗ್ಯ ರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವವರು ಸಂಬಳಕ್ಕಾಗಿ ಎದುರು ನೋಡುವಂತಾಗಿದೆ.
ಬಸ್ ನಿಲ್ದಾಣದಲ್ಲಿ ಕ್ಲಿನಿಕ್‌ಗೆ ಜಾಗವಿಲ್ಲ!
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ನಮ್ಮ ಕ್ಲಿನಿಕ್ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಸ್ಥಳಾವಕಾಶದ ಕೊರತೆ ಕಾರಣಕ್ಕೆ ಅದನ್ನು ಸ್ಥಳಾಂತರಿಸಲಾಗಿದೆ.
ಬಸ್ ನಿಲ್ದಾಣದಲ್ಲಿ ಕ್ಲಿನಿಕ್ ತೆರೆದರೆ ತುಂಬಾ ಜನರಿಗೆ ನೆರವಾಗುತ್ತದೆ. ದಿನಕ್ಕೆ ಸಾವಿರಾರು ಪ್ರಯಾಣಿಕರಿಗೆ ಆರೋಗ್ಯ ಸೇವೆ ಒದಗಿಸಬಹುದು ಎಂಬ ನಿಟ್ಟಿನಲ್ಲಿ ಸ್ಥಳ ಅಂತಿಮ ಮಾಡಲಾಗಿತ್ತು. ಆದರೆ ತುಂಬಾ ಕಿರಿದಾದ ಜಾಗದಲ್ಲಿ ಕ್ಲಿನಿಕ್ ನಡೆಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಸೂಚಿಸಿದ್ದರು. ಹೀಗಾಗಿ ಜಯನಗರದ ಹಳೆಯ ಪೊಲೀಸ್ ಠಾಣೆ ಇದ್ದ ಕಟ್ಟಡದಲ್ಲಿ ಕ್ಲಿನಿಕ್ ಶುರು ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ.
ಇದು ಇಡೀ ರಾಜ್ಯದ ಸಮಸ್ಯೆ. ಎಲ್ಲ ಕಡೆಯಲ್ಲಿ ವೇತನ ಆಗಿಲ್ಲ. ಮುಂದಿನ ದಿನಗಳಲ್ಲಿ ಸಂಬಳ ಪಾವತಿಗೆ ಕ್ರಮ ವಹಿಸಲಾಗುವುದು
ಡಾ.ಬಿ.ಎಂ.ಚಂದ್ರಶೇಖರ್, ಡಿಎಚ್‌ಒ