
ದಾವಣಗೆರೆಗೆ ಮುಂದಿನ 20 ವರ್ಷ ಜಲಭದ್ರತೆ ಕಲ್ಪಿಸುವ ‘ಜಲಸಿರಿ’ ಯೋಜನೆ
ದಾವಣಗೆರೆ: ಜಿಲ್ಲೆಯಲ್ಲೇ ತುಂಗಭದ್ರಾ ನದಿ ಹಾಗೂ ನಗರದಲ್ಲೇ ಭದ್ರಾ ಜಲಾಶಯದ ನಾಲೆ ಇದ್ದರೂ ನೀರಿಗೆ ಬವಣೆ ತಪ್ಪಿರಲಿಲ್ಲ. ಅಂತೆಯೇ ‘ಸಮುದ್ರದ ನೆಂಟಸ್ತನ ಉಪ್ಪಿಗೆ ಬಡತನ’ ಎನ್ನುವಂತಾಗಿತ್ತು ದಾವಣಗೆರೆ ನಿವಾಸಿಗಳ ಸ್ಥಿತಿ. ನೀರಿನ ಸಂಕಷ್ಟ ನಿವಾರಣೆಗೆ ಜಾರಿಯಾದ ‘ಜಲಸಿರಿ’ ಯೋಜನೆ ಮುಂದಿನ 20 ವರ್ಷಗಳಿಗೆ ಜಲಭದ್ರತೆ ಕಲ್ಪಿಸುವ ಭರವಸೆ ಮೂಡಿಸಿದೆ.
45 ವಾರ್ಡ್‌ಗಳನ್ನು ಹೊಂದಿರುವ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಂದಾಜು 6 ಲಕ್ಷ ಜನಸಂಖ್ಯೆ ಇದೆ. ಪ್ರತಿ ವ್ಯಕ್ತಿಗೆ ದಿನಕ್ಕೆ 135 ಲೀಟರ್ ನೀರು ಕೊಡುವುದು ಸ್ಥಳೀಯ ಆಡಳಿತದ ಕರ್ತವ್ಯ. ಕನಿಷ್ಠ ಪ್ರಮಾಣದ ನೀರು ಕೊಡಲು ಸಾಧ್ಯವಾಗದೇ ಮಹಾನಗರ ಪಾಲಿಕೆ ಸಾರ್ವಜನಿಕರ ಸಿಟ್ಟಿಗೆ ಗುರಿಯಾಗಿತ್ತು. ‘ಜಲಸಿರಿ’ ಅನುಷ್ಠಾನಗೊಳ್ಳುತ್ತಿದ್ದಂತೆಯೇ ಇಂತಹ ಸಮಸ್ಯೆಗಳಿಗೆ ಪರಿಹಾರ ಸಿಗಲಾರಂಭಿಸಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ಜನಸಂಖ್ಯೆ 2046ಕ್ಕೆ 9.21 ಲಕ್ಷಕ್ಕೆ ತಲುಪಬಹುದು ಎಂಬ ಅಂದಾಜು ಇದೆ. ಮೂರು ದಶಕಗಳ ನಗರದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು 2016–17ರಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧಪಡಿಸಲಾಗಿದೆ. ಸದ್ಯ ನಗರಕ್ಕೆ ನಿತ್ಯದ ಅಗತ್ಯಕ್ಕೆ 7.70 ಕೋಟಿ ಲೀಟರ್ ನೀರು ಸಾಕಾಗುತ್ತದೆ. ಮುಂದಿನ 20 ವರ್ಷಕ್ಕೆ ಈ ಬೇಡಿಕೆ 15.7 ಕೋಟಿ ಲೀಟರ್‌ಗೆ ಏರಿಕೆಯಾಗುವ ನಿರೀಕ್ಷೆ ಇದೆ. ಇದಕ್ಕೆ ಅನುಗುಣವಾಗಿ ಜಲಮೂಲವನ್ನು ಸಜ್ಜುಗೊಳಿಸಲಾಗಿದೆ.
ದಾಹ ನೀಗಿಸಲಿದೆ ಬ್ಯಾರೇಜ್: 0.0065 ಟಿಎಂಸಿ ಅಡಿ ಸಾಮರ್ಥ್ಯದ ಟಿ.ವಿ. ಸ್ಟೇಷನ್ ಕೆರೆ ನಗರಕ್ಕೆ ಬಹುದಿನಗಳಿಗೆ ಆಸರೆಯಾಗಿತ್ತು. ಭದ್ರಾ ನಾಲೆಯ ಮೂಲಕ ಇಲ್ಲಿಗೆ ನೀರು ಹರಿಸಲಾಗುತ್ತದೆ. 1997ರಲ್ಲಿ ತುಂಗಭದ್ರಾ ನದಿಯ ರಾಜನಹಳ್ಳಿ ಸಮೀಪದಿಂದಲೂ ನೀರು ಪೂರೈಕೆ ಮಾಡಲಾರಂಭಿಸಲಾಯಿತು. 2002ರ ಬಳಿಕ ಕುಂದವಾಡ ಕೆರೆ ಅಭಿವೃದ್ಧಿಪಡಿಸಿ ನಗರದ ನೀರಿಗೆ ಮೀಸಲಿರಿಸಲಾಯಿತು. 0.0085 ಟಿಎಂಸಿ ಅಡಿ ಸಾಮರ್ಥ್ಯದ ಈ ನೀರು ಕೂಡ ಹಲವು ವಾರ್ಡ್‌ಗಳಿಗೆ ಪೂರೈಕೆಯಾಗುತ್ತಿತ್ತು.
ಜನಸಂಖ್ಯೆ ಹೆಚ್ಚಾದಂತೆ ನಗರದ ದಾಹ ತಣಿಸುವುದು ಕಷ್ಟವಾಯಿತು. ಬೇಸಿಗೆ ಸಂದರ್ಭದಲ್ಲಿ ಕೆರೆಗಳು ಖಾಲಿಯಾದರೆ, ನದಿಯೂ ಬತ್ತಿ ಹೋಗುತ್ತಿತ್ತು. ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಗರದಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗುತ್ತಿತ್ತು. ಸ್ಮಾರ್ಟ್ ಸಿಟಿ ಯೋಜನೆಯಡಿ ರಾಜನಹಳ್ಳಿಯಲ್ಲಿ ನಿರ್ಮಿಸಿದ 0.2 ಟಿಎಂಸಿ ಅಡಿ ಸಾಮರ್ಥ್ಯದ ಬ್ಯಾರೇಜ್ ಇದಕ್ಕೆ ಪರಿಹಾರದ ರೀತಿಯಲ್ಲಿ ಕಾಣತೊಡಗಿದೆ.
ಬ್ಯಾರೇಜ್ ನಿರ್ಮಾಣದಿಂದ ತುಂಗಭದ್ರಾ ನದಿಯಲ್ಲಿ 5 ಕಿ.ಮೀ.ವರೆಗೆ ನೀರು ನಿಲ್ಲುತ್ತಿದೆ. ಸ್ವಯಂಚಾಲಿತ ಗೇಟ್ ವ್ಯವಸ್ಥೆಯುಳ್ಳ ಆಧುನಿಕ ತಂತ್ರಜ್ಞಾನ ಹೊಂದಿದ ಅಪರೂಪದ ಬ್ಯಾರೇಜ್ ಎಂಬ ಹಗ್ಗಳಿಕೆ ಇದಕ್ಕಿದೆ. ಬ್ಯಾರೇಜ್‌ನಲ್ಲಿ ನೀರಿನ ಒತ್ತಡ ಹೆಚ್ಚಾಗುತ್ತಿದ್ದಂತೆ ಗೇಟ್ ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ. ನೀರಿನ ಒತ್ತಡ ಕಡಿಮೆ ಆಗುತ್ತಿದ್ದಂತೆ ಗೇಟ್ ಮುಚ್ಚಿಕೊಳ್ಳುತ್ತದೆ.
ಜಲಸಿರಿ ಯೋಜನೆ ಪರಿಪೂರ್ಣವಾಗಿ ಅನುಷ್ಠಾನಗೊಂಡರೆ ಟಿ.ವಿ. ಸ್ಟೇಷನ್ ಕೆರೆಯ ನೀರನ್ನು ಆಪತ್ಕಾಲಕ್ಕೆ ಮೀಸಲು ಇಟ್ಟುಕೊಳ್ಳಲು ಪಾಲಿಕೆ ನಿರ್ಧರಿಸಿದೆ. ಪಾಲಿಕೆ ಸುತ್ತ ಇರುವ ಇಂತಹ ಕೆರೆಗಳನ್ನು ಜಲಸಂಗ್ರಹಾಗಾರವಾಗಿ ಬಳಕೆ ಮಾಡಿಕೊಳ್ಳುವತ್ತಲೂ ಒಲವು ತೋರಿದೆ.
ತಪ್ಪಿದ ನೀರು ಸೋರಿಕೆ: ದಿನವೊಂದಕ್ಕೆ 7 ಕೋಟಿ ಲೀಟರ್ (70 ಎಂಎಲ್‌ಡಿ) ನೀರು ಸಾಕಾಗುವ ಸಮಯದಲ್ಲಿ 11 ಕೋಟಿ ಲೀಟರ್ (110 ಎಂಎಲ್‌ಡಿ) ನೀರನ್ನು ಪಾಲಿಕೆ ಸರಬರಾಜು ಮಾಡಿದೆ. ಪೈಪ್‌ಲೈನ್ ಜಾಲದಲ್ಲಿನ ನ್ಯೂನತೆಗಳಿಂದ ಕೋಟ್ಯಂತರ ಲೀಟರ್ ನೀರು ನಿತ್ಯ ಪೋಲಾಗಿದೆ. ಹೀಗೆ ಸೋರಿಕೆ ಆಗುವ ನೀರು ಉಳಿಸುವ ಪ್ರಯತ್ನಕ್ಕೆ ‘ಜಲಸಿರಿ’ ಮೂಲಕ ಬಲ ಸಿಕ್ಕಿದೆ.
‘ನಗರಕ್ಕೆ ಇದುವರೆಗೂ ಪಿವಿಸಿ ಪೈಪ್ ಮೂಲಕವೇ ನೀರು ಪೂರೈಕೆಯಾಗುತ್ತಿತ್ತು. ಇದು ಅಲ್ಲಲ್ಲಿ ಒಡೆದು ನೀರು ಸೋರಿಕೆ ಆಗುವುದು ಸಾಮಾನ್ಯವಾಗಿತ್ತು. ಈ ಸಂದರ್ಭದಲ್ಲಿ ಕುಲುಷಿತವಾಗುವ ಅಪಾಯ ಕೂಡ ಇತ್ತು. ‘ಜಲಸಿರಿ’ ಯೋಜನೆಯಡಿ ಎಚ್‌ಡಿಪಿಇ ಪೈಪ್‌ಗಳನ್ನು ಅಳವಡಿಸಲಾಗಿದೆ. ಇವು ಸುಲಭವಾಗಿ ಒಡೆಯುವುದಿಲ್ಲ. ನೀರು ಸೋರಿಕೆ ಆಗುವುದಿಲ್ಲ. ಗುಣಮಟ್ಟದ ನೀರನ್ನು ಶುದ್ಧೀಕರಣ ಘಟಕದಿಂದ ನೇರವಾಗಿ ಮನೆಗಳಿಗೆ ತಲುಪಿಸಲು ಸಾಧ್ಯವಿದೆ’ ಎನ್ನುತ್ತಾರೆ ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್ ಉದಯಕುಮಾರ್ ಎಂ.ಎಚ್.
ನೀರಿನ ಮೇಲೆ ‘ಸ್ಕಾಡಾ’ ನಿಗಾ
ನೀರು ನಿರ್ವಹಣೆಗೆ ‘ಸ್ಕಾಡಾ’ (ಸೂಪರ್‌ವೈಸರಿ ಕಂಟ್ರೋಲ್ ಅಂಡ್ ಡಾಟಾ ಅನಾಲಿಸಿಸ್) ಎಂಬ ತಾಂತ್ರಿಕ ವ್ಯವಸ್ಥೆ ರೂಪಿಸಿಕೊಳ್ಳಲಾಗಿದೆ. ಸರಬರಾಜು ಆಗುತ್ತಿರುವ ನೀರಿನ ಮೇಲೆ ಇದು ಸಂಪೂರ್ಣ ನಿಗಾ ಇಡುತ್ತದೆ. ಜಿಲ್ಲಾಡಳಿತ ಭವನದ ಸ್ಮಾರ್ಟ್‌ಸಿಟಿ ಕಟ್ಟಡದಲ್ಲಿ ಪ್ರತ್ಯೇಕ ಕಚೇರಿ ತೆರೆಯಲಾಗಿದೆ. ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಈ ಕಚೇರಿಯಲ್ಲಿ ತಾಂತ್ರಿಕ ಸಿಬ್ಬಂದಿ 3 ಪಾಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಜಲಮೂಲದ ನೀರು ಶುದ್ಧೀಕರಣ ಘಟಕಕ್ಕೆ ಹೋಗುತ್ತದೆ. ಅಲ್ಲಿಂದ ರಿಂಗ್ ಮೇನ್ (ಮುಖ್ಯ ಪೈಪ್‌ಲೈನ್) ಮೂಲಕ ಓವರ್‌ಹೆಡ್ ಟ್ಯಾಂಕ್ (ಒಎಚ್‌ಟಿ) ತಲುಪಿ ಅಲ್ಲಿಂದ ಮನೆಗಳಿಗೆ ವಿತರಣೆಯಾಗುತ್ತದೆ. ಹೀಗೆ ಹರಿಯುವ ನೀರಿನ ಉಸ್ತುವಾರಿಯನ್ನು ‘ಸ್ಕಾಡಾ’ ನೋಡಿಕೊಳ್ಳುತ್ತದೆ. ನೀರು ಸೋರಿಕೆ, ವೇಗ, ಟ್ಯಾಂಕ್‌ಗಳಲ್ಲಿನ ನೀರಿನ ಪ್ರಮಾಣ ಸೇರಿ ಎಲ್ಲ ಮಾಹಿತಿಯೂ ‘ಸ್ಕಾಡಾ’ ಕಚೇರಿಗೆ ಸ್ವಯಂ ಚಾಲಿತವಾಗಿ ರವಾನೆಯಾಗುತ್ತದೆ.
‘ಈ ಹಿಂದೆ ಟ್ಯಾಂಕ್ ತುಂಬುವವರೆಗೂ ಕಾದು ಕೊಳವೆ ಮಾರ್ಗವನ್ನು ಸಿಬ್ಬಂದಿಯೇ ಬಂದ್ ಮಾಡಬೇಕಿತ್ತು. ಪೈಪ್‌ಲೈನ್ ಒಡೆದು ಸೋರಿಕೆಯಾಗುವ ನೀರಿನ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದಾಗಷ್ಟೇ ಗೊತ್ತಾಗುತ್ತಿತ್ತು. ಹೊಸ ತಾಂತ್ರಜ್ಞಾನ ಅಳವಡಿಕೆ ಬಳಿಕ ಟ್ಯಾಂಕ್‌ಗಳಿಗೆ ನೀರು ಸ್ವಯಂ ಚಾಲಿತವಾಗಿ ಹರಿದುಬರುತ್ತದೆ. ಟ್ಯಾಂಕ್ ಭರ್ತಿಯಾದ ತಕ್ಷಣ ಪಂಪ್‌ಹೌಸ್‌ಗೆ ಸಂದೇಶ ರವಾನೆಯಾಗಿ ಮೋಟಾರ್ ಸ್ಥಗಿತಗೊಳ್ಳುತ್ತದೆ. ಇದರಿಂದ ನೀರು ಸೋರಿಕೆಗೆ ಕಡಿವಾಣ ಬಿದ್ದಿದೆ’ ಎನ್ನುತ್ತಾರೆ ಉದಯ್‌ಕುಮಾರ್.
ನೀರಿನ ಗುಣಮಟ್ಟ ಪರೀಕ್ಷೆ ನಿರಂತರ
ನೀರಿನ ಗುಣಮಟ್ಟ ಪರೀಕ್ಷೆಗೆ ಕುಂದವಾಡ ಕೆರೆ ಸಮೀಪದ ಶುದ್ಧೀಕರಣ ಘಟಕದಲ್ಲಿ ಸುಸಜ್ಜಿತ ಪ್ರಯೋಗಾಲಯ ನಿರ್ಮಾಣವಾಗಿದೆ. ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಿ ವರದಿ ದಾಖಲಿಸಲಾಗುತ್ತಿದೆ.
ಜಲಮೂಲದಿಂದ ಶುದ್ಧೀಕರಣ ಘಟಕಕ್ಕೆ ಬರುವ ನೀರು, ಶುದ್ಧೀಕರಣ ಆಗಿರುವ ನೀರನ್ನು ನಿತ್ಯ ಮೂರು ಬಾರಿ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ತಿಂಗಳಿಗೊಮ್ಮೆ ಬಯಾಲಾಜಿಕಲ್ ಪ್ರಯೋಗಾಲಯಕ್ಕೆ ಕಳುಹಿಸಿ ಸಂಪೂರ್ಣ ಪರೀಕ್ಷೆ ನಡೆಸಿ ವಿಶ್ಲೇಷಿಸಲಾಗುತ್ತದೆ. ಮನೆಗಳಿಗೆ ಪೂರೈಕೆ ಆಗಿರುವ ನೀರನ್ನೂ ಪ್ರಯೋಗಾಲಯಕ್ಕೆ ತಂದು ಪರೀಕ್ಷಿಸಲಾಗುತ್ತದೆ. ಹಲವು ಹಂತಗಳಲ್ಲಿ ಪರೀಕ್ಷೆಗೆ ಒಳಪಡಿಸುವುದರಿಂದ ನೀರು ಯಾವ ಹಂತದಲ್ಲಿ ಕಲುಷಿತವಾಗಿದೆ ಎಂಬುದನ್ನು ಪತ್ತೆ ಮಾಡುವುದು ಸುಲಭ ಎನ್ನುತ್ತಾರೆ ಪ್ರಯೋಗಾಲಯದ ತಾಂತ್ರಿಕ ಸಿಬ್ಬಂದಿ.
ಇಡೀ ರಾಜ್ಯದಲ್ಲಿ ದೊಡ್ಡ ನಗರವೊಂದು 24X7 ನೀರಿನ ಸೌಲಭ್ಯ ಪಡೆಯುತ್ತಿರುವುದು ಇದೇ ಮೊದಲು. ಮುಂದಿನ 25 ವರ್ಷ ನಗರದಲ್ಲಿ ನೀರಿನ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಉದಯಕುಮಾರ್ ಎಂ.ಎಚ್., ಕಾರ್ಯನಿರ್ವಾಹಕ ಎಂಜಿನಿಯರ್, ಮಹಾನಗರ ಪಾಲಿಕೆ