
ಬಂಗಾರಪೇಟೆ | ಅಕ್ರಮ ಮನೆ, ಡಾಬಾ ತೆರವು: ರಸ್ತೆ ಅಭಿವೃದ್ಧಿಗೆ ಚಾಲನೆ
ಬಂಗಾರಪೇಟೆ: ತಾಲ್ಲೂಕಿನ ದೇಶಿಹಳ್ಳಿ–ಮರವಳ್ಳಿ ಸಂಪರ್ಕ ರಸ್ತೆಯನ್ನು 40 ಅಡಿಗಳಷ್ಟು ವಿಸ್ತರಣೆ ಮಾಡಲು ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಮನೆಗಳು, ನಿವೇಶನ ಮತ್ತು ಡಾಬಾಗಳನ್ನು ತಾಲ್ಲೂಕು ಆಡಳಿತವು ಬುಧವಾರ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಿತು.
ದೇಶಿಹಳ್ಳಿ ಗ್ರಾಮದ ಸರ್ವೆ ನಂಬರ್ 15ರಲ್ಲಿ ಹಾದುಹೋಗುವ ಈ ಮುಖ್ಯ ರಸ್ತೆಯು ಕಿರಿದಾಗಿದ್ದು, ಪ್ರತಿದಿನ ನೂರಾರು ವಾಹನಗಳ ಸಂಚಾರ ಹಾಗೂ ಶಾಲಾ ಮಕ್ಕಳ ಪಾದಚಾರಿ ಮಾರ್ಗಕ್ಕೆ ಭಾರಿ ತೊಂದರೆಯಾಗಿತ್ತು. ಹೀಗಾಗಿ, ರಸ್ತೆ ಅಭಿವೃದ್ಧಿಗೊಳಿಸಬೇಕು ಎಂದು ಸಾರ್ವಜನಿಕರು ಮನವಿ ಸಲ್ಲಿಸಿದ್ದರು. ಈ ಪ್ರಕಾರ 15 ದಿನಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಗಡಿ ಗುರುತಿಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು.
ಇದರ ಬೆನ್ನಲ್ಲೇ ತಹಶೀಲ್ದಾರ್ ಕೆ.ಎನ್. ಸುಜಾತ ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳ ಜಂಟಿ ತಂಡವು ಬುಧವಾರ ಬೆಳಗ್ಗೆಯಿಂದಲೇ ತೆರವು ಕಾರ್ಯಾಚರಣೆಗೆ ಚಾಲನೆ ನೀಡಿತು. ರಸ್ತೆಗೆ ಅಡ್ಡಲಾಗಿದ್ದ ಹಳ್ಳಿ ಡಾಬಾ ಸೇರಿದಂತೆ ಹಲವು ಕಟ್ಟಡಗಳನ್ನು ಯಂತ್ರಗಳ ನೆರವಿನೊಂದಿಗೆ ತೆರವು ಮಾಡಲಾಯಿತು. ಕಾರ್ಯಾಚರಣೆ ವೇಳೆ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.
ಕೆಲವು ಸಂತ್ರಸ್ತರು ತಮ್ಮ ಮನೆ ಮತ್ತು ನಿವೇಶನದ ದಾಖಲೆಗಳನ್ನು ತೋರಿಸಿ ಕಣ್ಣೀರಿಡುತ್ತಾ ಕಾರ್ಯಾಚರಣೆ ತಡೆಯಲು ಯತ್ನಿಸಿದರು. ಆದರೆ, ಇದು ರಸ್ತೆಗಾಗಿ ಕಾಯ್ದಿರಿಸಿದ ಸರ್ಕಾರಿ ಜಮೀನು. ಸರ್ಕಾರಿ ಜಮೀನನ್ನು ಒತ್ತುವರಿ ಮಾಡಲಾಗಿದ್ದು, ದಾಖಲೆಗಳಿಗೆ ಮಾನ್ಯತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದರು.
ಈ ಹಿಂದೆ ಒತ್ತುವರಿ ತೆರವಿಗೆ ವಿರೋಧಿಸಿ, ಸ್ಥಳೀಯರ ನೆರವಿಗೆ ನಿಲ್ಲುವುದಾಗಿ ಹೇಳಿದ್ದ ಬಿಜೆಪಿ ಮುಖಂಡರು, ತೆರವು ಕಾರ್ಯಾಚರಣೆ ವೇಳೆ ಇತ್ತ ಸುಳಿಯದಿರುವುದು ಕಂಡುಬಂದಿತು.
ತಹಶೀಲ್ದಾರ್ ಕೆ.ಎನ್. ಸುಜಾತ ಮಾತನಾಡಿ, ‘ಸರ್ಕಾರಿ ಜಾಗ ಹಾಗೂ ಸಾರ್ವಜನಿಕ ರಸ್ತೆಗಳನ್ನು ಆಕ್ರಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸುವ ಯಾವುದೇ ಒತ್ತುವರಿಯನ್ನು ಸಹಿಸುವುದಿಲ್ಲ. ಮುಂದೆಯೂ ತಾಲ್ಲೂಕಿನಾದ್ಯಂತ ಸರ್ಕಾರಿ ಜಾಗ ಅಥವಾ ರಸ್ತೆ ಒತ್ತುವರಿ ಕಂಡುಬಂದಲ್ಲಿ ಯಾವುದೇ ಮುಲಾಜಿಲ್ಲದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.
ಕಾರ್ಯಾಚರಣೆಯಲ್ಲಿ ಇಒ ಎಚ್. ರವಿಕುಮಾರ್, ಎಇಇ ಆನಂದ್ ಕುಮಾರ್,ಇನ್‌ಸ್ಪೆಕ್ಟರ್ ರವಿಕುಮಾರ್, ಪಿಎಸ್ಐ ಕಿರಣ್ ಕುಮಾರ್, ಗುರುರಾಜ್ ಚಿಂತಕಲ್, ಕಂದಾಯ ಇಲಾಖೆ ಉಪ ತಹಶೀಲ್ದಾರ್, ರಾಜಸ್ವ ನಿರೀಕ್ಷಕ ಅಮರೇಶ, ಗ್ರಾಮ ಆಡಳಿತಾಧಿಕಾರಿ ಅಮರೇಶ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಭಾಗವಹಿಸಿದ್ದರು.
‘ಎಲ್ಲಾ ಒತ್ತುವರಿ ತೆರವಾಗಲಿ’
‘ಪುನೀತ್ ಬಡಾವಣೆ’ಯೂ ಸರ್ಕಾರ ಜಮೀನಿನಲ್ಲೇ ಅಕ್ರಮವಾಗಿ ನಿರ್ಮಿಸಲಾಗಿದ್ದು, ಆ ಬಡಾವಣೆಯಲ್ಲಿ ಯಾವುದೇ ತೆರವು ಕಾರ್ಯಾಚರಣೆ ಕೈಗೊಂಡಿಲ್ಲ. ಸರ್ವೆ ನಂಬರ್ 15ರಲ್ಲಿ ಕೈಗೊಂಡಿರುವ ಒತ್ತುವರಿ ತೆರವು ಕಾರ್ಯಾಚರಣೆ ಹಿಂದೆ ರಾಜಕೀಯ ಹುನ್ನಾರವಿದೆ ಎಂದು ಕೆಲವರು ದೂರಿದರು.
ಒತ್ತುವರಿ ತೆರವು ಕಾರ್ಯಾಚರಣೆಯು ಸರ್ವೆ ನಂಬರ್ 15ಕ್ಕೆ ಸೀಮಿತವಾಗಬಾರದು. ಬದಲಿಗೆ, ತಾಲ್ಲೂಕಿನಾದ್ಯಂತ ಇರುವ ಸರ್ಕಾರ ಜಮೀನು ಮತ್ತು ರಾಜಕಾಲುವೆ ಒತ್ತುವರಿಗಳನ್ನು ಯಾವುದೇ ಪಕ್ಷಪಾತವಿಲ್ಲದೆ, ತೆರವುಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.