
Web Exclusive: ದೇವದುರ್ಗದಲ್ಲಿ ನಿಲ್ಲದ ಅಕ್ರಮ ಮರಳು ವ್ಯವಹಾರ
ದೇವದುರ್ಗ: ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನಾದ್ಯಂತ ಹಗಲು ರಾತ್ರಿ ಎನ್ನದೆ ನಡೆಯುತ್ತಿರುವ ಅಕ್ರಮ ಮರಳು ಗಣಿಗಾರಿಕೆ ತಡೆಯುವಲ್ಲಿ ಜಿಲ್ಲಾಡಳಿತ ಸಂಪೂರ್ಣವಾಗಿ ಸೋತಿದೆ. ಜಿಲ್ಲಾ ಮತ್ತು ತಾಲ್ಲೂಕು ಮರಳು ಸಮಿತಿಯ ಸದಸ್ಯ ಇಲಾಖೆಗಳ ಸಮನ್ವಯ ಕೊರತೆಯಿಂದ ಅಕ್ರಮ ತಡಿಯುವಲ್ಲಿ ಹಿನ್ನಡೆ ಅನುಭವಿಸಿದ್ದಾರೆ ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡ ದಂದೆ ಕೋರರು ಹಗಲು-ರಾತ್ರಿ ಎನ್ನದೆ ಅಕ್ರಮ ಮರಳು ಸಾಗಣೆಯಲ್ಲಿ ನಿರತರಾಗಿದ್ದಾರೆ.
ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಮರುಳು ಸಾಗಣೆ ಮಾಡುವ ಭಾರತಬೆಂಜ್ ಟಿಪ್ಪರ್ ಗಳಿಂದಾಗಿ ಗ್ರಾಮೀಣ ರಸ್ತೆ ಸೇರಿದಂತೆ ಪಟ್ಟಣದ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿವೆ.ತಾಲ್ಲೂಕಿನ ಗ್ರಾಮಗಳಾದಕೋಣಚಪ್ಪಳಿಮೇದರಗೋಳ,ಕುರ್ಕಿಹಳ್ಳಿ, ಕೊಪ್ಪರ, ಗೂಗಲ್, ಲಿಂಗದಳ್ಳಿ, ನವಿಲುಗುಡ್ಡ, ಹೇರುಂಡಿ, ಭಾಗೂರು, ಜೋಳದಹೆಡಗಿ, ಹೂವಿನಹೆಡಗಿ, ಗೋಪಾಳಾಪುರ, ನಗರಗುಂಡ ಮತ್ತು ದೇವದುರ್ಗ ದಿಂದ ಶಹಾಪುರಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಸೇರಿದಂತೆ ತಾಲ್ಲೂಕಿನ ಕೃಷ್ಣ ನದಿ ತೀರದ ಬಹುತೇಕ ಹಳ್ಳಿಯ ರಸ್ತೆಯ ಪರಿಸ್ಥಿತಿ ಇದೆ ಸ್ಥಿತಿಯಲ್ಲಿವೆ.
20 ರಿಂದ 25 ಟನ್ ತೂಕವಿರುವ ಈ ಗಾಡಿಗಳು 35 ರಿಂದ 40 ಟೆನ್ ಮರಳು ಸಾಗಣೆ ಮಾಡುತ್ತಿವೆ. ಅಂದರೆ 50 ರಿಂದ 60 ಟನ್ ತೂಕದ ಈ ಗಾಡಿಗಳು ಓಡಾಟದಿಂದಾಗಿ ರಸ್ತೆಗಳು ಸಂಪೂರ್ಣವಾಗಿ ಹದಗೆಡುತಿವೆ. ಇದರಿಂದ ರಸ್ತೆ ಮಧ್ಯದಲ್ಲಿ ಎಲ್ಲೆಂದರಲ್ಲಿ ತೆಗ್ಗು ಬಿದ್ದಿವೆ. ಲಾರಿಗಳ ಸಾಮರ್ಥ್ಯಕ್ಕೂ ಮಿರಿ ಓವರ್ ಲೋಡ್ ಮಾಡಿಕೊಂಡು ಬರುವ ಗಾಡಿಗಳು ದೇವದುರ್ಗ ಪಟ್ಟಣದ ಮೂಲಕ ಹಾದು ಯಾದಗಿರಿ, ಕಲಬುರ್ಗಿ, ಬೀದರ್ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಮರಳು ಸಾಗಣೆ ಮಾಡುತ್ತಿವೆ. ಅತಿಯಾದ ಮರಳು ಸಾಗಾಣಿಕೆ ವಾಹನಗಳಿಂದ ದೇವದುರ್ಗ ಪಟ್ಟಣ ದೂಳಿನ ಪಟ್ಟಣವಾಗುತ್ತಿದೆ. ರಸ್ತೆಯ ಮೇಲೆ ಎಲ್ಲೆಂದರಲ್ಲಿ ಮರಳು ಬಿದ್ದಿದ್ದು ಸಾರ್ವಜನಿಕರಿಗೆ ದೂಳಿನ ಸಮಸ್ಯೆ ಎದುರಾಗುತ್ತಿದೆ . ಪಟ್ಟಣದ ಪುರಸಭೆಯ ಸಿಬ್ಬಂದಿಗೆ ಮರಳು ತೆರವುಗೊಳಿಸುವುದೆ ದೊಡ್ಡ ಕೆಲಸವಾಗಿದೆ.
ಅಕ್ರಮ ಮರಳು ದಂದೆಗೆ ಪೊಲೀಸರೇ ರಕ್ಷಕರು!
ಜಿಲ್ಲೆಯಲ್ಲಿಯೇ ಅತಿಹೆಚ್ಚು ಅಕ್ರಮ ಮರಳು ದಂದೆ ದೇವದುರ್ಗ ತಾಲ್ಲೂಕಿನಲ್ಲಿ ನಡೆಯುತ್ತದೆ. ಅಕ್ರಮ ಮರಳು ದಂದೆಗೆ ಪೊಲೀಸರೇ ರಕ್ಷಕರಾಗಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ತಾಲ್ಲೂಕಿನಲ್ಲಿ ನದಿ ತೀರದ ಸುಮಾರು 40 ಬ್ಲಾಕ್ ಗಳಲ್ಲಿ ಸುಮಾರು 28863 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಿದ್ದಾರೆ. ಜಪ್ತಿ ಮಾಡಿದ ಮರಳು ನಿಯಮನುಸಾರ ಟೆಂಡರ್ ಮೂಲಕ ವಿಲೇವಾರಿ ಮಾಡಿ ಸ್ಥಳೀಯ ಸರ್ಕಾರಿ ಕಾಮಗಾರಿಗಳಿಗೆ ಒದಗಿಸಬೇಕೆಂಬ ನಿಯಮವಿದೆ. ಆದರೆ, ಅನೇಕ ಸಂದರ್ಭಗಳಲ್ಲಿ ಜಪ್ತಿ ಮಾಡಿದ ಬಹುತೇಕ ಮರಳು ರಾತೋ ರಾತ್ರಿ ಪೊಲೀಸರ ರಕ್ಷಣೆಯಲ್ಲಿ ದಂದೆ ಕೋರರು ವಿಲೇಮಾರಿ ಮಾಡಿರುವುದು ಗಟ್ಟಾಗಿ ಉಳಿದಿಲ್ಲ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಯಾವುದೇ ರಾಯಲ್ಟಿ ಪಾವತಿಸಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನಿ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. 5-6 ಪೊಲೀಸ್ ಕಾನ್‌ಸ್ಟೆಬಲ್‌ಗಳು ರಾತ್ರೋರಾತ್ರಿ ನದಿ ತೀರದ ಗ್ರಾಮಗಳಲ್ಲಿ ಅಕ್ರಮ ಮರಳು ದಂದೆ ಕೋರರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಕರ್ಕಿಹಳ್ಳಿ ಮತ್ತು ನಗರಗುಂಡ ಗ್ರಾಮಸ್ಥರ ಆರೋಪವಾಗಿದೆ. ಅಲ್ಲದೆ ಪೊಲೀಸ್ ಇಲಾಖೆಯ ಅಧಿಕಾರಿಗಳೂ ಅಕ್ರಮ ಮರಳು ದಂದೆ ಕೋರರಿಂದ ಹಣ ಸಂಗ್ರಹಕ್ಕೆ ಜಿಲ್ಲೆಯ ಸಿಂಧನೂರು ಮತ್ತು ಮಸ್ಕಿ ಪೊಲೀಸ್ ಠಾಣೆಯ ಸಿಬ್ಬಂದಿ ನೇಮಕ ಮಾಡಿಕೊಂಡಿದ್ದಾರೆ ಎಂದು ನದಿ ದಂಡೆ ಗ್ರಾಮಗಳ ಜನ ಆಡಿಕೊಳ್ಳುತ್ತಿದ್ದಾರೆ.
ಅಕ್ರಮ ಮರಳು ಸಾಗಾಣಿಕೆಯಲ್ಲಿ ಬರುವ ಲಾಭದಲ್ಲಿ ಶೇಕಡ 50ರಷ್ಟು ಪೊಲೀಸ್
ಇಲಾಖೆಗೆ ಮಾಮೂಲು ಹೋಗುತ್ತದೆ ಎಂದು ಟಿಪ್ಪರ್ ಮಾಲೀಕರು ಮತ್ತು ಟ್ಯಾಕ್ಟರ್ ಮಾಲೀಕರು ಹೋಟೆಲ್‌ಗಳಲ್ಲಿ ಚರ್ಚೆ ಮಾಡುತ್ತಿದ್ದಾರೆ. ಒಬ್ಬೊಬ್ಬ ಅಧಿಕಾರಿಯು ಒಬ್ಬೊಬ್ಬ ಕಾನ್‌ಸ್ಟೆಬಲ್ ಗಳನ್ನು ನೇಮಕ ಮಾಡಿಕೊಂಡಿದ್ದಾರೆ ಹಗಲು ರಾತ್ರಿ ಎನ್ನದೆ ಅಕ್ರಮ ಮರಳು ದಂದೆ ಕೋರರನ್ನು ಹಿಡಿಯುತ್ತಾರೆ ಹಣ ಕೊಟ್ಟವರನ್ನು ಅಲ್ಲೇ ಬಿಡುತ್ತಾರೆ. ಹಣ ಕೊಡದವರನ್ನು ಠಾಣೆಗೆ ಕರೆತಂದು ಕೇಸು ದಾಖಲಿಸುತ್ತಾರೆ. ಇವರು ಯಾವುದೇ ಅಕ್ರಮ ತಡೆಯುತ್ತಿಲ್ಲ ಬದಲಿಗೆ ಅಕ್ರಮ ಮಾಡಿ ನಮಗೆ ತಿಂಗಳಿಗೆ ಹಣ ನೀಡಿ ಎಂದು ಒತ್ತಾಯಿಸುತ್ತಾರೆ ಎಂದು ಹೆಸರು ಹೇಳಲಿಚ್ಚಿಸದ ಟಿಪ್ಪರ್ ಚಾಲಕರು ಹೇಳುತ್ತಾರೆ.
ಮರಳು ದಂದೆ ನಡೆಸುವವರ ಹಾಗೂ ಪೊಲೀಸರ ನಡುವಿನ ವ್ಯವಹಾರದ ಆಡಿಯೊ, ವಿಡಿಯೊ ಮತ್ತು ಕರೆ ಮಾಡಿದ ಕಾಲ್ ಲಿಸ್ಟ್ ಮಾಹಿತಿ ಪಡೆದು ಹಿರಿಯ ಅಧಿಕಾರಿಗಳು ಇಲಾಖೆಯ ಅಕ್ರಮಗಳಿಗೆ ಬೆಂಬಲಿಸುವ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಚಿಸಬೇಕು ಕಾನೂನು ಸುವ್ಯವಸ್ಥೆ ಕಾಪಾಡುವ ಪೊಲೀಸರೆ ಅಕ್ರಮದಲ್ಲಿ ಭಾಗಿಯಾದರೆ ಜನಸಾಮಾನ್ಯರ ಗತಿ ಏನು? ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಂದೆ ಕೊರರಿಗೆ ಸಹಕರಿಸುವ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ವಕೀಲ ಮರೀಲಿಂಗಪ್ಪ ಕೋಳೂರು ಒತ್ತಾಯಿಸುತ್ತಾರೆ.
ನಂಬರ್ ಪ್ಲೇಟ್ ಇಲ್ಲದ ವಾಹನ
ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ನಿಂತಿಲ್ಲ. ಪೊಲೀಸರು, ಗಣಿ ಮತ್ತು ಭೂವಿಜ್ಞಾನ, ಕಂದಾಯ ಇಲಾಖೆ ಅಧಿಕಾರಿಗಳಿಗೆ ದಂದೆಕೋರರು ಮಾಮೂಲು ಕೊಟ್ಟು ಅಕ್ರಮ ದಂದೆ ಮುಂದುವರಿಸಿದ್ದಾರೆ. ದಂದೆಕೋರರು ವಾಹನದ ದಾಖಲೆಗಳು ಸಿಗದಂತಾಗಲು ಟಿಪ್ಪರ್ ಹಾಗೂ ಲಾರಿಗಳ ನಂಬರ್ ಪ್ಲೇಟ್‌ಗಳನ್ನೇ ತೆಗೆದು ಹಾಕಿದ್ದಾರೆ. ಆರ್ ಟಿ ಓ ತಾಲ್ಲೂಕಿಗೆ ಭೇಟಿ ನೀಡಿದರು ನಂಬರ್ ಪ್ಲೇಟ್ ಇಲ್ಲದ ಗಾಡಿಗಳಿಗೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ.ಅಪರೂಪಕ್ಕೆ ಒಂದೆರಡು ಲಾರಿಗಳನ್ನು ಹಿಡಿದು ಕಾಟಚಾರಕ್ಕೆ ದಂಡ ವಿಧಿಸುತ್ತಾರೆ. ನಂಬರ್ ಪ್ಲೇಟ್ ಇಲ್ಲದ ಗಾಡಿಗಳನ್ನು ಸಿಜ್ ಮಾಡಿ ನೋಂದಣಿ ರದ್ದು ಮಾಡಿದಾಗ ಮಾತ್ರ ಅಕ್ರಮಗಳಿಗೆ ಕಡಿವಾಣ ಬೀಳಲಿದೆ.
'ವಾಹನಗಳಿಗೆ ನಂಬರ್ ಪ್ಲೇಟ್ ಇಲ್ಲದೆ ಓವರ್ ಲೋಡ್ ಮರಳು ಸಾಗಿಸುವ ವಾಹನಗಳಿಗೆ ಪೋಲಿಸ್ ಇಲಾಖೆ ಮತ್ತು ಆರ್ ಟಿಒ ಅಧಿಕಾರಿಗಳು ಕ್ರಮ ಕೈಗೊಳ್ಳದೆ ಇರುವುದು ದುರಂತ' ಎನ್ನುತ್ತಾರೆ ಕೃಷಿ ಕೂಲಿ ಕಾರ್ಮಿಕರ ಸಂಘಟನೆ ದೇವದುರ್ಗ ತಾಲ್ಲೂಕು ಘಟಕ ಅಧ್ಯಕ್ಷ ಲಿಂಗಣ್ಣ ಮಕಾಶಿ.
ನಂಬರ್ ಪ್ಲೇಟ್ ಇಲ್ಲದ ಟಿಪ್ಪರ್ ಹಾಗೂ ಲಾರಿಗಳಿಗೆ ₹ 300 ದಂಡ ವಿಧಿಸಲಾಗುತ್ತಿದೆ. ಸಿಬ್ಬಂದಿಯ ಕೊರತೆ ಇದೆ. ಯಾದಗಿರಿ ಹಾಗೂ ರಾಯಚೂರು ಜಿಲ್ಲೆಗೆ ನಾನು ಒಬ್ಬನೇ ಅಧಿಕಾರಿ ಇದ್ದೇನೆ. ಈಚೆಗಷ್ಟೇ ರಾಯಚೂರು ಜಿಲ್ಲೆಯ ಹೆಚ್ಚುವರಿ ಕಾರ್ಯಭಾರ ವಹಿಸಿಕೊಂಡಿರುವೆ. ಸಿಬ್ಬಂದಿ ಕೊರತೆ ಇದ್ದರೂ ನಂಬರ್ ಪ್ಲೇಟ್ ಇಲ್ಲದ ವಾಹನಗಳಿಗೆ ದಂಡ ವಿಧಿಸುವ ಪ್ರಕ್ರಿಯೆ ಮುಂದುವರಿದಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿ ಹೇಳುತ್ತಾರೆ.
'ಹಟ್ಟಿ ಚಿನ್ನದ ಗಣಿ ಕಂಪನಿ ಅಧಿಕಾರಿಗಳ ನಿರ್ಲಕ್ಷ್ಯ’
ಸರ್ಕಾರಿ ಸೌಮ್ಯದ ಹಟ್ಟಿ ಚಿನ್ನದ ಗಣಿ ಕಂಪನಿಗೆ ರಾಜ್ಯದ ಮರಳು ಗಣಿಗಾರಿಕೆ ಜವಾಬ್ದಾರಿಯನ್ನು ಸರ್ಕಾರ ವಹಿಸಿದೆ. ಆದರೆ ಹಟ್ಟಿ ಚಿನ್ನದ ಗಣಿ ಕಂಪನಿಯ ಕೆಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮರಳು ದಂದೆಕೋರರಿಗೆ ಪರೋಕ್ಷ ಸಹಕಾರ ನೀಡುವ ದೂರುಗಳು ಇವೆ.