
ಮಧುಗಿರಿ: ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ತಾಲ್ಲೂಕಿನ ಗ್ರಾ.ಪಂ.ಗಳು
ಕೊಡಿಗೇನಹಳ್ಳಿ: ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗದ ಕಾರಣ ಮಧುಗಿರಿ ತಾಲ್ಲೂಕಿನ ಬಹುತೇಕ ಗ್ರಾಮ ಪಂಚಾಯಿತಿಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ. ಬೀದಿ ದೀಪ ನಿರ್ವಹಣೆ, ಸ್ವಚ್ಛತೆ,ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳ ನಿರ್ವಹಣೆಗೂ ಹಣವಿಲ್ಲದೆ ಪರದಾಡುವಂತಾಗಿದೆ.
ಕೊಡಿಗೇನಹಳ್ಳಿ ಗ್ರಾಮ ಪಂಚಾಯಿತಿಗೆ 15ನೇ ಹಣಕಾಸು ಆಯೋಗದಡಿ ₹40ರಿಂದ ₹42 ಲಕ್ಷ ಅನುದಾನ ನಿರೀಕ್ಷಿಸಲಾಗಿತ್ತು. ಆದರೆ 2025ರಿಂದ ಯಾವುದೇ ಹಣ ಬಿಡುಗಡೆಯಾಗದಿರುವುದು ಆರ್ಥಿಕ ಹಿನ್ನಡೆಗೆ ಕಾರಣವಾಗಿದೆ. ಇದರಿಂದ ಹಲವು ವಸ್ತುಗಳ ಬಿಲ್ ಬಾಕಿ ₹20 ಲಕ್ಷಕ್ಕೆ ತಲುಪಿದೆ.
ಪಂಚಾಯಿತಿಯ 1,300ಕ್ಕಿಂತ ಹೆಚ್ಚು ಬೀದಿ ದೀಪ ಹಾಗೂ ಎಂಟು ಓವರ್ ಹೆಡ್ ಟ್ಯಾಂಕ್ ನಿರ್ವಹಣೆಯ ಶುಲ್ಕ ಪಾವತಿ ಬಾಕಿ ಇರುವುದರಿಂದ ಎಲೆಕ್ಟ್ರಿಕಲ್ ಅಂಗಡಿ ಮಾಲೀಕರು ವಿದ್ಯುತ್ ದೀಪ ಮತ್ತು ಅಗತ್ಯ ವಸ್ತುಗಳನ್ನು ಕೊಡುತ್ತಿಲ್ಲ. ನೀರಿನ ಪೈಪ್‌ಲೈನ್ ದುರಸ್ತಿಗೆ ಹಣವಿಲ್ಲದೆ ಕೆಲವೊಮ್ಮೆ ಸ್ವಂತ ಹಣದಿಂದ ತಾತ್ಕಾಲಿಕ ಕೆಲಸ ಮಾಡಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ಪಿಡಿಒಗಳು.
ರಾಜ್ಯದಲ್ಲಿ 2021ರಿಂದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಯದ ಕಾರಣ ಕೇಂದ್ರ ಸರ್ಕಾರ ₹2,133 ಕೋಟಿ ಅನುದಾನ ತಡೆಹಿಡಿದಿದೆ. ಜೊತೆಗೆ ರಾಜ್ಯ ಸರ್ಕಾರ ಹಿಂದಿನ ಕಂತಿನ ಹಣವನ್ನು ನಿಗದಿತ ಸಮಯದೊಳಗೆ ಪಂಚಾಯಿತಿಗಳಿಗೆ ವರ್ಗಾವಣೆ ಮಾಡದಿರುವುದು ಕೂಡ ಇದಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರ ಅವಧಿ ಮುಗಿದು ಆರು ತಿಂಗಳು ಕಳೆದರೂ ಚುನಾವಣೆ ನಡೆಸದೆ ಕೇವಲ ಆಡಳಿತಾಧಿಕಾರಿಗಳನ್ನು ನೇಮಿಸಿ ಮುನ್ನಡೆಸುತ್ತಿರುವುದು ಕೂಡ ಪಂಚಾಯಿತಿಗಳ ಆರ್ಥಿಕ ಹಿನ್ನೆಡೆಗೆ ಕಾರಣವಾಗಿದೆ.
ವಸೂಲಿಯಾಗದ ಕಂದಾಯ: ಕೊಡಿ ಗೇನಹಳ್ಳಿ, ಬಡವನಹಳ್ಳಿ, ಮಿಡಿಗೇಶಿ, ಹೊಸಕೆರೆ ಗ್ರಾಮ ಪಂಚಾಯಿತಿಗಳಲ್ಲಿ ವರ್ಷಕ್ಕೆ ಸುಮಾರು ₹15ರಿಂದ ₹16 ಲಕ್ಷ ಕಂದಾಯ ವಸೂಲಾಗುತ್ತಿತ್ತು. ಉಳಿದಂತೆ ಬಹುತೇಕ ಎಲ್ಲ ಪಂಚಾಯಿತಿಗಳಲ್ಲೂ ₹12ರಿಂದ ₹13 ಲಕ್ಷ ಕಂದಾಯ ಬರುತ್ತಿತ್ತು. ಆದರೆ ಈ ಬಾರಿ ತಾಲ್ಲೂಕಿನಲ್ಲಿ ಮಳೆ ಬಾರದೆ ಬರ ಎದುರಾಗಿರುವ ಕಾರಣ ಜನರು ಕಂದಾಯ ಕಟ್ಟುಲು ಮುಂದೆ ಬರುತ್ತಿಲ್ಲ. ಕುಡಿಯುವ ನೀರು, ಬೀದಿ ದೀಪ ನಿರ್ವಹಣೆ, ಪೈಪ್ ಲೈನ್ ದುರಸ್ತಿ, ಶೀಘ್ರ ಮೋಟಾರ್ ದುರಸ್ತಿ ಮಾಡಿಸಲಾಗದೆ ಪರದಾಡುವಂತಾಗಿದೆ.
ಉಸಿರು ಕಟ್ಟಿಸುವ ಸ್ಥಿತಿ
ಎರಡು ವರ್ಷಗಳಿಂದ 15ನೇ ಹಣಕಾಸಿನ ಯಾವುದೇ ಹಣ ಬಿಡುಗಡೆಯಾಗಿಲ್ಲ. 2025- 26ರಲ್ಲಿ ಹಣ ನಿಗದಿಯಾಗಿದ್ದರೂ ಬಿಡುಗಡೆಯಾಗಿಲ್ಲ. ಗ್ರಾಮ ಪಂಚಾಯಿತಿಗಳು ಆರ್ಥಿಕ ಸ್ಥಿತಿ ಉಸಿರು ಕಟ್ಟಿದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರ ಹಣ ಬಿಡುಗಡೆ ಮಾಡದಿದ್ದರೆ ಗ್ರಾಮ ಪಂಚಾಯಿತಿಗಳ ಕಾರ್ಯ ಚಟುವಟಿಕೆ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.
–ಉತ್ತಮ್, ಕಾರ್ಯ ನಿರ್ವಹಣಾಧಿಕಾರಿ, ಮಧುಗಿರಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260822-17-1317344148