
Success Story: ಓದಿದ್ದು 9ನೇ ತರಗತಿ, ಕೆಲಸ ಟ್ಯಾಕ್ಸಿ ಚಾಲಕ, ಈಗ ತಂಡದ ಮುಖ್ಯಸ್ಥ
ಡಿಗ್ರಿ, ಸರ್ಟಿಫಿಕೇಟ್‌ಗಳು ಅಥವಾ ಅತ್ಯುತ್ತಮ ರೆಸ್ಯೂಮ್‌ಗಳಷ್ಟೇ ವೃತ್ತಿಜೀವನದ ಸಾಧನೆಗೆ ಮಾನದಂಡವಲ್ಲ ಎಂಬುದಕ್ಕೆ ಹೈದರಾಬಾದ್‌ನ ‘ಅಡಾನ್‌ಮೊ’ (AdOnMo) ಕಂಪನಿಯ ಸಂಸ್ಥಾಪಕ ಸ್ರವಂತ್ ಗಜುಲ ಹಂಚಿಕೊಂಡಿರುವ ಕಥೆಯೊಂದು ಉತ್ತಮ ನಿದರ್ಶನವಾಗಿದೆ.
ಸಂಸ್ಥೆಯ ಸಂಸ್ಥಾಪಕ ಸ್ರವಂತ್ ಗಜುಲ ಅವರು ತಮ್ಮ ಕಂಪನಿಗೆ ಮೊದಲ ಉದ್ಯೋಗಿಯನ್ನು ನೇಮಿಸಿಕೊಳ್ಳಲು ನಿರ್ಧರಿಸುತ್ತಾರೆ. ಅವರು ಆಯ್ಕೆ ಮಾಡಿದ್ದು ಯಾವುದೋ ಪ್ರಸಿದ್ಧ ಕಾಲೇಜಿನಲ್ಲಿ ಪದವಿ ಪಡೆದವರನ್ನಲ್ಲ. ಬದಲಿಗೆ, ಒಬ್ಬ ಟ್ಯಾಕ್ಸಿ ಡ್ರೈವರ್ ಅನ್ನು ಎಂಬುದು ವಿಶೇಷ.
ಗುಜಲ ಅವರು ಆಯ್ಕೆ ಮಾಡಿದ ಅಭ್ಯರ್ಥಿಯು ಯಾವುದೇ ಅತ್ಯುತ್ತಮ ಶೈಕ್ಷಣಿಕ ಹಿನ್ನೆಲೆಯನ್ನಾಗಲಿ ಅಥವಾ ಬೇರೆ ಬೇರೆ ಕಂಪನಿಗಳಲ್ಲಿ ಉದ್ಯೋಗ ಮಾಡಿದ ಅನುಭವವನ್ನಾಗಲಿ ಹೊಂದಿರಲಿಲ್ಲ. ಅವರು ಓದಿದ್ದು ಕೇವಲ 9ನೇ ತರಗತಿಯನ್ನು. ಅವರಿಗೆ ಇಂಗ್ಲಿಷ್ ಭಾಷೆಯ ಜ್ಞಾನವಿರಲಿಲ್ಲ, ಕಾರ್ಪೊರೇಟ್ ಪ್ರಪಂಚದ ಯಾವುದೇ ಅನುಭವ ಕೂಡ ಇರಲಿಲ್ಲ. ಆಯ್ಕೆಯಾಗುವ ಸಂದರ್ಭದಲ್ಲಿ ಅವರ ರೆಸ್ಯೂಮ್ ಕೂಡ ಉತ್ತಮವಾಗಿರಲಿಲ್ಲ.
ಆದರೂ ಸ್ರವಂತ್ ಗಜುಲ ಅವರು ಟ್ಯಾಕ್ಸಿ ಚಾಲಕನಲ್ಲಿದ್ದ ಕಲಿಕೆಯ ಹಸಿವು, ಪ್ರಾಮಾಣಿಕತೆ ಮತ್ತು ಜವಾಬ್ದಾರಿ ತಗೆದುಕೊಳ್ಳುವ ಗುಣವನ್ನು ಕಂಡು ಹಲವರ ಆಕ್ಷೇಪದ ನಡುವೆಯೂ ಅವರಿಗೆ ಕೆಲಸ ನೀಡಿದರು.
ಕಂಪನಿಯು ಅವರಿಗೆ ಕೇವಲ ಕೆಲಸವನ್ನಷ್ಟೇ ನೀಡಿ ಸುಮ್ಮನಿರದೆ, ಅವರ ಬೆಳವಣಿಗೆಗೆ ಬೇಕಾದ ಸೌಕರ್ಯ ಒದಗಿಸಿತು. ಸ್ಪೋಕನ್ ಇಂಗ್ಲಿಷ್ ತರಬೇತಿ ಮತ್ತು ಸರಿಯಾದ ಮಾರ್ಗದರ್ಶನ ನೀಡಿತು. ಹತ್ತು ವರ್ಷಗಳ ಬಳಿಕ, ಅದೇ ವ್ಯಕ್ತಿ ಸತತ ಶ್ರಮ ಮತ್ತು ಕಲಿಕೆಯಿಂದಾಗಿ ಕಂಪನಿಯಲ್ಲಿ ತಂಡ ಒಂದಕ್ಕೆ ಮುಖ್ಯಸ್ಥರಾಗಿದ್ದಾರೆ ಎಂದು ಗುಜಲ ತಿಳಿಸಿದ್ದಾರೆ.
10 ವರ್ಷಗಳ ಹಿಂದೆ ಟ್ಯಾಕ್ಸಿ ಚಾಲಕನಾಗಿದ್ದ ವ್ಯಕ್ತಿ, ಈಗ 'ಅಡಾನ್‌ಮೊ' ಕಂಪನಿಯ ಸಂಗ್ರಹಣಾ ವಿಭಾಗದ ಮುಖ್ಯಸ್ಥರಾಗಿ (Procurement Head) ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತದಾದ್ಯಂತ ಕಾರ್ಯಾಚರಣೆಯ ಹೊಣೆ ಹೊತ್ತಿದ್ದಾರೆ. ಅಲ್ಲದೆ ಕಂಪನಿಯ ಅತ್ಯಂತ ನಂಬಿಕಸ್ಥರಲ್ಲಿ ಇವರು ಒಬ್ಬರಾಗಿದ್ದಾರೆ.
‘ನಾವು ಸಾಮಾನ್ಯವಾಗಿ ಉದ್ಯೋಗಿಗಳ ಸಾಮರ್ಥ್ಯ, ಮೌಲ್ಯಗಳು ಹಾಗೂ ಸಂಸ್ಕೃತಿಯ ಬಗ್ಗೆ ದೊಡ್ಡ ಮಾತುಗಳನ್ನಾಡುತ್ತೇವೆ. ಆದರೆ ನಿಜವಾದ ನಾಯಕತ್ವ ಎಂದರೆ ಪ್ರಪಂಚವೇ ನಿರ್ಲಕ್ಷಿಸಿದ ವ್ಯಕ್ತಿಯಲ್ಲಿರುವ ಸಾಮರ್ಥ್ಯವನ್ನು ಗುರುತಿಸಿ, ಅವರು ಸಿದ್ಧರಾಗುವ ಮುನ್ನವೇ ಅವರ ಮೇಲೆ ಹೂಡಿಕೆ ಮಾಡುವುದು ಮತ್ತು ಅವರಿಗೆ ಅವಕಾಶ ನೀಡಿ ಅವರು ಬೆಳೆಯುವುದನ್ನು ನೋಡುವುದಾಗಿದೆ’ ಎಂದು ಸಂಸ್ಥೆಯ ಸಂಸ್ಥಾಪಕ ಸ್ರವಂತ್ ಗಜುಲ ಹೇಳಿದ್ದಾರೆ.
ಮಾರ್ಕ್ಸ್ ಕಾರ್ಡ್ ಮತ್ತು ರೆಸ್ಯೂಮ್‌ಗಳಿಗಿಂತ ಕಲಿಯುವ ಮನಸ್ಸು, ಪ್ರಾಮಾಣಿಕತೆ ಮತ್ತು ಸೂಕ್ತ ಮಾರ್ಗದರ್ಶನ ಇದ್ದರೆ, ಯಾವುದೇ ವ್ಯಕ್ತಿ ಉನ್ನತ ಸ್ಥಾನ ಅಲಂಕರಿಸಬಲ್ಲರು ಎಂಬುದಕ್ಕೆ 10 ವರ್ಷದ ಹಿಂದಿನ ಟ್ಯಾಕ್ಸಿ ಡ್ರೈವರ್ ಉತ್ತಮ ಉದಾಹರಣೆಯಾಗಿದೆ.