PV Web Exclusive: ಬಟ್ಟೆ ವ್ಯಾಪಾರಿಯ ‘ಸಂಸ್ಕೃತ’ ಪ್ರೀತಿ
ವಿಜಯಪುರ ನಗರದ ಅತ್ಯಂತ ಜನದಟ್ಟಣೆ ಹಾಗೂ ವ್ಯಾಪಾರಿ ಕೇಂದ್ರವಾದ ‘ಮೀನಾಕ್ಷಿ ಚೌಕ’ದಲ್ಲಿ ‘ತ್ರೀ ಆರ್’ (3 R) ಗಾರ್ಮೆಂಟ್ಸ್ ಎಂಬ ಪ್ರಸಿದ್ಧ ಜವಳಿ ವ್ಯಾಪಾರದ ಬೃಹತ್ ಮಳಿಗೆಯೊಂದು ಎಲ್ಲರ ಗಮನ ಸೆಳೆಯುತ್ತದೆ. ಇದು ಕೇವಲ ಬಟ್ಟೆ ವ್ಯಾಪಾರಕ್ಕೆ ಮಾತ್ರ ಪ್ರಸಿದ್ಧವಾಗಿಲ್ಲ, ಈ ಗಾರ್ಮೆಂಟ್ಸ್ ಮಾಲೀಕ, ಮಾಲೀಕನ ಕುಟುಂಬ ಸೇರಿದಂತೆ ಇಲ್ಲಿ ಕೆಲಸ ಮಾಡುವ ಕಾರ್ಮಿಕರೆಲ್ಲರೂ ‘ಸಂಸ್ಕೃತ’ದಲ್ಲಿ ಸಂಭಾಷಣೆ ಮಾಡುತ್ತಾರೆ, ವ್ಯವಹರಿಸುತ್ತಾರೆ ಎಂಬುದೇ ವಿಶೇಷ!
ಹೌದು, ‘ತ್ರೀ ಆರ್ ಗಾರ್ಮೆಂಟ್ಸ್’ ಮಾಲೀಕ ರಾಮಸಿಂಗ್ ರಾಜರಾಮ್ ರಾಜಪೂತ್ ಅವರು ವಿಜಯಪುರದಲ್ಲಿ ನಾಲ್ಕು ದಶಕಗಳಿಂದ ಜವಳಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದಾರೆ. ಇವರ ಜೊತೆ ಎಂಬಿಎ ಓದಿರುವ ಹಿರಿಯ ಪುತ್ರ ರಣಧೀರ ಸಿಂಗ ರಾಜಪೂತ್, ರಾಹುಲ್ ಸಿಂಗ ರಾಜಪೂತ್ ಕೂಡ ಕೈಜೋಡಿಸಿದ್ದಾರೆ.
‘ತ್ರೀ ಆರ್ ಗಾರ್ಮೆಂಟ್ಸ್’ನಲ್ಲಿ 20 ಹಿಂದುಗಳು, 15 ಮುಸ್ಲಿಮರು ಸೇರಿದಂತೆ 45ಕ್ಕೂ ಅಧಿಕ ಕೂಲಿಕಾರ್ಮಿಕರು ನಿತ್ಯ ಬಟ್ಟೆ ವ್ಯಾಪಾರ ಮಾಡುತ್ತಾರೆ. ಇವರೆಲ್ಲರೂ ಯಾವುದೇ ಧರ್ಮ, ಜಾತಿ ಬೇಧವಿಲ್ಲದೇ ಸಂಸ್ಕೃತ ಭಾಷೆಯನ್ನು ತಮ್ಮ ದೈನಂದಿನ ವ್ಯವಹಾರದಲ್ಲಿ ಬಳಸುತ್ತಾರೆ. ಎಲ್ಲ ಉದ್ಯೋಗಿಗಳು ಸಂಸ್ಕೃತದಲ್ಲೇ ಪರಸ್ಪರ ಸಂಭಾಷಣೆ ಮಾಡುತ್ತಾರೆ. ಅಲ್ಲದೇ, ಗಾರ್ಮೆಂಟ್ಸ್‌ಗೆ ಬರುವ ಸಂಸ್ಕೃತ ಬಲ್ಲ ಗ್ರಾಹಕರೊಂದಿಗೆ ಸಂಸ್ಕೃತದಲ್ಲೇ ವ್ಯವಹರಿಸುತ್ತಾರೆ. ಇಷ್ಟೇ ಅಲ್ಲದೇ, ತಮ್ಮ ಕುಟುಂಬದವರಿಗೂ ಸಂಸ್ಕೃತ ಭಾಷೆ ಕಲಿಸಿದ್ದಾರೆ!
‘ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ‘ಸಂಸ್ಕೃತ ಭಾರತಿ’ ಸ್ವಯಂ ಸೇವಾ ಸಂಸ್ಥೆಯಿಂದ 2004ರಲ್ಲಿ 10 ದಿನಗಳ ಸಂಸ್ಕೃತ ಕಲಿಕಾ ಶಿಬಿರ ಏರ್ಪಡಿಸಿದ್ದರು. ಆ ಶಿಬಿರದಲ್ಲಿ ನಮ್ಮ ತಂದೆ ರಾಮಸಿಂಗ ರಾಜಪೂತ ಕೂಡ ಶಿಬಿರಾರ್ಥಿಯಾಗಿ ಪಾಲ್ಗೊಂಡಿದ್ದರು. ಅಂದು ತಾವೂ ಸಂಸ್ಕೃತವನ್ನು ಓದಲು, ಬರೆಯಲು, ಮಾತನಾಡಲು ಕಲಿತರು. ನಮ್ಮ ಕುಟುಂಬಕ್ಕೂ ಸಂಸ್ಕೃತವನ್ನು ಕಲಿಸಿದರು. ಅಲ್ಲದೇ, ನಮ್ಮ ಗಾರ್ಮೆಂಟ್ಸ್ ಸಿಬ್ಬಂದಿಗೂ ಸಂಸ್ಕೃತವನ್ನು ಸರಳವಾಗಿ ಹೇಳಿಕೊಟ್ಟರು. ಪರಿಣಾಮ ಇಡೀ ನಮ್ಮ ಪರಿಸರವೇ ಸಂಸ್ಕೃತಮಯವಾಗಿದೆ’ ಎನ್ನುತ್ತಾರೆ ಅವರ ಪುತ್ರ ರಾಹುಲ್ ಸಿಂಗ ರಾಜಪೂತ್.
‘ನಮ್ಮ ಮಾತೃಭಾಷೆ ಹಿಂದಿಯಾದರೂ ಈಗ ನಮ್ಮ ಮನೆಯಲ್ಲಿ ಎಲ್ಲರೂ ಸಂಸ್ಕೃತವನ್ನೇ ಮಾತನಾಡುತ್ತೇವೆ, ನಮ್ಮ ಮನೆಗೆ ಬಂದಿರುವ ಸೊಸೆಯಂದಿಯರು, ಮಕ್ಕಳು ಸಂಸ್ಕೃತವನ್ನೇ ಕಲಿತು, ಸಂಸ್ಕೃತದಲ್ಲೇ ಮಾತನಾಡುತ್ತಾರೆ’ ಎನ್ನುತ್ತಾರೆ ರಾಜಪೂತ್.
‘ಸಂಸ್ಕೃತ ಭಾರತಿ’ ಸಹಯೋಗದಲ್ಲಿ ಉಚಿತ ಸಂಸ್ಕೃತ ಭಾಷಾ ಕಲಿಕಾ ತರಗತಿಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ. ಪ್ರತಿ ದಿನ ಬೆಳಿಗ್ಗೆ 9ರಿಂದ 10.30ರ ವರೆಗೆ ‘ತ್ರೀ ಆರ್ ಗಾರ್ಮೆಂಟ್ಸ್’ನಲ್ಲಿ ಮತ್ತು ವಿಜಯಪುರದ ಆದರ್ಶ ನಗರದಲ್ಲಿರುವ ನಮ್ಮ ‘ಸಂಸ್ಕೃತ ಭವನಮ್’ ಮನೆಯಲ್ಲೂ ಸಂಸ್ಕೃತ ಸಂಭಾಷಣಾ ಶಿಬಿರ ನಡೆಸುತ್ತಾ ಬರುತ್ತಿದ್ದೇವೆ. ಅಷ್ಟೇ ಅಲ್ಲದೇ, ಸಂಸ್ಕೃತ ಕಲಿಯಲಿಚ್ಛಿಸುವ 10ಕ್ಕೂ ಹೆಚ್ಚು ಜನ ಒಂದೆಡೆ ಸೇರಿದರೆ ಅವರಿರುವ ಸ್ಥಳಕ್ಕೆ ಹೋಗಿ ಸಂಸ್ಕೃತ ಸಂಭಾಷಣಾ ಶಿಬಿರ ನಡೆಸುತ್ತೇವೆ. ನಮ್ಮ ಜೊತೆ ಕೈಜೋಡಿಸಿರುವ ಸಂಸ್ಕೃತ ಭಾರತಿ ಉತ್ತರ ಕರ್ನಾಟಕ ವಿಭಾಗದ ಅಧ್ಯಕ್ಷರಾದ ಪ್ರೊ. ಜಿ.ಆರ್.ಅಂಬಲಿ ಅವರು ಸಂಸ್ಕೃತವನ್ನು ವ್ಯಾಕರಣ ಬದ್ಧವಾಗಿ ಹೇಳಿಕೊಡುತ್ತಾರೆ’ ಎನ್ನುತ್ತಾರೆ ಅವರು.
‘ಸಂಸ್ಕೃತ ಭಾರತಿ’ ಸಿದ್ಧಪಡಿಸಿರುವ ಸುಮಾರು 2 ಸಾವಿರ ಸಂಸ್ಕೃತ ಪದಗಳ ಪುಸ್ತಕವನ್ನು ಉಚಿತವಾಗಿ ನೀಡುತ್ತೇವೆ. ಈ ಪದಗಳನ್ನು ಅರ್ಥೈಸಿಕೊಂಡು ಕಲಿತರೆ ಸಂಸ್ಕೃತ ಮಾತನಾಡುವುದು ಸುಲಭ, ಸರಳ. ಇದುವರೆಗೂ ಐದು ಸಾವಿರಕ್ಕೂ ಅಧಿಕ ಜನರಿಗೆ ಉಚಿತ ಸಂಸ್ಕೃತ ತರಬೇತಿ ನೀಡಿದ್ದೇವೆ’ ಎನ್ನುತ್ತಾರೆ ರಾಹುಲ್ ಸಿಂಗ್ ರಾಜಪೂತ್.
‘ಸಂಸ್ಕೃತ ಅತ್ಯಂತ ಪುರಾತನ ಭಾಷೆ, ಭಾರತೀಯ ಸಂಸ್ಕೃತಿ, ಸಂಸ್ಕಾರ, ಜ್ಞಾನವೆಲ್ಲವೂ ಸಂಸ್ಕೃತದಲ್ಲಿ ಅಡಗಿದೆ. ಆದರೆ, ಈ ಭಾಷೆ ಇಂದು ಕೇವಲ ಪೂಜೆ, ಪುನಸ್ಕಾರ, ಮಂತ್ರಕ್ಕೆ ಸೀಮತವಾಗಿದೆ. ಇನ್ನೂ ಹೆಚ್ಚೆಂದರೆ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಅಂಕ ಪಡೆಯಲು ಈ ಭಾಷೆಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ, ಆ ಭಾಷೆಯನ್ನು ಕಲಿಯುವುದರಿಂದ ನಮಗೆ ಜೀವನದಲ್ಲಿ ಹಲವು ಪ್ರಯೋಜನಗಳಿವೆ. ಈ ಭಾಷೆಯ ನೆರವಿನಿಂದ ಇತರೆ ಭಾರತೀಯ ಭಾಷೆಗಳನ್ನು ಕಲಿಯುವುದು, ಅರ್ಥೈಸಿಕೊಳ್ಳುವುದು ಸುಲಭ. ಉಚ್ಛರಣೆಯೂ ಸ್ಪಷ್ಟವಾಗುತ್ತದೆ. ಇಂತಹ ಶ್ರೇಷ್ಠ ಭಾಷೆ ಉಳಿಯಬೇಕು, ಬೆಳೆಯಬೇಕು ಎಂಬ ಸದುದ್ದೇಶದಿಂದ ಸಂಸ್ಕೃತ ಭಾಷೆಯ ಪ್ರಚಾರದಲ್ಲಿ ನಮ್ಮ ಕುಟುಂಬ ತೊಡಗಿದೆ’ ಎನ್ನುತ್ತಾರೆ ಅವರು.
‘ನಮ್ಮಲ್ಲಿ ಕೆಲಸ ಮಾಡುವ ಬಹುತೇಕರು ಪ್ರಾಥಮಿಕ ಶಿಕ್ಷಣಕ್ಕೆ ಶಾಲೆ ಬಿಟ್ಟವರು ಇದ್ದಾರೆ. ಅವರೇ ನಮ್ಮಲ್ಲಿ ಸಂಸ್ಕೃತವನ್ನು ಕಲಿತು, ಸ್ಪಷ್ಟವಾಗಿ ಮಾತನಾಡುತ್ತಾರೆ. ಅಷ್ಟೊಂದು ಸರಳ ಭಾಷೆ ಸಂಸ್ಕೃತ. ಹೀಗಿರುವಾಗ ಉನ್ನತ ಶಿಕ್ಷಣ ಪಡೆದವರು ಈ ಭಾಷೆಯನ್ನು ಕಲಿಯುವುದು ಬಹಳ ಸುಲಭ’ ಎನ್ನುತ್ತಾರೆ ರಾಹುಲ ಸಿಂಗ ರಾಜಪೂತ್.
‘ನನ್ನ ಮಾತೃ ಭಾಷೆ ಉರ್ದು ಬಿಟ್ಟರೆ ಕನ್ನಡ ಮಾತನಾಡಲೂ ಅಷ್ಟೊಂದು ಬರುತ್ತಿರಲಿಲ್ಲ. ನಾನು ಓದಿರುವುದು ಕೇವಲ ಏಳನೇ ತರಗತಿಯಾದರೂ ಗಾರ್ಮಿಂಟ್ಸ್‌ನಲ್ಲಿ ಸಂಸ್ಕೃತ ಕಲಿತ ಮೇಲೆ ಕನ್ನಡ, ಹಿಂದಿ, ಇಂಗ್ಲಿಷ್‌ನಲ್ಲಿ ಸ್ಪಷ್ಟವಾಗಿ ಮಾತನಾಡುವುದು ಸುಲಭವಾಯಿತು. ಅಲ್ಲದೇ, ವ್ಯವಹಾರಕ್ಕೂ ಸಹಾಯವಾಗಿದೆ’ ಎಂದು ‘ತ್ರೀ ಆರ್’ ಗಾರ್ಮೆಂಟ್ಸ್‌ನಲ್ಲಿ ಎಂಟು ವರ್ಷಗಳಿಂದ ಸೀನಿಯರ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸೋಹೆಲ್ ಸಾಲೋಟಗಿ.
‘ನಮ್ಮದು ಮುಸ್ಲಿಂ ಕುಟುಂಬವಾದರೂ ಮನೆಯಲ್ಲಿ ನಮ್ಮ ಸಹೋದರಿ ಮತ್ತು ಸಹೋದರಿಯ ಮಕ್ಕಳಿಗೆ ಸಂಸ್ಕೃತ ಕಲಿಸಿದ್ದೇನೆ. ನನ್ನ ಹಿರಿಯ ಸಹೋದರ ಸಮೀರ್ ಸಾಲೋಟಗಿ ಕೂಡ ‘ತ್ರೀ ಆರ್’ನಲ್ಲಿ ಹೆಡ್ ಮ್ಯಾನೇಜರ್ ಆಗಿ 14 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ನಮ್ಮ ಮಾತೃ ಭಾಷೆ ಉರ್ದುವಾದರೂ ಇಂದು ನಮ್ಮ ಮನೆ ಸಂಸ್ಕೃತ ಮಯವಾಗಿದೆ’ ಎಂದು ಸೋಹೆಲ್ ಹೆಮ್ಮೆಯಿಂದ ಹೇಳಿಕೊಂಡರು.
ನಿಮಗೂ ಸಂಸ್ಕೃತ ಕಲಿಯುವ ಆಸಕ್ತಿ ಇದ್ದರೆ ವಿಜಯಪುರದ ‘ತ್ರೀ ಆರ್’ ಮಾಲೀಕರಾದ ರಾಮಸಿಂಗ ರಾಜಪೂತ (9449768120), ಅವರ ಪುತ್ರ ರಾಹುಲ ಸಿಂಗ ರಾಜಪೂತ್ (7411381641) ಅವರನ್ನು ಸಂಪರ್ಕಿಸಬಹುದು.