ಹಾವೇರಿ ಜಿಲ್ಲೆಯಲ್ಲಿ 347 ಹೆಕ್ಟೇರ್ ಪ್ರದೇಶದಲ್ಲಿ ಚಿನ್ನ ಶೋಧ

ಹಾವೇರಿ ಜಿಲ್ಲೆಯಲ್ಲಿ 347 ಹೆಕ್ಟೇರ್ ಪ್ರದೇಶದಲ್ಲಿ ಚಿನ್ನ ಶೋಧ

ಹಾವೇರಿ ಜಿಲ್ಲೆಯಲ್ಲಿ 347 ಹೆಕ್ಟೇರ್ ಪ್ರದೇಶದಲ್ಲಿ ಚಿನ್ನ ಶೋಧ

ಹಾವೇರಿ: ‘ಜಿಲ್ಲೆಯ ಹಲವೆಡೆ ಚಿನ್ನ ಹಾಗೂ ಇತರೆ ನೈಸರ್ಗಿಕ ಖನಿಜ ಸಂಪತ್ತು ಇದೆ’ ಎಂಬ ಮಾಹಿತಿ ಆಧರಿಸಿ ಇತ್ತೀಚೆಗೆ ನಡೆಸಿದ್ದ ವೈಮಾನಿಕ ಸಮೀಕ್ಷೆಯಲ್ಲಿ ಕೆಲ ಮಹತ್ವದ ಅಂಶಗಳು ಪತ್ತೆಯಾಗಿವೆ. ಇದೀಗ, ಅರಣ್ಯ ಪ್ರದೇಶದಲ್ಲಿ 78 ಕೊಳವೆ ಬಾವಿಗಳ ಮೂಲಕ ಚಿನ್ನದ ನೆಲೆಗಾಗಿ ಹುಡುಕಾಟ ಶುರುವಾಗಿದೆ.

ಖನಿಜ ಸಂಪತ್ತಿನ ಬಗ್ಗೆ ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆ (ಜಿಎಸ್‌ಐ), ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಏರ್‌ಕ್ರಾಫ್ಟ್‌ ಬಳಸಿ ಜಿಲ್ಲೆಯಾದ್ಯಂತ ಇತ್ತೀಚೆಗೆ ಸಮೀಕ್ಷೆ ನಡೆಸಿತ್ತು. ಜಿಲ್ಲೆಯ ರಾಣೆಬೆನ್ನೂರು, ಹಾವೇರಿ, ಬ್ಯಾಡಗಿ, ಹಿರೇಕೆರೂರು, ಹಾನಗಲ್, ಶಿಗ್ಗಾವಿ ಭಾಗದಲ್ಲಿ ಏರ್‌ಕ್ರಾಫ್ಟ್‌ ಹಾರಾಡಿತ್ತು.

‘ವಿಶೇಷ ಅಭಿಯಾನದ ಅಂಗವಾಗಿ ಕೇರಳ, ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಖನಿಜ ಸಂಪತ್ತಿಗಾಗಿ ಶೋಧ ನಡೆಸಲಾಗುತ್ತಿದೆ’ ಎಂದು ಜಿಎಸ್‌ಐ ಅಧಿಕಾರಿಗಳು ಹೇಳಿದ್ದರು. ಕೆಲ ದಿನಗಳ ಹಿಂದೆಯಷ್ಟೇ ಸಮೀಕ್ಷೆ ಮುಕ್ತಾಯಗೊಂಡಿದೆ. ಇದರ ಬೆನ್ನಲ್ಲೇ ಕುಂದನ್ ಗೋಲ್ಡ್ ಮೈನ್ಸ್ ಕಂಪನಿಯು ಚಿನ್ನಕ್ಕಾಗಿ ಹೆಚ್ಚಿನ ಶೋಧ ನಡೆಸಲು ಕೇಂದ್ರ ಸರ್ಕಾರದಿಂದಲೇ ಅನುಮತಿ ಪಡೆದಿದೆ.

ಬ್ಯಾಡಗಿ ತಾಲ್ಲೂಕಿನ ಸಾಲಗುಡ್ಡ ಹಾಗೂ ಹಾನಗಲ್ ತಾಲ್ಲೂಕಿನ ಸಂಕ್ರಿಕೊಪ್ಪದ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಕುಂದನ್ ಗೋಲ್ಡ್ ಮೈನ್ಸ್ ಕಂಪನಿ ಮಾಹಿತಿ ಕಲೆಹಾಕಿದೆ. ಈಗ ಅದೇ ಸ್ಥಳದಲ್ಲಿ 78 ಕೊಳವೆ ಬಾವಿಗಳನ್ನು ಕೊರೆದು, ಖನಿಜವನ್ನು ಹೊರಗೆ ತೆಗೆಯುವ ಕೆಲಸ ಪ್ರಾರಂಭಿಸಿದೆ.

ಕಾಂಪೋಸಿಟ್ ಪರವಾನಗಿ: ‘ಸಾಲುಗುಡ್ಡ ಹಾಗೂ ಸಂಕ್ರಿಕೊಪ್ಪದಲ್ಲಿ ಭೂಮಿಯ ಮೇಲ್ಮೈ ಸಮೀಕ್ಷೆ ನಡೆಸಿದ್ದ ಕಂಪನಿಯು ಖನಿಜ ಸಂಪತ್ತಿನ ಬಗ್ಗೆ ಪ್ರಾಥಮಿಕ ವರದಿ ಸಿದ್ಧಪಡಿಸಿದೆ. ಇದೇ ವರದಿ ಆಧರಿಸಿ, ನೆಲದಡಿ ಕೊಳವೆ ಬಾವಿ ಕೊರೆಯುವುದಕ್ಕೆ ಪರವಾನಗಿ ಕೋರಿ ಅರ್ಜಿ ಸಲ್ಲಿಸಿತ್ತು. ಇದೀಗ ಕಂಪನಿಗೆ ಪರವಾನಗಿ ಸಿಕ್ಕಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಯೊಬ್ಬರು ಹೇಳಿದರು.

‘ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಿಂದಲೇ ಪರವಾನಗಿ ಸಿಕ್ಕಿದೆ. ಕಾಂಪೋಸಿಟ್ ಪರವಾನಗಿ ಪಡೆದಿರುವ ಕಂಪನಿಯು ಮುಂಬರುವ ದಿನಗಳಲ್ಲಿ ಚಿನ್ನದ ಶೋಧ ನಡೆಸಲಿದೆ. ಆಕಸ್ಮಾತ್ ಚಿನ್ನದ ನಿಕ್ಷೇಪ ಸಿಕ್ಕರೆ, ಅದೇ ಕಂಪನಿಯು ಚಿನ್ನವನ್ನು ಹೊರಗೆ ತೆಗೆಯಲು ಪರವಾನಗಿ ಕೋರಿ ಪುನಃ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ’ ಎಂದರು.

ಅರಣ್ಯ ಇಲಾಖೆಯಿಂದ ಅನುಮತಿ: ಸಾಲುಗುಡ್ಡ ಹಾಗೂ ಸಂಕ್ರಿಕೊಪ್ಪ ಬಳಿ 347 ಹೆಕ್ಟೇರ್‌ ಅರಣ್ಯ ಪ್ರದೇಶವಿದೆ. ಇದೇ ಜಾಗದಲ್ಲಿ 78 ಕಡೆಗಳಲ್ಲಿ ಕೊಳವೆ ಬಾವಿ ಕೊರೆಯಬೇಕಿದೆ. ಇದಕ್ಕಾಗಿ ಕುಂದನ್‌ ಗೋಲ್ಡ್‌ ಮೈನ್ಸ್ ಕಂಪನಿಯು ಅರಣ್ಯ ಇಲಾಖೆಯ ಅನುಮತಿ ಪಡೆದಿದೆ.

‘ನಿಗದಿತ ಸ್ಥಳದಲ್ಲಿ ಕೊಳವೆ ಬಾವಿ ಕೊರೆಯಲಿರುವ ಕಂಪನಿಯು ಖನಿಜವನ್ನು ಸಂಗ್ರಹಿಸಲಿದೆ. ನಂತರ, ಸಂಸ್ಕರಣೆ ಮೂಲಕ ಚಿನ್ನವನ್ನು ಪರಿಶೀಲನೆ ನಡೆಸಲಿದೆ. ನಿಗದಿತ ಪ್ರಮಾಣದಲ್ಲಿ ಚಿನ್ನ ಸಿಕ್ಕರಷ್ಟೇ, ಕೆಲಸ ಮುಂದುವರಿಸಲಿದೆ’ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ತಿಳಿಸಿದರು.

ಗಣಜೂರಿನಲ್ಲೂ ನಡೆದಿದ್ದ ಸಮೀಕ್ಷೆ

ಹಾವೇರಿ ತಾಲ್ಲೂಕಿನ ಗಣಜೂರಿನಲ್ಲಿ ‘ಡೆಕ್ಕನ್ ಗೋಲ್ಡ್ ಮೈನಿಂಗ್ ಕಂಪನಿ’ ಅಡಿಯಲ್ಲಿ ‘ಡೆಕ್ಕನ್ ಎಕ್ಸ್‌ಪ್ಲೋರೇಷನ್ ಸರ್ವೀಸಸ್’ ಕಂಪನಿಯು ಚಿನ್ನದ ನಿಕ್ಷೇಪಕ್ಕಾಗಿ ಶೋಧ ನಡೆಸಿತ್ತು. ‘27 ಲಕ್ಷ ಟನ್ ಖನಿಜ (ಆಕ್ಸೈಡ್ ಹಾಗೂ ಸಲ್ಫೈಡ್) ಸಂಪತ್ತಿದೆ. ಪೂರ್ಣ ಪ್ರಮಾಣದ ಗಣಿಗಾರಿಕೆ ನಡೆಸಿದರೆ, ಪ್ರತಿ ಟನ್‌ ಖನಿಜದಲ್ಲಿ 3.40 ಗ್ರಾಂ ಚಿನ್ನ ಸಿಗುವ ಅಂದಾಜು ಇದೆ’ ಎಂದು ವರದಿಯನ್ನೂ ನೀಡಿದೆ. ಈಗ ಅದೇ ಸ್ಥಳದಲ್ಲಿ ಗಣಿಗಾರಿಕೆ ನಡೆಸಲು ತಯಾರಿಯೂ ಶುರು ಆಗಿರುವುದು ಗೊತ್ತಾಗಿದೆ.

ರಟ್ಟೀಹಳ್ಳಿ ತಾಲ್ಲೂಕಿನ ನಾಗವಂದ, ರಾಣೆಬೆನ್ನೂರು ತಾಲ್ಲೂಕಿನ ಕಾಕೋಳ, ಬ್ಯಾಡಗಿ ತಾಲ್ಲೂಕಿನ ಚಿನ್ನಿಕಟ್ಟಿ, ಚಿನ್ನಮುಳಗುಂದ ಸೇರಿದಂತೆ ಹಲವು ಕಡೆಗಳಲ್ಲಿಯೂ ಚಿನ್ನದ ನಿಕ್ಷೇಪದ ಮಾಹಿತಿಯಿದೆ. ಈ ಬಗ್ಗೆ ಪ್ರಾಥಮಿಕ ಸಮೀಕ್ಷೆ ಮಾತ್ರವೇ ಆಗಿದೆ.

949 ಹೆಕ್ಟೇರ್ ಪ್ರದೇಶದಲ್ಲೂ ಸಮೀಕ್ಷೆ

ಹಾವೇರಿ ಜಿಲ್ಲೆಯಲ್ಲಿ ಚಿನ್ನದ ನಿಕ್ಷೇಪ ಪತ್ತೆಗೆ ಮುಂದಾಗಿರುವ ಕುಂದನ್ ಗೋಲ್ಡ್ ಮೈನ್ಸ್ ಕಂಪನಿಯು ತುಮಕೂರು ಜಿಲ್ಲೆಯಲ್ಲೂ ಈಗಾಗಲೇ ಸಮೀಕ್ಷೆ ಆರಂಭಿಸಿದೆ.

ತುಮಕೂರು ಜಿಲ್ಲೆಯ ಅಂಜನಹಳ್ಳಿ ಗ್ರಾಮದ ಬಳಿ 949 ಹೆಕ್ಟೇರ್ ಪ್ರದೇಶದಲ್ಲಿ ಜಿ–3 ಪರವಾನಗಿ ಪಡೆದು ಶೋಧ ನಡೆಸುತ್ತಿದೆ. ಒಂದುವೇಳೆ ಈ ಪ್ರದೇಶದಲ್ಲಿ ಚಿನ್ನ ಇರುವುದು ಖಾತ್ರಿಯಾದರೆ, ಇದೇ ಕಂಪನಿಯು ಚಿನ್ನ ಹೊರತೆಗೆಯುವ ಪರವಾನಗಿ ಪಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260829-22-308022899

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ