PV WEB Exclusive: ಫತೇಪುರ ಸಿಕ್ರಿಗೆ ಪ್ರೇರಣೆ ಫಿರೋಜಾಬಾದ್‌!

PV WEB Exclusive: ಫತೇಪುರ ಸಿಕ್ರಿಗೆ ಪ್ರೇರಣೆ ಫಿರೋಜಾಬಾದ್‌!

PV WEB Exclusive: ಫತೇಪುರ ಸಿಕ್ರಿಗೆ ಪ್ರೇರಣೆ ಫಿರೋಜಾಬಾದ್‌!

ಕಲಬುರಗಿ: ಸ್ವಚ್ಛಂದವಾಗಿ ಹರಿಯುವ ಭೀಮಾ ನದಿ. ಕೂಗಳತೆ ದೂರದಲ್ಲೇ ತಲೆ ಎತ್ತಿತ್ತು ಭವ್ಯ ರಾಜಧಾನಿ. ಅದು ಬಹಮನಿಯರ ಪ್ರಸಿದ್ಧ ಸುಲ್ತಾನ ತಾಜುದ್ದೀನ್‌ ಫಿರೋಜ್‌ ಷಾ ಕನಸಿನ ನಗರ. ಮೊಘಲರ ಬಾದ್‌ಷಾ ಅಕ್ಬರ್‌ ಫತೇಪುರ ಸಿಕ್ರಿ ನಿರ್ಮಿಸಲೂ ಪ್ರೇರಣೆಯಾಗಿತ್ತು ಈ ಫಿರೋಜಾಬಾದ್‌ ಕೋಟೆ.

ಹೌದು, ಜೇವರ್ಗಿಯಿಂದ 10 ಕಿ.ಮೀ ಅಂತರದಲ್ಲಿ, ಕಲಬುರಗಿಯಿಂದ ದಕ್ಷಿಣಕ್ಕೆ 34 ಕಿ.ಮೀ ದೂರದಲ್ಲಿ ಭೀಮಾ ನದಿಯ ದಂಡೆಯ ಮೇಲಿರುವ ಫಿರೋಜಾಬಾದ್‌, ಬಹಮನಿ ಸಾಮ್ರಾಜ್ಯದ ಮುಖ್ಯ ನಗರ. ಬಹಮನಿಯರ ಮೂರನೇ ರಾಜಧಾನಿ ಎಂದೂ ಗುರುತಿಸಿಕೊಂಡಿದೆ. ತನ್ನೊಳಗೆ ನೂರಾರು ರಹಸ್ಯಗಳನ್ನು ಅಡಗಿಸಿಟ್ಟುಕೊಂಡಿದ್ದರೂ ಪ್ರಸ್ತುತ ಅನಾಥವಾಗಿದೆ. ಅಜ್ಞಾತವಾಗಿಯೇ ಉಳಿದಿದೆ.  

ಕ್ರಿ.ಶ. 1406ರ ಅವಧಿಯಲ್ಲಿ ಫಿರೋಜ್ ಷಾ ಬಹಮನಿಯೂ ಈ ಬೃಹತ್ ನಗರ ಯೋಜನೆಯನ್ನು ಕೈಗೊಂಡಿದ್ದರ ಫಲವಾಗಿ ಅಕ್ಬರನಿಗೆ ಫತೇಪುರ್ ಸಿಕ್ರಿ ನಿರ್ಮಿಸಲು ಪ್ರೇರಣೆಯಾಯಿತು. ಫತೇಪುರ್ ಸಿಕ್ರಿ ಅಕ್ಬರನ ನಂತರ ಹೇಗೆ ಅಜ್ಞಾತವಾಯಿತೋ, ಹಾಗೆಯೇ ಫಿರೋಜಾಬಾದ್‌ ಕೂಡ ತನ್ನ ಕಟ್ಟಿದ ರಾಜನೊಂದಿಗೆ ಮರೆಯಾಯಿತು.

ರಾಯಚೂರು, ಮುದಗಲ್‌ ಕೋಟೆಗಾಗಿ ಸದಾ ವಿಜಯನಗರ ಸಾಮ್ರ್ಯಾಜ್ಯದೊಂದಿಗೆ ಕಾದಾಡುತ್ತಿದ್ದ ಬಹಮನಿ ಸುಲ್ತಾನರಿಗೆ ರಾಜಧಾನಿ ಕಲಬುರಗಿಯಲ್ಲಿ ನೀರಿನ ಸಮಸ್ಯೆ ಕಾಡುತ್ತಿತ್ತು. ಹೀಗಾಗಿ ಮಹತ್ವಾಕಾಂಕ್ಷಿಯಾಗಿದ್ದ ಸುಲ್ತಾನ ತಾಜುದ್ದೀನ್‌ ಫಿರೋಜ್‌ ಷಾ ಭೀಮೆಯ ತಟದಲ್ಲೇ 1406ರಲ್ಲಿ ಈ ನಗರ ನಿರ್ಮಾಣಕ್ಕೆ ಮುಂದಾದನು.

ಕೋಟೆಗಿವೆ ನಾಲ್ಕು ದ್ವಾರಗಳು: ಬಹುಭಾಷಾ ವಿದ್ವಾಂಸ, ಗಣಿತ ತಜ್ಞ, ಅದರಲ್ಲೂ ರೇಖಾಗಣಿತದಲ್ಲಿ ಅತೀವ ಆಸಕ್ತಿ ಹೊಂದಿದ್ದ ಫಿರೋಜ್‌ ಷಾ ಸುಮಾರು 5.5 ಕಿ.ಮೀ. ವ್ಯಾಪ್ತಿಯಲ್ಲಿ ಯೋಜನಾಬದ್ಧವಾಗಿ ಈ ನಗರ ನಿರ್ಮಾಣಕ್ಕೆ ಮುಂದಾದನು. ಪಾನಿ-ದರವಾಜಾ, ಗುಲ್ಬರ್ಗಾ–ದರವಾಜಾ, ಶೋರಾಪುರ–ದರವಾಜಾ, ರಾಯಚೂರು–ದರವಾಜಾ ಎಂದು ಕೋಟೆಗೆ ನಾಲ್ಕು ಅಗಸಿಗಳನ್ನು ನಿರ್ಮಿಸಿ, ಕೋಟೆಯ ಒಳಗಡೆ ರಾಣಿಯರ ಮಹಲ್‌, ಜುಮ್ಮಾ ಮಸೀದಿ, ಕುದುರೆ ಪಾಗ, ಮೂರಂತಸ್ತಿನ ಅರಮನೆ, ಮುಖ್ಯ ಅಡುಗೆಮನೆ, ತಂಬಾಕು ವಾಡಿ ಸೇರಿದಂತೆ ಹಲವು ಕಟ್ಟಡಗಳನ್ನು ಹತ್ತು ವರ್ಷಗಳಲ್ಲಿ ನಿರ್ಮಿಸಲಾಯಿತು.

‘ಕೋಟೆಗೆ ನೀರು ಸರಬರಾಜು ವ್ಯವಸ್ಥೆ ಸೂಕ್ತವಾಗಿರಬೇಕು ಎಂಬುದು ಸುಲ್ತಾನನ ಉದ್ದೇಶವಾಗಿತ್ತು. ಸುಮಾರು 450 ಕಿ.ಮೀ. ದೂರದ ದೌಲತಾಬಾದ್‌ ಸಮೀಪದಲ್ಲಿ ಕಟ್ಟಿರುವ ವೀಕ್ಷಣಾಲಯದಿಂದ ಫಿರೋಜಾಬಾದ್‌ ಕೋಟೆ ಕಾಣಿಸಬೇಕು ಎಂಬುದು ಸುಲ್ತಾನನ ಉದ್ದೇಶವಾಗಿತ್ತು’ ಎಂದು ವಿವರಿಸುತ್ತಾರೆ ಇತಿಹಾಸ ಸಂಶೋಧಕ ಪ್ರೊ.ಶಂಭುಲಿಂಗ ವಾಣಿ.

1397ರಿಂದ 1422ರವರೆಗೆ ಅಧಿಕಾರದಲ್ಲಿದ್ದ ಫಿರೋಜ್ ಷಾ ಬಹಮನಿಯ ನಿಧನದ ನಂತರ ಫಿರೋಜಾಬಾದ್‌ ನಗರವು ಏಕಾಏಕಿ ತನ್ನ ಮಹತ್ವ ಕಳೆದುಕೊಂಡಿತು. ಕ್ರಿ.ಶ.1422 ರವರೆಗೆ ವೈಭವದಿಂದ ಮೆರೆದ ನಗರ, ನಿಧಾನವಾಗಿ ಹಾಳು ಅವಶೇಷಗಳ ಸ್ಥಳವಾಗಿ ಬದಲಾಯಿತು.

ಆದರೂ ಇತಿಹಾಸಕಾರರಿಗೆ ಮತ್ತು ವಾಸ್ತುಶಿಲ್ಪ ಅಧ್ಯಯನ ಮಾಡುವವರಿಗೆ ಫಿರೋಜಾಬಾದ್‌ ಇಂದಿಗೂ ನಿಧಿಯಂತಿದೆ. ಬಹಮನಿ ಸುಲ್ತಾನರ ಕಲೆ ಮತ್ತು ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳಲು ಇಲ್ಲಿಯ ಸ್ಮಾರಕಗಳು ಅತ್ಯುತ್ತಮ ಉದಾಹರಣೆಗಳು.

ಬಹಮನಿ ಅರಸರ ಮೂರನೇ ರಾಜಧಾನಿ ಎಂದು ಫಿರೋಜಾಬಾದ್‌ ಗುರುತಿಸಿಕೊಂಡಿದ್ದರೂ, ಕಲಬುರಗಿ, ಬೀದರ್‌ನಷ್ಟು ಪ್ರಸಿದ್ಧಿ ಇದಕ್ಕೆ ಸಿಗಲಿಲ್ಲ. ಬಹಮನಿ ಇತಿಹಾಸ ಅಥವಾ ವಾಸ್ತುಶಿಲ್ಪದ ಅಧ್ಯಯನಗಳಲ್ಲಿ ಫಿರೋಜಾಬಾದ್‌ ಅನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುತ್ತಾರೆ ಇತಿಹಾಸ ಆಸಕ್ತರಾದ ಬೋಡೆ ರಿಯಾಜ್ ಅಹಮದ್‌. 

ಶತಮಾನದ ಹಿಂದೆ ಆಂದೋಲ ತಾಲ್ಲೂಕಿಗೆ ಒಳಪಟ್ಟ ಈ ಗ್ರಾಮ ನಂತರ ಕಲಬುರಗಿ ತಾಲ್ಲೂಕಿಗೆ ಒಳಪಟ್ಟ ಪುಟ್ಟ ಗ್ರಾಮವಾಗಿದೆ. ಭೀಮೆಯನ್ನು ದಾಟಿದರೆ ಜೇವರ್ಗಿ ತಾಲ್ಲೂಕು ಪ್ರಾರಂಭವಾಗುತ್ತದೆ.

ಶತಮಾನಗಳಿಂದ ಇಲ್ಲಿಯ ತನಕ ಅನೇಕ ಅಧ್ಯಯನಗಳಾದರೂ ಇತಿಹಾಸದ ಪುಟಗಳಲ್ಲಿ ಈ ಕೋಟೆ ಧೂಳು ಹಿಡಿದು ಯಾರ ಕಣ್ಣಿಗೂ ಬೀಳುತ್ತಿಲ್ಲ. ಈ ಭವ್ಯ ನಗರದ ಗತವೈಭವ ಮುಳ್ಳುಕಂಟಿಗಳಲ್ಲಿ ಅಡಗಿ ಕೂತಿದೆ. 

`ಬಾರಾಹ ಲಾಕ್ ಕಾ ರಾಜ್ಯ ಪಾನಿ ಮೇ ಡೂಬ್ ಗಯಾ'

ಫಿರೋಜಾಬಾದ್ ಕೋಟೆಯ ಕಟ್ಟಡಗಳನ್ನು ಕಟ್ಟಲು ಸುಣ್ಣದ ಕಲ್ಲು, ಕರಿ ಕಲ್ಲುಗಳನ್ನು ಬಳಸಲಾಗಿದೆ. ವಿಶೇಷವೆಂದರೆ ಸುತ್ತು ನೂರು ಕಿ.ಮೀ. ವ್ಯಾಪ್ತಿಯಲ್ಲಿ ಈ ಕಲ್ಲಿನ ಸಂಪನ್ಮೂಲವಿಲ್ಲ. ಹೀಗಾಗಿ ಎಲ್ಲಿಂದ ತಂದಿರಬಹುದು ಎಂಬುದು ಇತಿಹಾಸ ಆಸಕ್ತರ ಕುತೂಹಲವಾಗಿದೆ. 1416ರಲ್ಲಿ ಈ ಕೋಟೆ ನಿರ್ಮಾಣಕಾರ್ಯ ಪೂರ್ಣಗೊಂಡಿತು. ಅಂದಿನ ಲೆಕ್ಕದಲ್ಲಿ ಸುಮಾರು ₹12 ಲಕ್ಷ ಖರ್ಚಾಗಿತ್ತು. ಆದರೆ ಮರುವರ್ಷವೇ ಭೀಮೆಯ ಪ್ರವಾಹಕ್ಕೆ ತುತ್ತಾಯಿತು. ಹೀಗಾಗಿ 'ಬಾರಾಹ ಲಾಕ್ ಕಾ ರಾಜ್ಯ ಪಾನಿ ಮೇ ಡೂಬ್ ಗಯಾ' ಎಂಬ ಮಾತು ಇಲ್ಲಿನ ಸ್ಥಳೀಯರ ಬಾಯಲ್ಲಿ ಹರಿದಾಡುತ್ತಿದೆ. ಅಲ್ಲದೇ ತನ್ನ ಕನಸಿನ ನಗರ ನೀರಲ್ಲಿ ಮುಳುಗಿದ್ದರಿಂದ ಹತಾಸೆಗೊಂಡ ಸುಲ್ತಾನ ತನ್ನ ಯೋಜನೆಯನ್ನು ಕೈಬಿಟ್ಟ ಎನ್ನುತ್ತಾರೆ ಇತಿಹಾಸ ತಜ್ಞರು.

ಬಂದಾ ನವಾಜ್‌ರನ್ನು ಕರೆತಂದ ಫಿರೋಜ್ ಷಾ

ಸುಲ್ತಾನ ತಾಜುದ್ದೀನ್ ಫಿರೋಜ್ ಷಾಗೆ ಸೂಫಿಗಳೆಂದರೆ ಬಹಳ ಗೌರವ. ಹೀಗಾಗಿ ಆ ಕಾಲಕ್ಕೆ ದೆಹಲಿ ಸೇರಿದಂತೆ ಪ್ರಪಂಚದಾದ್ಯಂತ ಹೆಸರುವಾಸಿಯಾಗಿದ್ದ ಹಜರತ್ ಖಾಜಾ ಬಂದಾ ನವಾಜರನ್ನು ಹೇಗಾದರೂ ಮಾಡಿ ತನ್ನ ರಾಜಧಾನಿಗೆ ಕರೆಯಿಸಿ ಆಶೀರ್ವಾದ ಪಡೆಯಬೇಕು ಎಂಬುದು ಸುಲ್ತಾನನ ಆಸೆಯಾಗಿತ್ತು. ಹೀಗಾಗಿ ಬಂದಾ ನವಾಜರನ್ನು ಕಲಬುರಗಿ ಅಂದರೆ ಅಂದಿನ ಗುಲಬರ್ಗಾಕ್ಕೆ ಕರೆತರುವಲ್ಲಿ ಸುಲ್ತಾನ ಯಶಸ್ವಿಯಾದನು.

ಬಂದಾ ನವಾಜರು ಹಿಂದೂ, ಮುಸ್ಲಿಂ ಸೇರಿದಂತೆ ಎಲ್ಲ ಸಮುದಾಯದ ಜನರಿಗೆ ಆಧ್ಯಾತ್ಮಿಕ ಪಾಠ ಹೇಳುತ್ತಾ ಜೀವನ ಕಳೆದರು. ಕೆಲವೊಮ್ಮೆ ಸುಲ್ತಾನನು ತಪ್ಪು ನಿರ್ಧಾರ ಕೈಗೊಂಡರೆ ಹಿಂದೆ ಮುಂದೆ ನೋಡದೆ ವಿರೋಧಿಸುತ್ತಿದ್ದರು. ಅಚ್ಚರಿಯೆಂದರೆ ಫಿರೋಜ್ ಷಾ ನಿಧನಹೊಂದಿದ ಒಂದು ತಿಂಗಳಲ್ಲಿಯೇ ಖಾಜಾ ಬಂದಾ ನವಾಜರೂ ನಿಧನರಾದರು.

ವಿಜಯನಗರದ ಅಳಿಯ ಈ ಫಿರೋಜ್ ಷಾ!

ಇತಿಹಾಸದುದ್ದಕ್ಕೂ ವಿಜಯನಗರ ಸಾಮ್ರಾಜ್ಯ ಮತ್ತು ಬಹಮನಿಯರು ಬದ್ಧವೈರಿಗಳು ಎಂದೇ ದಾಖಲಿಸಲಾಗಿದೆ. ಆದರೆ, ತಾಜುದ್ದೀನ್ ಫಿರೋಜ್ ಷಾ ವಿಜಯನಗರದ ಅರಸ ಒಂದನೇ ದೇವರಾಯನ ಅಳಿಯನಾಗಿದ್ದ ಎಂಬುದು ಅಷ್ಟೇ ಅಚ್ಚರಿಯ ಸಂಗತಿ. ಇದರ ಬೆನ್ನತ್ತಿ ಹೊರಟಾಗ ತೆರೆದುಕೊಳ್ಳುತ್ತದೆ ಮುದಗಲ್ ಯುವತಿಯ ಪ್ರೇಮಕಥೆ.

ಮುದಗಲ್‌ನ ಫರತಾಳ ಎಂಬ ಯುವತಿಯ ಸೌಂದರ್ಯಕ್ಕೆ ಮನಸೋತಿದ್ದ ವಿಜಯನಗರದ ಒಂದನೇ ದೇವರಾಯ ಮದುವೆ ಪ್ರಸ್ತಾಪ ಕಳುಹಿಸುತ್ತಾನೆ. ಆದರೆ, ಯುವತಿ ಫರತಾಳ ಮದುವೆ ಪ್ರಸ್ತಾಪ ತಿರಸ್ಕರಿಸುತ್ತಾಳೆ. ಹೀಗಾಗಿ ಕೋಪಗೊಂಡ ಒಂದನೇ ದೇವರಾಯ ಮುದಗಲ್ ಕೋಟೆಯ ಮೇಲೆ ದಾಳಿಗೆ ಮುಂದಾಗುತ್ತಾನೆ. ಮುದಗಲ್ ಕೋಟೆ ಆಗ ಬಹಮನಿಯರ ವ್ಯಾಪ್ತಿಯಲ್ಲಿರುತ್ತದೆ. ಹೀಗಾಗಿ ಇತ್ತ ಸುಲ್ತಾನನಾಗಿದ್ದ ಫಿರೋಜ್ ಷಾ ಕೂಡ ತನ್ನ ಕೋಟೆ ಉಳಿಸಿಕೊಳ್ಳಲು ಸೈನಿಕರೊಂದಿಗೆ ಧಾವಿಸುತ್ತಾನೆ. ಯುದ್ಧದಲ್ಲಿ ಒಂದನೇ ದೇವರಾಯನಿಗೆ ಸೋಲಾಗುತ್ತದೆ. ಹೀಗಾಗಿ ದೇವರಾಯ ತನ್ನ ಮಗಳನ್ನು ಫಿರೋಜ್‌ಷಾನಿಗೆ ಕೊಟ್ಟು ನೆಂಟಸ್ತಿಕೆ ಬೆಸೆಯುತ್ತಾನೆ. ಇನ್ನು ಯುದ್ಧಕ್ಕೆ ಕಾರಣವಾದ ಫರತಾಳನ್ನು ಫಿರೋಜ್ ಷಾ ತನ್ನ ಮಗ ಶಹಜಾದ ಹಸನ್‌ಗೆ ತಂದುಕೊಳ್ಳುತ್ತಾನೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ