
Web Exclusive: ಇತಿಹಾಸ ಸಾರುವ ಏಕಶಿಲಾ ಬೆಟ್ಟ; ಬಸದಿಗೆ ಪ್ರವಾಸಿಗರ ದಂಡು
ತುಮಕೂರು: ಹೊಯ್ಸಳರ, ಗಂಗರ ಕಾಲದ ಇತಿಹಾಸ ಸಾರುವ, ಜೈನ ಧರ್ಮದ ಪರಂಪರೆ ಕಟ್ಟಿಕೊಡುವ, ನಗರದಿಂದ ಕೇವಲ 10 ಕಿ.ಮೀ ದೂರದಲ್ಲಿರುವ ಏಕಶಿಲಾ ಬೆಟ್ಟ ಮಂದರಗಿರಿ (ಬಸದಿ ಬೆಟ್ಟ) ಪ್ರವಾಸಿಗರ ನೆಚ್ಚಿನ ತಾಣವಾಗಿ ಬದಲಾಗುತ್ತಿದೆ.
ರಾಜ್ಯ ಒಳಗೊಂಡಂತೆ ಗುಜರಾತ್, ಆಂಧ್ರಪ್ರದೇಶ, ತೆಲಂಗಾಣದಿಂದಲೂ ವೀಕ್ಷಣೆಗೆ ಜನ ಆಗಮಿಸುತ್ತಿದ್ದಾರೆ. ವಾರಾಂತ್ಯ, ಸರ್ಕಾರಿ ರಜೆ ದಿನಗಳಲ್ಲಿ ಪ್ರವಾಸಿಗರು ಸಾಲು ಸಾಲಾಗಿ ಬೆಟ್ಟ ಹತ್ತುವುದರಲ್ಲಿ ನಿರತರಾಗಿರುತ್ತಾರೆ. ಬೆಳಿಗ್ಗೆ ಸೂರ್ಯನ ಉದಯಕ್ಕೂ ಮುನ್ನವೇ ಮೆಟ್ಟಿಲು ಹತ್ತುತ್ತಾರೆ. 918 ಅಡಿ ಎತ್ತರದ ಬೆಟ್ಟದ ಮೇಲೆ ತಂಗಾಳಿಯಲ್ಲಿ ಕುಳಿತು, ನಿಸರ್ಗದ ವಿಸ್ಮಯ ಸವಿಯುತ್ತಾರೆ.
ಬಸದಿ ಬೆಟ್ಟ ತಾಲ್ಲೂಕಿನ ಪಂಡಿತನಹಳ್ಳಿಯ ಸಮೀಪವಿದೆ. ಬೆಂಗಳೂರಿನಿಂದ 65 ಕಿ.ಮೀ ದೂರದಲ್ಲಿರುವ ಬೆಟ್ಟಕ್ಕೆ ಉದ್ಯಮಿಗಳು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ವಾರದಲ್ಲಿ ಸುಮಾರು ನಾಲ್ಕೈದು ಸಾವಿರ ಜನ ವೀಕ್ಷಣೆಗೆ ಬರುತ್ತಿದ್ದಾರೆ. 918 ಅಡಿ ಎತ್ತರದ ಬೆಟ್ಟದ ಮೇಲೆ ಜಿನ ಮಂದಿರಗಳಿವೆ.
ಬೆಟ್ಟದ ತುದಿಗೆ ಹೋಗಲು 435 ಮೆಟ್ಟಿಲು ಮಾಡಲಾಗಿದೆ. ಜತೆಗೆ ವಾಹನ ಸಂಚಾರಕ್ಕೂ ರಸ್ತೆ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ 3 ವರ್ಷಗಳ ಹಿಂದೆ ಬಂಡೆಯ ಮೇಲೆ ಸಿ.ಸಿ ರಸ್ತೆ ಅಭಿವೃದ್ಧಿಪಡಿಸಿ, ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ. ಮೆಟ್ಟಿಲು ಹತ್ತಲು ಆಗದವರು ಸೀದಾ ವಾಹನಗಳಲ್ಲಿ ತೆರಳಿ ಜಿನ ಮಂದಿರ ವೀಕ್ಷಿಸಬಹುದು.
ಬೆಟ್ಟದ ಮೇಲೆ ನಿಂತು ನಾಲ್ಕು ದಿಕ್ಕುಗಳಲ್ಲಿ ನೋಡಿದರೆ ಎರಡು ಕಡೆ ತುಮಕೂರಿನ ಚಿತ್ರಣ, ಮತ್ತೊಂದು ಕಡೆ ಮೈದಾಳ ಕೆರೆಯ ಸೊಬಗು, ಇನ್ನೊಂದು ಕಡೆಯಲ್ಲಿ ಬೆಟ್ಟದ ಸಾಲು ಕಾಣಿಸುತ್ತದೆ. ಇಲ್ಲಿನ ಬಸದಿಗಳು, ಜಿನಾಲಯ, ಮಾನಸ್ತಂಭ, ಜೈನ ಶಿಲ್ಪಗಳು ಜೈನ ಧರ್ಮದ ಇತಿಹಾಸ ಪರಿಚಯಿಸುತ್ತವೆ. ಬೆಟ್ಟದ ಮೇಲೆ ಚಂದ್ರನಾಥ ತೀರ್ಥಂಕರ ಎರಡು ಬಸದಿ, ಪಾರ್ಶ್ವನಾಥ, ಸುಪಾರ್ಶ್ವನಾಥರ ತಲಾ ಒಂದು ಬಸದಿ ಸೇರಿ ಒಟ್ಟು ನಾಲ್ಕು ಬಸದಿಗಳಿವೆ. ಇಲ್ಲಿಯೇ ಹೊಯ್ಸಳರ ಕಾಲದ ಶಾಸನವೂ ಇದೆ.
ಬಸದಿ ಬೆಟ್ಟದ ಮೇಲೆ ಮಹಾವೀರ ತೀರ್ಥಂಕರರ ದಿವ್ಯಾಕಾಶ ಸಮವಸರಣ ಪ್ರತಿರೂಪವಿದೆ. ಇದು ಅತ್ಯಂತ ವಿಶೇಷವಾಗಿ ರೂಪುಗೊಂಡಿದೆ. ಧ್ಯಾನಸ್ಥ ಮುಖಭಾವ ಹೊಂದಿರುವ ನಾಲ್ಕು ಮಹಾವೀರ ತೀರ್ಥಂಕರರ ಮೂರ್ತಿಗಳನ್ನು ಇಲ್ಲಿ ಕೆತ್ತಲಾಗಿದೆ. ದೇಶದ ವಿವಿಧ ಭಾಗಗಳಲ್ಲಿರುವ ಕುಶಲಕರ್ಮಿಗಳು ಮೂರ್ತಿ ಕೆತ್ತನೆ ಮಾಡಿದ್ದಾರೆ.
ವೃತ್ತಾಕಾರದಲ್ಲಿರುವ ಸಮವಸರಣಕ್ಕೆ ನಾಲ್ಕು ದಿಕ್ಕಿನಲ್ಲೂ ದ್ವಾರಗಳಿವೆ. ಈ ಪ್ರತಿ ದ್ವಾರದ ಎದುರಿಗೆ ಮಾನಸ್ತಂಭ, ಮಧ್ಯದಲ್ಲಿ ಅಶೋಕ ವೃಕ್ಷದ ಮಾದರಿ ಇದೆ. ಇದು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.
ಪಿಂಚ ಆಕಾರದ ಗುರು ಮಂದಿರ
ಬೆಟ್ಟದ ಕೆಳಗಡೆ 81 ಅಡಿ ಎತ್ತರದ ಪಿಂಚ ಆಕಾರದ ಗುರು ಮಂದಿರ ಅಭಿವೃದ್ಧಿ ಪಡಿಸಿದ್ದು, ಜೈನ ತೀರ್ಥಂಕರ ಬದುಕಿನ ಶೈಲಿ ಪರಿಚಯಿಸುವ ಚಿತ್ರಗಳನ್ನು ಅಳವಡಿಸಲಾಗಿದೆ. ದಿಗಂಬರ ಜೈನ ಮುನಿಗಳು ಸದಾ ತಮ್ಮೊಂದಿಗೆ ಇಟ್ಟುಕೊಳ್ಳುವ ನವಿಲುಗರಿ ಮಾದರಿಯಲ್ಲಿ ಮಂದಿರ ನಿರ್ಮಿಸಲಾಗಿದೆ.
ಪ್ರವಾಸಿಗರು ಬೆಟ್ಟದ ಮೇಲೆ ಕುಳಿತು ಮೈದಾಳ ಕೆರೆಯ ಸೊಬಗು ಕಣ್ತುಂಬಿಕೊಳ್ಳುತ್ತಾರೆ. ಕುಟುಂಬದ ಸಮೇತ ಬಂದವರು ಜಿನ ಮಂದಿರ ವೀಕ್ಷಿಸಿ, ಕೆರೆ ಬಳಿ ಒಟ್ಟಿಗೆ ಕುಳಿತು ಊಟ ಮಾಡಿ ವಾಪಸ್ ತೆರಳುತ್ತಾರೆ.
ಬೇರೆ ಬೇರೆ ಕಡೆಗಳಿಂದ ಬರುವ ಪ್ರವಾಸಿಗರಿಗೆ ಇಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆ. ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆಗೆ ವಿಶಾಲವಾದ ಜಾಗದ ವ್ಯವಸ್ಥೆಯೂ ಇದೆ. ರಸ್ತೆಯ ಇಕ್ಕೆಲಗಳಲ್ಲಿ ಇರುವ ಗೂಡಂಗಡಿಗಳಲ್ಲಿ ತಿಂಡಿ– ತಿನಿಸು ಸಿಗುತ್ತದೆ.
‘ಪ್ರತಿ ಶನಿವಾರ ಮತ್ತು ಭಾನುವಾರ ಸುಮಾರು 500ರಿಂದ 600 ವಾಹನಗಳು ಮಂದರಗಿರಿಗೆ ಬರುತ್ತವೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. ಬೆಟ್ಟದ ಬಳಿಯ 30 ಎಕರೆ ಪ್ರದೇಶದಲ್ಲಿ ಮತ್ತಷ್ಟು ಮಂದಿರ, ಸುತ್ತಲೂ ಕಾಂಪೌಂಡ್ ನಿರ್ಮಿಸುವ ಗುರಿ ಇದೆ’ ಎಂದು ದಿಗಂಬರ ಜೈನ ಸಮಾಜದ ಅಧ್ಯಕ್ಷ ಟಿ.ಡಿ.ಬಾಹುಬಲಿ ಬಾಬು ಪ್ರತಿಕ್ರಿಯಿಸಿದರು.