ಈಜಿಪುರ ಮೇಲ್ಸೇತುವೆ: ಕಾಮಗಾರಿ ತ್ವರಿತಕ್ಕೆ ಮತ್ತೆ ಸೂಚನೆ

ಈಜಿಪುರ ಮೇಲ್ಸೇತುವೆ: ಕಾಮಗಾರಿ ತ್ವರಿತಕ್ಕೆ ಮತ್ತೆ ಸೂಚನೆ

ಈಜಿಪುರ ಮೇಲ್ಸೇತುವೆ: ಕಾಮಗಾರಿ ತ್ವರಿತಕ್ಕೆ ಮತ್ತೆ ಸೂಚನೆ

ಬೆಂಗಳೂರು: ‘ಈಜಿಪುರ ಮೇಲ್ಸೇತುವೆ ಕಾಮಗಾರಿಗೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಮತ್ತಷ್ಟು ವೇಗ ನೀಡಬೇಕು, ಆದಷ್ಟು ಬೇಗ ಕಾಮಗಾರಿಯನ್ನು ಪೂರ್ಣಗೊಳಿಸಬೇಕು’ ಎಂದು ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌ ಅವರು ಮತ್ತೆ ಸೂಚನೆ ನೀಡಿದರು.

ಮೇಲ್ಸೇತುವೆಯ ಪ್ರಗತಿಯನ್ನು ಬುಧವಾರ ಪರಿಶೀಲಿಸಿದ ಅವರು, ‘ಈಜಿಪುರ ಮೇಲ್ಸೇತುವೆಯ ಕೆಳಭಾಗದ ಸರ್ವಿಸ್ ರಸ್ತೆಯಲ್ಲಿರುವ ಪಾದಚಾರಿ ಮಾರ್ಗವು ಕಿರಿದಾಗಿದ್ದು, ಅದನ್ನು ವಿಸ್ತರಿಸಬೇಕು’ ಎಂದರು.

ಪಾದಚಾರಿ ಮಾರ್ಗ ನಿರ್ಮಿಸುವ ಸಂದರ್ಭದಲ್ಲಿ ಸೈಕಲ್ ಟ್ರ‍್ಯಾಕ್‌ ನಿರ್ಮಾಣ ಮಾಡಬೇಕು. ಅಲ್ಲಿ ದ್ವಿಚಕ್ರ ವಾಹನಗಳು ಪ್ರವೇಶವಾಗದಂತೆ ಸೂಕ್ತ ಮಾದರಿಯ ವಿನ್ಯಾಸ ಮಾಡಬೇಕು ಎಂದು ಬಿ–ಸ್ಮೈಲ್ ಮುಖ್ಯ ಎಂಜಿನಿಯರ್‌ ಅವರಿಗೆ ಸೂಚಿಸಿದರು.

ಲೋವರ್ ಅಗರಂ ಜಂಕ್ಷನ್‌ನಿಂದ ಈಜಿಪುರ ರಸ್ತೆಯವರೆಗೆ ಪ್ರಗತಿಯಲ್ಲಿರುವ 5.45 ಕಿ.ಮೀ. ಉದ್ದದ ಬಫರ್ ರಸ್ತೆ ಕಾಮಗಾರಿಗೆ ವೇಗ ನೀಡಬೇಕು. ರಸ್ತೆ ನಿರ್ಮಾಣದ ಸಂದರ್ಭದಲ್ಲಿ ಮಳೆ ನೀರು ವ್ಯರ್ಥವಾಗಿ ಹರಿದುಹೋಗದೆ ಭೂಮಿಗೆ ಇಂಗುವಂತೆ ಸೂಕ್ತ ವಿನ್ಯಾಸ ರೂಪಿಸುವಂತೆ ಅಧಿಕಾರಿಗಳಿಗೆ ಹೇಳಿದರು.

ಬಫರ್ ರಸ್ತೆಗೆ ಹೊಂದಿಕೊಂಡಂತಿರುವ ಎಸ್.ಟಿ ಬೆಡ್ ಕಾಲೋನಿ ತಗ್ಗು ಪ್ರದೇಶದಲ್ಲಿರುವುದರಿಂದ ಪ್ರವಾಹ ಉಂಟಾಗದಂತೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳನ್ನು ನಿರ್ಮಾಣ ಮಾಡಲು ತಿಳಿಸಿದರು.

ವೈಟ್‌ ಟಾಪಿಂಗ್‌: ಜಯನಗರದಲ್ಲಿ 22ನೇ ಕ್ರಾಸ್‌ನ ನಾಗಾರ್ಜುನದಿಂದ ಕೂಲ್ ಜಾಯಿಂಟ್‌ವರೆಗೆ 690 ಮೀಟರ್ ಉದ್ದದ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಬೇಕು. ಕ್ಯೂರಿಂಗ್ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಬೇಕು ಎಂದರು.

ದಕ್ಷಿಣ ನಗರ ಪಾಲಿಕೆ ಆಯುಕ್ತ ಕೆ.ಎನ್. ರಮೇಶ್, ಹೆಚ್ಚುವರಿ ಆಯುಕ್ತ ಡಾ. ನವೀನ್ ಕುಮಾರ್ ರಾಜು, ಮುಖ್ಯ ಎಂಜಿನಿಯರ್‌ಗಳಾದ ಬಸವರಾಜ್ ಕಬಾಡೆ, ಮಾದೇಶ್ ಉಪಸ್ಥಿತರಿದ್ದರು.

2017ರಲ್ಲಿ ಪ್ರಾರಂಭವಾಗಿದ್ದ ಕಾಮಗಾರಿ

ಈಜಿಪುರ ಮೇಲ್ಸೇತುವೆಯ ಕಾಮಗಾರಿಯನ್ನು ₹203.20 ಕೋಟಿ ವೆಚ್ಚದಲ್ಲಿ ನಿರ್ವಹಿಸಲು 2017ರ ಮೇ 4ರಂದು ಸಿಂಪ್ಲೆಕ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ಗೆ ವಹಿಸಲಾಗಿತ್ತು. 2.38 ಕಿ.ಮೀ. ಉದ್ದದ ಮೇಲ್ಸೇತುವೆ ಕಾಮಗಾರಿ 4 ವರ್ಷ 6 ತಿಂಗಳು ಕಳೆದರೂ ಶೇ 42.80ರಷ್ಟು ಭೌತಿಕ ಪ್ರಗತಿಯಾಗಿತ್ತು. ಒಟ್ಟು 762 ಸೆಗ್‌ಮೆಂಟ್‌ಗಳಲ್ಲಿ 191 (ಶೇ 25.07) ಮಾತ್ರ ನಿರ್ಮಾಣವಾಗಿದ್ದವು.

ನಾಲ್ಕು ಕ್ರೇನ್ ಮತ್ತು ಎರಡು ಲಾಂಚಿಂಗ್ ಗರ್ಡರ್‌ಗಳ ಬದಲು ಕೇವಲ ಎರಡು ಕ್ರೇನ್ ಮತ್ತು ಒಂದು ಲಾಂಚಿಂಗ್ ಗರ್ಡರ್ ಬಳಸಿ ಕಾಮಗಾರಿಯನ್ನು ನಿಧಾನಗೊಳಿಸಲಾಗಿತ್ತು. ಉಪ ಗುತ್ತಿಗೆದಾರರಿಗೆ ಹಣ ಪಾವತಿಸದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು.

ಹೈಕೋರ್ಟ್ ಆದೇಶದ ಮೇರೆಗೆ 2022ರ ಮಾರ್ಚ್ 9ರಂದು ‘ರಿಸ್ಕ್ ಆ್ಯಂಡ್‌ ಕಾಸ್ಟ್’ ಅಡಿಯಲ್ಲಿ ಗುತ್ತಿಗೆಯನ್ನು ರದ್ದುಪಡಿಸಲಾಯಿತು. ಮೇಲ್ಸೇತುವೆಯ ಬಾಕಿ ಕಾಮಗಾರಿ ಪೂರ್ಣಗೊಳಿಸಲು ₹250 ಕೋಟಿ ವೆಚ್ಚದಲ್ಲಿ ಬಿ.ಎಸ್.ಸಿ.ಪಿ.ಎಲ್ ಇನ್‌ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್‌ಗೆ 2023ರ ನವೆಂಬರ್ 17ರಂದು ಕಾರ್ಯಾದೇಶ ನೀಡಲಾಯಿತು. ಹಿಂದಿನ ಸರ್ಕಾರವನ್ನು ದೂಷಿಸಿದ್ದ ಜನಪ್ರತಿನಿಧಿಗಳು ಒಂದು ವರ್ಷದಲ್ಲಿ ಕಾಮಗಾರಿ ಮುಗಿಸುವುದಾಗಿ ಹೇಳಿದ್ದರು.

ಆದರೆ ಗುತ್ತಿಗೆ ಕಾರ್ಯಾದೇಶದಲ್ಲಿ 20 ತಿಂಗಳು ಅವಧಿ ನೀಡಲಾಗಿತ್ತು. ಅದರ ಪ್ರಕಾರ 2025ರ ಆಗಸ್ಟ್‌ಗೆ ಈಜಿಪುರ ಮೇಲ್ಸೇತುವೆ ವಾಹನಗಳಿಗೆ ಮುಕ್ತವಾಗಬೇಕಿತ್ತು. ಹಲವು ಗಡುವುಗಳ ನಂತರ ಈ ವರ್ಷದ ಅಂತ್ಯಕ್ಕೆ ಕಾಮಗಾರಿ ಮುಗಿಯಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ