
PV Web Exclusive: ಸಿಎಂ ಡಿಕೆಶಿ ಅತಿಯಾಗಿ ನಂಬುವ ಅಜ್ಜಯ್ಯರ ಶಕ್ತಿ ಎಂತದ್ದು?
ತುಮಕೂರು: ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವಾಗ ‘ವೀರ ಗಂಗಾಧರ ಅಜ್ಜಯ್ಯನ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’ ಎಂದು ಅಜ್ಜಯ್ಯರನ್ನು ಸ್ಮರಿಸಿದ್ದರು. ಇದಾದ ಬಳಿಕ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಹಾಗಾದರೆ ಡಿಕೆಶಿ ಅತಿಯಾಗಿ ನಂಬುವ ಆ ಅಜ್ಜಯ್ಯ ಯಾರು? ಪುರಾತನ ಮಠದ ಶಕ್ತಿ ಎಂತದ್ದು? ಎಂಬ ವಿವರ ಇಲ್ಲಿದೆ.
ತಿಪಟೂರು ತಾಲ್ಲೂಕಿನ ನೊಣವಿನಕೆರೆಯ ಸೋಮೆಕಟ್ಟೆ ಕಾಡಸಿದ್ದೇಶ್ವರ ಮಠಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದೆ. ಶತಮಾನಗಳಿಂದ ಅಗ್ರಗಣ್ಯ ಸ್ಥಾನದಲ್ಲಿ ಬೆಳಗಿದೆ. ಕಾಡಸಿದ್ಧೇಶ್ವರರು ನಂದಿಯ ಮೇಲೆ ಸಂಚಾರ ಮಾಡುತ್ತಿದ್ದರು. ನೊಣವಿನಕೆರೆಯ ದಕ್ಷಿಣ ಭಾಗದಲ್ಲಿರುವ ಕಾಡಿನಲ್ಲಿ ನೆಲೆಸಿದ್ದರು. ಅಲ್ಲಿಯೇ ಗವಿಯೊಂದನ್ನು ನಿರ್ಮಿಸಿಕೊಂಡು ಯೋಗಾಸನ ಮಾಡುತ್ತಿದ್ದರು.
ಇಲ್ಲಿಗೆ ಬೇಟೆಗಾಗಿ ಬಂದಿದ್ದ ಹಾಗಲವಾಡಿಯ ಅರಸ ಮುದಿಯಪ್ಪ ನಾಯಕ ಶ್ರೀಗಳನ್ನು ಮೃಗವೆಂದು ಭಾವಿಸಿ ಬಾಣದಿಂದ ಹೊಡೆದಿದ್ದರು. ಬಾಣ ಕಾಡಸಿದ್ದೇಶ್ವರರ ದೇಹವನ್ನು ಭೇದಿಸಿಕೊಂಡು ಹೋಗಿತ್ತು. ಮುದಿಯಪ್ಪ ನಾಯಕ ಶ್ರೀಗಳಲ್ಲಿ ಕ್ಷಮೆ ಕೋರಿ, ಅವರ ಅನುಗ್ರಹ ಪಡೆದಿದ್ದರು ಎಂಬ ಪ್ರತೀತಿ ಇದೆ.
‘ಇಪ್ಪತ್ತು ಅಂಕಣದ ಮಠ, ಮುಂಭಾಗದಲ್ಲಿ ಸಣ್ಣ ಗದ್ದುಗೆ ಕಟ್ಟಿಸುವಂತೆ’ ಶ್ರೀಗಳು ಅಪ್ಪಣೆ ಇಟ್ಟಿದ್ದರು. ಅದರಂತೆ ಮುದಿಯಪ್ಪ ನಾಯಕ ಮಠ ನಿರ್ಮಿಸಿದ್ದರು ಎಂಬ ಮಾತುಗಳು ಆಗಾಗ ಜನರ ಚರ್ಚೆಗೆ ಬರುತ್ತವೆ. ಕಾಡಿನಲ್ಲಿ ಇದ್ದುದರಿಂದ ಕಾಡಸಿದ್ದೇಶ್ವರ ಮಠವೆಂದು ಹೆಸರಾಯಿತು ಎಂಬ ನಂಬಿಕೆಯೂ ಜನರಲ್ಲಿ ಮನೆ ಮಾಡಿದೆ. ದಿನೇದಿನೇ ಮಠಕ್ಕೆ ಬರುವ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಈಗಿರುವ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ 1985ರಿಂದ ಪೀಠಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಾಕ್‌ಸಿದ್ಧಿ ಪಡೆದಿದ್ದು, ಜ್ಯೋತಿಷ್ಯದಲ್ಲೂ ಉತ್ತಮ ಜ್ಞಾನ ಸಂಪಾದಿಸಿದ್ದಾರೆ. ಸ್ವಾಮೀಜಿ ತಿಳಿಸಿದಂತೆ ಪಾಲನೆ ಮಾಡಿದರೆ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ ಎಂಬ ಪ್ರತೀತಿಯೂ ಇದೆ.
ರಾಜ್ಯದ ವಿವಿಧ ಭಾಗಗಳಲ್ಲಿ ಇರುವ ರಾಜಕಾರಣಿಗಳು, ಉದ್ಯಮಿಗಳು, ವ್ಯಾಪಾರಸ್ಥರು ಸ್ವಾಮೀಜಿ ಭೇಟಿಗಾಗಿ ಮಠಕ್ಕೆ ಬರುತ್ತಾರೆ. ಪೂಜೆಯಲ್ಲಿ ಭಾಗವಹಿಸುತ್ತಾರೆ. ಸ್ವಾಮೀಜಿ ತಿಳಿಸಿದಂತೆ ನಡೆದುಕೊಳ್ಳುತ್ತಾರೆ. ತಮ್ಮ ಕಷ್ಟ– ಕಾರ್ಪಣ್ಯಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ.
ಡಿ.ಕೆ.ಶಿವಕುಮಾರ್ ಮತ್ತು ಮಠದ ನಂಟು 25 ವರ್ಷಗಳಷ್ಟು ಹಳೆಯದ್ದು. 2023ರಲ್ಲಿ ಕಾಂಗ್ರೆಸ್ ಭಾರಿ ಬಹುಮತ ಪಡೆದಾಗಲೂ ಡಿಕೆಶಿ ಮಠಕ್ಕೆ ಭೇಟಿ ನೀಡಿದ್ದರು. ರಾಜ್ಯದ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಚರ್ಚೆ ಜೋರಾಗಿದ್ದ ಸಮಯದಲ್ಲಿ ಅಜ್ಜಯ್ಯರ ಆಶೀರ್ವಾದ ಪಡೆದಿದ್ದರು.
‘ಮಠದ ಅಜ್ಜಯ್ಯ ಮಾನಸಿಕವಾಗಿ ಶಕ್ತಿ, ಹಣ, ಅಂತಸ್ತು, ಅಧಿಕಾರ ಎಲ್ಲವನ್ನೂ ಕೊಟ್ಟಿದ್ದಾರೆ. ಕೇಳಿದ್ದೆಲ್ಲವನ್ನೂ ನೀಡಿದ್ದಾರೆ’ ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದರು.
ಈ ಹಿಂದೆ ಜೈಲಿನಿಂದ ಬಿಡುಗಡೆಯಾದಾಗ ಮಠಕ್ಕೆ ಭೇಟಿ ಕೊಟ್ಟಿದ್ದರು. ‘ನಿಮ್ಮ ಕಷ್ಟಗಳೆಲ್ಲ ಬಂಡೆಯಂತೆ ಕರಗಿ, ಸಿಎಂ ಆಗ್ತೀರಿ’ ಅಂತ ಅಜ್ಜಯ್ಯ ಭವಿಷ್ಯ ನುಡಿದಿದ್ದರು ಎಂಬ ಮಾತು ಆಗ ಚರ್ಚೆಗೆ ಬಂದಿತ್ತು. ಅದರಂತೆ ಈಗ ಡಿಕೆಶಿ ಮುಖ್ಯಮಂತ್ರಿ ಗಾದಿಗೆ ಏರಿದ್ದಾರೆ.