ಚಿಕ್ಕಮಗಳೂರು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಗೆ ಮಕ್ಕಳ ಕೊರತೆ

ಚಿಕ್ಕಮಗಳೂರು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಗೆ ಮಕ್ಕಳ ಕೊರತೆ

ಚಿಕ್ಕಮಗಳೂರು ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಗೆ ಮಕ್ಕಳ ಕೊರತೆ

ಚಿಕ್ಕಮಗಳೂರು: ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ಸೆಳೆಯಲು ಆರಂಭವಾಗಿರುವ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ(ಎಲ್‌ಕೆಜಿ, ಯುಕೆಜೆ) ಮಕ್ಕಳ ಕೊರತೆ ಎದುರಾಗಿದೆ. 33 ಶಾಲೆಗಳ ಎಲ್‌ಕೆಜಿಗೆ ಮಕ್ಕಳ ದಾಖಲಾತಿಯೇ ಇಲ್ಲವಾಗಿದೆ.

ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಪೋಷಕರ ಪ್ರವೃತ್ತಿ ಹೆಚ್ಚುತ್ತಿರುವ ಕಾರಣದಿಂದ ಸರ್ಕಾರಿ ಶಾಲೆಗಳಲ್ಲಿಯೇ ಪೂರ್ವ ಪ್ರಾಥಮಿಕ ಶಿಕ್ಷಣ ಒದಗಿಸುವ ಕಾರ್ಯಕ್ರಮವನ್ನು ಶಿಕ್ಷಣ ಇಲಾಖೆ ರೂಪಿಸಿತು. ಎಲ್‌ಕೆಜಿ ಹಂತದಿಂದಲೇ ಮಕ್ಕಳನ್ನು ಸೆಳೆಯಲು ಪ್ರಯತ್ನ ಮಾಡಿತು. ಆದರೆ, ಕೆಲವು ಶಾಲೆಗಳಲ್ಲಿ ಎಲ್‌ಕೆಜಿಗೆ ಪ್ರವೇಶ ಪಡೆಯುವ ಮಕ್ಕಳೇ ಇಲ್ಲವಾಗಿದ್ದಾರೆ. ಇನ್ನೂ ಹಲವು ಶಾಲೆಗಳಲ್ಲಿ ಬೆಳರೆಣಿಕೆಯಷ್ಟು ಮಕ್ಕಳಿದ್ದಾರೆ.

ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗಿದೆ. ಖಾಸಗಿ ಶಾಲೆಗಳಲ್ಲಿ ಉತ್ತಮ ಮೂಲಸೌಕರ್ಯ, ಇಂಗ್ಲಿಷ್‌ ಮಾಧ್ಯಮ, ಪೂರ್ವ ಪ್ರಾಥಮಿಕ ಹಂತದಿಂದಲೇ ಶೈಕ್ಷಣಿಕ ಚಟುವಟಿಕೆ ಸೇರಿ ವಿವಿಧ ಸೌಲಭ್ಯಗಳು ಪೋಷಕರನ್ನು ಆಕರ್ಷಿಸುತ್ತಿವೆ. ಹೀಗಾಗಿ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಿದರೂ ದಾಖಲಾತಿ ಹೆಚ್ಚಾಗುತ್ತಿಲ್ಲ ಎನ್ನುತ್ತಾರೆ ಪೋಷಕರು.

ಮಕ್ಕಳ ಸ್ನೇಹಿ ವಾತಾವರಣ, ಗುಣಮಟ್ಟದ ಬೋಧನೆ, ಆಟದ ಮೂಲಕ ಕಲಿಕೆ ಮತ್ತು ಪೋಷಕರ ವಿಶ್ವಾಸ ಗಳಿಸುವ ಕೆಲಸ ಆಗಬೇಕಿದೆ. ಕೆಲ ಸರ್ಕಾರಿ ಶಾಲೆಗಳು ಯಶಸ್ಸು ಕಂಡಿವೆ. ಮನೆ ಮನೆಗೆ ತೆರಳಿ ಪೋಷಕರ ಮನವೊಲಿಸಿ ಮಕ್ಕಳ ಸಂಖ್ಯೆ ಹೆಚ್ಚಿರುವ ಉದಾಹರಣೆಗಳು ಇವೆ.

ಜಿಲ್ಲೆಯಲ್ಲಿ ಈವರೆಗೆ 176 ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿ ಆರಂಭಿಸಲು ಸರ್ಕಾರ ಅನುಮೋದನೆ ನೀಡಿದೆ. ಆದರೆ, ಪ್ರಸಕ್ತ ಸಾಲಿನಲ್ಲಿ 143 ಶಾಲೆಗಳಲ್ಲಿ ಮಕ್ಕಳ ದಾಖಲಾತಿಯಾಗಿದೆ. ಎಲ್‌ಕೆಜಿಗೆ 2,079 ಮಕ್ಕಳು ದಾಖಲಾಗಿದ್ದರೆ, 143 ಶಿಕ್ಷಕರನ್ನು ನೇಮಕ ಮಾಡಲಾಗಿದೆ. ಯುಕೆಜಿಗೆ 1,814 ಮಕ್ಕಳು ದಾಖಲಾಗಿದ್ದು, 74 ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಉಳಿದ ಶಾಲೆಗಳಲ್ಲಿ ಮಕ್ಕಳೂ ಇಲ್ಲ, ಶಿಕ್ಷಕರೂ ಇಲ್ಲದೆ ಖಾಲಿ ಇವೆ.

ಅತಿಥಿ ಶಿಕ್ಷಕರಿಗೂ ಅಭದ್ರತೆ

10 ತಿಂಗಳ ಅವಧಿಗೆ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗುತ್ತಿದ್ದು, ಉದ್ಯೋಗ ಭದ್ರತೆ ಇಲ್ಲದ ಕಾರಣ ಶಿಕ್ಷಕರು ಕೂಡ ಆಸಕ್ತಿ ಕಳೆದುಕೊಳ್ಳುವಂತಾಗಿದೆ.

ಮುಂದಿನ ವರ್ಷಕ್ಕೆ ಅದೇ ಶಿಕ್ಷಕರನ್ನು ಮುಂದುವರಿಸುವುದಿಲ್ಲ. ಹೊಸದಾಗಿ ಅರ್ಜಿ ಆಹ್ವಾನಿಸಿ ನೇಮಕ ಮಾಡಿಕೊಳ್ಳಲಾಗುತ್ತದೆ. 20 ಮಕ್ಕಳಿಗಿಂತ ಕಡಿಮೆ ಇದ್ದರೆ, ಅಂತಹ ಶಾಲೆಗಳ ಅತಿಥಿ ಶಿಕ್ಷಕರಿಗೆ ಸಂಬಳ ಕೊಡಲು ಅವಕಾಶ ಇಲ್ಲ. ಕೆಲಸ ಮಾಡಿಯೂ ಸಂಬಳಕ್ಕಾಗಿ ಪರದಾಡಬೇಕಾಗುತ್ತದೆ. ಈ ಕಾರಣದಿಂದ ಅತಿಥಿ ಶಿಕ್ಷಕರು ಕೂಡ ಮಕ್ಕಳಿಗೆ ಅಕ್ಷರ ಕಲಿಸಲು ಆಸಕ್ತಿ ವಹಿಸುವುದಿಲ್ಲ ಎಂದು ಪೋಷಕರು ಬೇಸರ ವ್ಯಕ್ತಪಡಿಸುತ್ತಾರೆ.

ಸರ್ಕಾರ ನಾಮಕಾವಸ್ತೆಗೆ ಪೂರ್ವ ಪ್ರಾಥಮಿಕ ಶಾಲೆಗಳನ್ನು ತೆರೆದರೆ ಪ್ರಯೋಜನವಿಲ್ಲ. ಖಾಸಗಿ ಶಾಲೆಗಳನ್ನು ಮೀರಿಸುವಂತೆ ಸೌಕರ್ಯ, ಗುಣಮಟ್ಟದ ಶಿಕ್ಷಣ ನೀಡಿದರೆ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೇ ಸೇರಿಸುತ್ತಾರೆ ಎಂಬುದು ಅವರ ಅಭಿಪ್ರಾಯ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-126-1507933797

Post a Comment

If u have any queries, Please let us know

Previous Post Next Post
ಜಿಲ್ಲೆ
ಉಡುಪಿ, ಉತ್ತರ ಕನ್ನಡ ಇತ್ಯಾದಿ
ಉಡುಪಿ ಉತ್ತರ ಕನ್ನಡ ಕಲಬುರಗಿ ಕೊಡಗು ಕೊಪ್ಪಳ ಕೋಲಾರ ಗದಗ ಚಾಮರಾಜನಗರ ಚಿಕ್ಕಬಳ್ಳಾಪುರ
ಚಿಕ್ಕಮಗಳೂರು ಚಿತ್ರದುರ್ಗ ತುಮಕೂರು ದಕ್ಷಿಣ ಕನ್ನಡ ದಾವಣಗೆರೆ ಧಾರವಾಡ ಬಳ್ಳಾರಿ ಬಾಗಲಕೋಟೆ ಬೀದರ್
ಬೆಳಗಾವಿ ಬೆಂಗಳೂರು ಬೆಂಗಳೂರು ಗ್ರಾಮಾಂತರ ಮೈಸೂರು ಮಂಡ್ಯ ಯಾದಗಿರಿ ರಾಮನಗರ ರಾಯಚೂರು ವಿಜಯನಗರ
ಶಿವಮೊಗ್ಗ ಹಾವೇರಿ ವಿಜಯಪುರ ಹಾಸನ