
ಕೆಎಂಡಿಸಿ ಯೋಜನೆ: ಸಾಲ ಮರುಪಾವತಿಗೆ ಹಿನ್ನಡೆ
ಹುಬ್ಬಳ್ಳಿ: ರಾಜ್ಯ ಸರ್ಕಾರ ಸಾಲಮನ್ನಾ ಮಾಡುವುದು ಎಂಬ ಫಲಾನುಭವಿಗಳ ತಪ್ಪು ತಿಳಿವಳಿಕೆಯಿಂದ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ಕೆಎಂಡಿಸಿ) ಸಂಕಷ್ಟಕ್ಕೆ ಸಿಲುಕಿದೆ. ಧಾರವಾಡ ಜಿಲ್ಲೆಯೊಂದರಲ್ಲೇ ₹20.93 ಕೋಟಿ ಸಾಲ ಮರುಪಾವತಿ ಬಾಕಿಯಿದೆ.
ಕೆಎಂಡಿಸಿಯು ಮುಸ್ಲಿಂ, ಕ್ರೈಸ್ತ, ಜೈನ್, ಪಾರ್ಸಿ, ಬೌದ್ಧ ಹಾಗೂ ಸಿಖ್ ಸಮುದಾಯದ ಫಲಾನುಭವಿಗಳಿಗೆ ಅರಿವು ಶಿಕ್ಷಣ ಸಾಲ, ಸ್ವಾವಲಂಬಿ ಸಾರಥಿ, ಶ್ರಮಶಕ್ತಿ, ವ್ಯಾಪಾರ ಸಾಲ, ಭೂಮಿ ಖರೀದಿ ಸೇರಿ ವಿವಿಧ ಯೋಜನೆಗಳಡಿ 2013–14ರಿಂದ 2018–19ರ ಅವಧಿಯಲ್ಲಿ 7,463 ಫಲಾನುಭವಿಗಳಿಗೆ ಒಟ್ಟು ₹23.97 ಕೋಟಿ ಸಾಲ ಬಿಡುಗಡೆ ಮಾಡಿದೆ. ಆದರೆ, ಇದರಲ್ಲಿ ₹3 ಕೋಟಿ ಮಾತ್ರ ಪಾವತಿಯಾಗಿದೆ.
‘ಒಂದು ಬಾರಿ ಪರಿಹಾರ (ಒಟಿಎಸ್) ಜಾರಿಯಾದ ಮೂರೂವರೆ ತಿಂಗಳಾದರೂ ₹29.32 ಲಕ್ಷ ಮಾತ್ರ ಮರುಪಾವತಿ ಆಗಿದೆ. ಸಾಲ ಪಡೆದ ಫಲಾನುಭವಿಗಳಿಗೆ ನೋಟಿಸ್ ನೀಡಲಾಗಿದೆ. ಮನೆ–ಮನೆಗೆ ಭೇಟಿ ನೀಡಿ, ಸಾಲ ತುಂಬುವಂತೆ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ. ಆದರೂ, ಪ್ರಯೋಜನವಾಗುತ್ತಿಲ್ಲ. ಇನ್ನೂ ಒಂದು ವರ್ಷದ ಕಾಲಾವಕಾಶ ಕೇಳುತ್ತಿದ್ದಾರೆ’ ಎಂದು ನಿಗಮದ ಅಧಿಕಾರಿಗಳು ಹೇಳುತ್ತಾರೆ.
‘ಸಾಲದ ಮರುಪಾವತಿ ಮಾಡಿಕೊಳ್ಳಲು ಒಟಿಎಸ್ ಯೋಜನೆ ಜಾರಿ ಮಾಡಲಾಗಿದೆ. ಆಗಸ್ಟ್ 30ರವರೆಗೆ ಸಾಲ ಮರುಪಾವತಿಗೆ ಅವಕಾಶವಿದೆ. ಈ ಅವಧಿಯಲ್ಲಿ ಅಸಲು ತುಂಬಿದ ಫಲಾನುಭವಿಗಳ ಬಡ್ಡಿ ಮನ್ನಾ ಮಾಡಲಾಗುವುದು’ ಎಂದು ನಿಗಮದ ಜಿಲ್ಲಾ ವ್ಯವಸ್ಥಾಪಕ ಅಕ್ಬರಸಾಬ ಕುರ್ತಕೋಟಿ ತಿಳಿಸಿದರು.
ಯೋಜನೆವಾರು ಸಾಲದ ವಿವರ ಯೋಜನೆ;ವಿತರಣೆಯಾದ ಸಾಲದ ಮೊತ್ತಪಶು ಭಾಗ್ಯ;₹38 ಲಕ್ಷಅರಿವು ಶಿಕ್ಷಣ ಸಾಲ;₹10.94 ಕೋಟಿಕ್ರಿಶ್ಚಿಯನ್ ಅರಿವು;₹30.74 ಲಕ್ಷಕ್ರಿಶ್ಚಿಯನ್ ಕಿರು ಸಾಲ;₹44.27 ಲಕ್ಷಕ್ರಿಶ್ಚಿಯನ್ ಶ್ರಮಶಕ್ತಿ;₹1.02 ಕೋಟಿಕಿರು ಸಾಲ ಯೋಜನೆ;₹4.23 ಕೋಟಿರೈತ ಕಲ್ಯಾಣ ಯೋಜನೆ;₹37.96 ಲಕ್ಷವ್ಯಾಪಾರ ಸಾಲ;₹26.12 ಲಕ್ಷಶ್ರಮಶಕ್ತಿ ಸಾಲ;₹3.85 ಕೋಟಿಸ್ವಾವಲಂಬಿ ಯೋಜನೆ;₹2.11 ಕೋಟಿಒಟ್ಟು; 23.97 ಕೋಟಿ
ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260828-24-1255057306