
Property: ಬೆಂಗಳೂರು, ಮಂಗಳೂರು & ಮೈಸೂರಲ್ಲಿ ಪ್ರಾಪರ್ಟಿ ಭಾರೀ ದುಬಾರಿ, ರಿಯಲ್ ಎಸ್ಟೇಟ್ ಬೂಸ್ಟ್‌ಗೆ ಕಾರಣವೇನು
Property: ಬೆಂಗಳೂರಿನಲ್ಲಿ ಮನೆ ಖರೀದಿ ಮಾಡುವುದು ಇದೀಗ ಕನಸಿನ ಮಾತು ಎನ್ನುವಂತೆಯೇ ಆಗಿದೆ. ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿ ಹಾಗೂ ಪ್ರಾಪರ್ಟಿಗೆ ಚಿನ್ನದ ಬೆಲೆ ಇದೆ. ಅಲ್ಲದೆ ಇದೀಗ ಬಿಡದಿ ಟೌನ್‌ಶಿಪ್ ನಿರ್ಮಾಣ ಯೋಜನೆ ಸೇರಿದಂತೆ ವಿವಿಧ ಪ್ರಮುಖ ಯೋಜನೆಗಳು ಹಾಗೂ ಬೆಂಗಳೂರಿನ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಸೇರಿದಂತೆ ವಿವಿಧ ಕಾರಣಗಳಿಗೆ ರಿಯಲ್ ಎಸ್ಟೇಟ್‌ಗೆ ಬೂಸ್ಟ್ ಸಿಕ್ಕಂತೆ ಆಗಿದೆ.
ಇದೀಗ ಬೆಂಗಳೂರಿನಲ್ಲಿ ಭೂಮಿ ಹಾಗೂ ಪ್ರಾಪರ್ಟಿಯ ಬೆಲೆಯು ಎಷ್ಟು ಹೆಚ್ಚಾಗಿದೆ ಎಂದರೆ, ಮಧ್ಯಮ ವರ್ಗದವರು ಪ್ರಾಪರ್ಟಿ ಖರೀದಿ ಮಾಡಲು ಸಾಧ್ಯವೇ ಇಲ್ಲ ಎನ್ನುವಷ್ಟು ಭೂಮಿಯ ಬೆಲೆ ಇದೆ. ಭಾರತದಾದ್ಯಂತ ವಿಶೇಷವಾಗಿ ದೇಶದ ಐಟಿ ಕೇಂದ್ರವಾದ ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಬೆಲೆಗಳು ಅತಿ ಹೆಚ್ಚಿನ ಮಟ್ಟದಲ್ಲಿ ಏರಿಕೆ ಕಂಡಿವೆ. ಈಚೆಗೆ ವ್ಯಕ್ತಿಯೊಬ್ಬರು ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರಿನಲ್ಲಿ ಪ್ರಾಪರ್ಟಿ ಖರೀದಿ ಮಾಡುವ ವಿಚಾರಕ್ಕೆ ಮಾಡಿರುವ ಪೋಸ್ಟ್ ವೈರಲ್ ಆಗಿದೆ.
ನಗರದಲ್ಲಿ ಆಸ್ತಿಯನ್ನು ಖರೀದಿಸುವುದು ದೊಡ್ಡ ಕೆಲಸಗಳಲ್ಲಿ ಇರುವವರಿಗೂ ಸಾಧ್ಯವಾಗುತ್ತಿಲ್ಲ. ಟೆಕ್ ಉದ್ಯೋಗಿಗಳಿಗೆ ಆದಾಯ ಉತ್ತಮವಾಗಿದ್ದರೂ ಸಹ ಜನರು ಇನ್ನೂ ಪ್ರಾಪರ್ಟಿ ಖರೀದಿ ಮಾಡುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಶಂಕರ್ ವಾನ್ ಎನ್ನುವವರು ಪೋಸ್ಟ್ ಮಾಡಿದ್ದಾರೆ.
ಇಷ್ಟೇ ಅಲ್ಲದೆ ಬೆಂಗಳೂರಿನಲ್ಲಿ ಪ್ರಾಪರ್ಟಿ ದುಬಾರಿ ಆಗುತ್ತಿರುವುದಕ್ಕೆ ಕಾರಣವೇನು ಹಾಗೂ ಪ್ರಾಪರ್ಟಿ ಯಾಕೆ ಖರೀದಿಸಲು ಸಾಧ್ಯವಾಗುತ್ತಿಲ್ಲ ಎನ್ನುವ ಬಗ್ಗೆಯೂ ಅವರು ವಿವರಿಸಿದ್ದಾರೆ. ಬೆಂಗಳೂರಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಾಪರ್ಟಿ ಬೆಲೆಯು ಭಾರೀ ಹೆಚ್ಚಳವಾಗಿದೆ ಎಂದು ಅವರು ವಿವರಿಸಿದ್ದಾರೆ. 2026ರಲ್ಲಿ ಬೆಂಗಳೂರಿನಲ್ಲಿ ಮನೆ ಖರೀದಿಸುವುದು ಗುರಿಯಾಗಿದರೆ, ಜ್ವರದಂತೆ ಭಾಸವಾಗುತ್ತದೆ. ಯಾವುದೇ ಉತ್ತಮ ಪ್ರದೇಶದಲ್ಲಿ ಯೋಗ್ಯವಾದ 2BHK ಮನೆಯ ಬೆಲೆಯು ಬರೋಬ್ಬರಿ 1.4-1.8 ಕೋಟಿ ರೂಪಾಯಿಯ ವರೆಗೂ ಇದೆ. ಅಲ್ಲದೆ ಈ ರೀತಿ ಮನೆ ಖರೀದಿ ಮಾಡಬೇಕು ಎಂದಾದರೆ, 1 ಕೋಟಿ ರೂಪಾಯಿಗಿಂತಲೂ ಕಡಿಮೆ ಬೆಲೆಯ ಮನೆಗಳು ಬೆಂಗಳೂರು ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ತೀರ ಅಪರೂಪ ಎನ್ನುವಂತೆ ಆಗಿದೆ.
ಈ ರೀತಿ ದುಬಾರಿ ಮನೆ ಖರೀದಿ ಮಾಡುವುದು ಹಲವರಿಗೆ ಕನಸಾಗಿಯೇ ಉಳಿದಿದೆ. ಇಎಂಐಗಳು 80,000 ಸಾವಿರದಿಂದ 1.1 ಲಕ್ಷ ರೂಪಾಯಿ ನಡುವೆ ಇದೆ. ಇದು ಅವರ ಸಂಬಳದ ದೊಡ್ಡ ಭಾಗವನ್ನು ನುಂಗುತ್ತದೆ. ಇಂದಿನ ಕಾಲದವರ ಈ ಹಿಂದಿನ ತಲೆಮಾರಿಗಿಂತಲು ಹೆಚ್ಚು ದುಡಿಯುತ್ತಿದ್ದಾರೆ. ಆದರೆ, ಮನೆ ಖರೀದಿ ಮಾಡಬೇಕು ಎನ್ನುವುದು ಇದೀಗ 10 ವರ್ಷಗಳ ಹಿಂದಿಗಿಂತ ಈಗ ಹೆಚ್ಚು ಕಷ್ಟವಾಗಿದೆ. ಆದಾಯ ಹೆಚ್ಚಾಗುತ್ತಿದ್ದರೂ, ಆಸ್ತಿ ಬೆಲೆಗಳು ಅದಕ್ಕಿಂತ ವೇಗವಾಗಿ ಏರುತ್ತಿವೆ. ಹೀಗಾಗಿ ಮನೆ ಖರೀದಿಸುವ ಕನಸು ವರ್ಷದಿಂದ ವರ್ಷಕ್ಕೆ ದೂರವಾಗುತ್ತಿದೆ ಎಂದಿದ್ದಾರೆ.
Property: ನೆಟ್ಟಿಗರು ಹೇಳಿದ್ದೇನು
ಇನ್ನು ಬೆಂಗಳೂರು ಮಾತ್ರವಲ್ಲ ಕರ್ನಾಟಕದ ವಿವಿಧ ಭಾಗಗಳಲ್ಲಿ ಪ್ರಾಪರ್ಟಿ ಬೆಲೆ ಹೆಚ್ಚಾಗುತ್ತಿದೆ ಎಂದು ಹಲವು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರು ಬಿಡಿ ಮೈಸೂರಿನಲ್ಲೂ ಪ್ರಾಪರ್ಟಿಗಳ ಬೆಲೆ ಹೆಚ್ಚಾಗಿದೆ. ಮೈಸೂರಿನ ಹೃದಯಭಾಗದಲ್ಲಿ 1 ಕೋಟಿ ರೂ.ಗೆ 2BHK ಮನೆ ಸಿಗಲ್ಲ, ಇನ್ನು ಬೆಂಗಳೂರಿನಲ್ಲಿ ಹೇಗೆ ಸಾಧ್ಯ ಎಂದಿದ್ದಾರೆ. ಅನೇಕ NRIಗಳು ಬೆಂಗಳೂರಿನ ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಬೆಲೆ ಏರಿಕೆಗೆ ಅದೇ ಕಾರಣ ಎಂದು ಕೆಲವರು ಹೇಳಿದ್ದಾರೆ.
ನೀವು ಬೆಂಗಳೂರಿನ ಬಗ್ಗೆ ಮಾತನಾಡುತ್ತಿದ್ದೀರಾ? ಮಂಗಳೂರಿನಂತಹ ಟಯರ್ 2 ಸಿಟಿಯಲ್ಲೂ ಈಗ 3 ಕೋಟಿ ರೂ.ಗಳಿಂದ ಪ್ರಾರಂಭವಾಗುವ ಫ್ಲಾಟ್‌ಗಳಿವೆ. 1 ಕೋಟಿ ರೂ.ಗಳ ಫ್ಲಾಟ್‌ಗಳು ಈಗ ಕನಿಷ್ಠ ಸೌಲಭ್ಯಗಳು ಸಹ ಕಾಣಿಸುತ್ತಿಲ್ಲ ಎಂದು ಮತ್ತೊಬ್ಬ ನೆಟ್ಟಿಗರು ಹೇಳಿದ್ದಾರೆ.